‘ಮುಂದಿನ ಜಾತ್ರೆಗೆ ಅತ್ತೆ ಸಾಯಲಿ’; ದೇವರ ಹುಂಡಿಯಲ್ಲಿ ಪತ್ತೆಯಾಯ್ತು ವಿಚಿತ್ರ ಹರಕೆ ಚೀಟಿ!

ಬೆಳಗಾವಿ: ಮುಗಳಖೋಡ ಪಟ್ಟಣ ಸಮೀಪದ ಖಣದಾಳ ಗ್ರಾಮದ ಹುಲಿಕಾಂತೇಶ್ವರ ದೇವರ ಹುಂಡಿಯಲ್ಲಿ ವಿಚಿತ್ರ ಹರಕೆಯ ಚೀಟಿಯೊಂದು ಪತ್ತೆಯಾಗಿದೆ. ಕಾಗದದ ಮೇಲೆ ‘ದೇವರೇ ನನ್ನ ಕಷ್ಟ ದೂರ ಮಾಡಿ, ಮುಂದಿನ ಜಾತ್ರೆಯೊಳಗೆ ನನ್ನ ಅತ್ತೆ ಸಾಯಲಿ’ ಎಂಬ ಹರಕೆ ಬರೆದು, ಅದಕ್ಕೆ 100ರ ನೋಟು ಅಂಟಿಸಿ ಹುಂಡಿಗೆ ಹಾಕಿದ್ದಾರೆ.

ಸದ್ಯ ಈ ಹರಕೆ ಚೀಟಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಖಣದಾಳದ ಹುಲಿಕಾಂತೇಶ್ವರ ಜಾತ್ರೆ ಫೆ.13ರಿಂದ 17ರವರೆಗೆ ಜರುಗಿದೆ. ಬಳಿಕ ದೇವಸ್ಥಾನ ಸಮಿತಿಯವರು ಹುಂಡಿ ಎಣಿಕೆ ಮಾಡಿದ್ದು, ಈ ವೇಳೆ ವಿಚಿತ್ರ ಹರಕೆಯ ಚೀಟಿ ಪತ್ತೆಯಾಗಿದೆ. ಇದನ್ನು ಸೊಸೆ ಬರೆದಿದ್ದಾಳೋ, ಅಳಿಯ ಬರೆದಿದ್ದಾನೋ ಗೊತ್ತಿಲ್ಲ. ಇದೇ ಮೊದಲಬಾರಿಗೆ ಇಂಥ ವಿಚಿತ್ರ ಮನಸ್ಥಿತಿಯ ಚೀಟಿ ಹುಂಡಿಯಲ್ಲಿ ಸಿಕ್ಕಿದೆ’ ಎಂದು ಹುಲಿಕಾಂತೇಶ್ವರ ಕಮಿಟಿ ಅಧ್ಯಕ್ಷ ರಾಮಕೃಷ್ಣ ದಳವಾಯಿ ತಿಳಿಸಿದ್ದಾರೆ.