“ನನ್ನ ಸೈಜ್ ಹೆಲ್ಮೆಟ್ ಸಿಗುತ್ತಿಲ್ಲ”: ಇಂದೋರ್ ಪೊಲೀಸರ ಮುಂದೆ ಬೈಕ್ ಸವಾರನ ಪ್ರಾಮಾಣಿಕ ಅಳಲು

ಮಧ್ಯಪ್ರದೇಶ : ಇಂದೋರ್ನಲ್ಲಿ ಸಂಚಾರಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ನಡೆದ ಒಂದು ವಿಶಿಷ್ಟ ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ರಸ್ತೆಯಲ್ಲಿ ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಸವಾರನನ್ನು ಪೊಲೀಸರು ತಡೆದು ನಿಲ್ಲಿಸಿ ದಂಡ ವಿಧಿಸಲು ಮುಂದಾದಾಗ, ಆ ವ್ಯಕ್ತಿ ನೀಡಿದ ಉತ್ತರ ಪೊಲೀಸರನ್ನೇ ಒಂದು ಕ್ಷಣ ದಂಗಾಗಿಸಿದೆ. “ಸರ್, ನನ್ನ ತಲೆಯ ಗಾತ್ರಕ್ಕೆ ಸರಿಹೊಂದುವ ಹೆಲ್ಮೆಟ್ ಇಡೀ ಮಾರುಕಟ್ಟೆಯಲ್ಲಿ ಎಲ್ಲಿಯೂ ಸಿಗುತ್ತಿಲ್ಲ, ಅದಕ್ಕೇ ನಾನು ಧರಿಸಿಲ್ಲ” ಎಂದು ಆತ ತನ್ನ ಅಸಹಾಯಕತೆಯನ್ನು ತೋಡಿಕೊಂಡಿದ್ದಾನೆ. ಮೊದಲು ಇದನ್ನು ನಂಬದ ಪೊಲೀಸರು, ತಾವೇ ಒಂದು ಸಾಮಾನ್ಯ ಹೆಲ್ಮೆಟ್ ನೀಡಿ ಧರಿಸುವಂತೆ ಹೇಳಿದ್ದಾರೆ. ಆದರೆ ಸವಾರ ಎಷ್ಟು ಪ್ರಯತ್ನಿಸಿದರೂ ಆ ಹೆಲ್ಮೆಟ್ ಆತನ ತಲೆಗೆ ಹಿಡಿಸಲೇ ಇಲ್ಲ. ಈ ವಿಚಿತ್ರ ಸನ್ನಿವೇಶವನ್ನು ಕಂಡು ಪೊಲೀಸರು ನಗೆಗಡಲಲ್ಲಿ ತೇಲಿದ್ದಲ್ಲದೆ, ಆತನ ಪ್ರಾಮಾಣಿಕತೆಯನ್ನು ಮೆಚ್ಚಿ ದಂಡ ವಿಧಿಸದೆ ಬಿಟ್ಟಿದ್ದಾರೆ.


ಈ ಸ್ವಾರಸ್ಯಕರ ಘಟನೆಯ ವಿಡಿಯೋವನ್ನು ವಿವೇಕಾನಂದ ತಿವಾರಿ ಎಂಬ ಪೊಲೀಸ್ ಅಧಿಕಾರಿ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದು, ಇದು ಬರೋಬ್ಬರಿ 26 ಮಿಲಿಯನ್ಗೂ ಅಧಿಕ ವೀಕ್ಷಣೆಗಳನ್ನು ಪಡೆದಿದೆ. ಪೊಲೀಸರು ಈ ವಿಡಿಯೋ ಮೂಲಕ ಹೆಲ್ಮೆಟ್ ತಯಾರಿಕಾ ಕಂಪನಿಗಳಿಗೆ ಒಂದು ವಿಶೇಷ ಮನವಿಯನ್ನು ಮಾಡಿದ್ದಾರೆ. “ಸುರಕ್ಷತೆ ಎಂಬುದು ಎಲ್ಲರಿಗೂ ಸಮಾನ, ಹೀಗಾಗಿ ಕಂಪನಿಗಳು ಕೇವಲ ಸ್ಟ್ಯಾಂಡರ್ಡ್ ಗಾತ್ರಗಳನ್ನು ಮಾತ್ರವಲ್ಲದೆ, ಇಂತಹ ವಿಶೇಷ ವ್ಯಕ್ತಿಗಳಿಗಾಗಿ ದೊಡ್ಡ ಗಾತ್ರದ ಹೆಲ್ಮೆಟ್ಗಳನ್ನು ಸಹ ತಯಾರಿಸಬೇಕು” ಎಂದು ಅವರು ವಿನಂತಿಸಿದ್ದಾರೆ.

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಖ್ಯಾತ ಹೆಲ್ಮೆಟ್ ತಯಾರಿಕಾ ಸಂಸ್ಥೆ ‘ಸ್ಟೀಲ್ಬರ್ಡ್’ ಪ್ರತಿಕ್ರಿಯಿಸಿದ್ದು, ಈ ವ್ಯಕ್ತಿಗೆ ಉಡುಗೊರೆಯಾಗಿ ಅವರ ಗಾತ್ರಕ್ಕೆ ತಕ್ಕಂತೆ ಹೆಲ್ಮೆಟ್ ನೀಡಲು ಮುಂದೆ ಬಂದಿದೆ. ಪೊಲೀಸರ ಈ ಮಾನವೀಯ ನಡೆ ಮತ್ತು ಸವಾರನ ವಿಚಿತ್ರ ಕಷ್ಟಕ್ಕೆ ನೆಟ್ಟಿಗರು ಮರುಕ ವ್ಯಕ್ತಪಡಿಸುತ್ತಲೇ ಮೆಚ್ಚುಗೆ ಸೂಚಿಸಿದ್ದಾರೆ.
