ಬೆಂಗಳೂರಿನ ಹೊಸೂರು ರಸ್ತೆಯಲ್ಲಿ ಟ್ರಕ್ ಓವರ್ಟೇಕ್ ಮಾಡಲು ಹೋಗಿ ಆಟೋ ಪಲ್ಟಿ: ವಿಡಿಯೋ ವೈರಲ್, ಚಾಲಕನಿಗೆ ಸಣ್ಣಪುಟ್ಟ ಗಾಯ

ಬೆಂಗಳೂರು: ಬೆಂಗಳೂರಿನ ಹೊಸೂರು ರಸ್ತೆಯಲ್ಲಿ ಆಟೋವೊಂದು ಓವರ್ ಟೇಕ್ ಮಾಡಲು ಹೋಗಿ, ಮಗುಚಿ ಬಿದ್ದ ಘಟನೆ ಸೋಮವಾರ ಮುಂಜಾನೆ ನಡೆದಿದೆ. ಇದೀಗ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಆಟೋ ರಿಕ್ಷಾವೊಂದು ವೇಗವಾಗಿ ಹೋಗುತ್ತಿದ್ದ ಟ್ರಕ್ವೊಂದನ್ನು ಓವರ್ ಟೇಕ್ ಮಾಡಲು ಹೋಗಿ ಪಲ್ಟಿಯಾಗಿದೆ. ವಿಡಿಯೋವನ್ನು ನೋಡಿ ಸೋಶಿಯಲ್ ಮೀಡಿಯಾ ಬಳಕೆದಾರರೂ ಕಮೆಂಟ್ ಮಾಡಿದ್ದು, ಬೆಂಗಳೂರಿನಲ್ಲಿ ಇಂತಹ ಅನೇಕ ಘಟನೆಗಳು ನಡೆಯುತ್ತಿದೆ. ಇದಕ್ಕೆ ಚಾಲಕರ ಅಜಾಗರೂಕತೆಯೇ ಕಾರಣ ಎಂದು ಹೇಳಿದ್ದಾರೆ.

ಇನ್ನು ಈ ಘಟನೆಯ ಪ್ರಾಥಮಿಕ ಮಾಹಿತಿಯ ಪ್ರಕಾರ, ಈ ಆಟೋರಿಕ್ಷಾ ಹೊಸೂರು ರಸ್ತೆಯಲ್ಲಿ ವೇಗವಾಗಿ ಹೋಗುತ್ತಿದ್ದ ಟ್ರಕ್ನ್ನುಓವರ್ ಟೇಕ್ ಮಾಡಲು ಹೋಗಿ, ಸ್ಕಿಡ್ ಆಗಿ ಮಗುಚಿ ಬಿದ್ದಿದೆ. ಈ ಅಪಘಾತದಿಂದ ಯಾವುದೇ ಸಾವು-ನೋವು ಆಗಿಲ್ಲ, ಚಾಲಕನಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ ಎಂದು ಹೇಳಲಾಗಿದೆ. ವೈರಲ್ ಆಗಿರುವ ಪೋಸ್ಟ್ನಲ್ಲಿ ಹೀಗೆ ವಿವರಿಸಿಲಾಗಿದೆ. ‘ಆಟೋವೊಂದು ವೇಗವಾಗಿ ಹೋಗಿ ಲಾರಿಯನ್ನುಓವರ್ ಟೇಕ್ ಮಾಡಿದೆ. ಈ ವೇಳೆ ಆಟೋ ಚಾಲಕ ಬ್ರೇಕ್ ಹಾಕಿದ್ದಾನೆ. ಈ ವೇಳೆ ಆಟೋ ನಿಯಂತ್ರಣ ಕಳೆದುಕೊಂಡು, ರಸ್ತೆಯಲ್ಲಿ ಪಲ್ಟಿಯಾಗಿ, ಆಟೋ ಚಾಲಕ ಮೇಲೆ ಬಿದ್ದಿದೆ. ಚಾಲಕನಿಗೆ ಯಾವುದೇ ಗಂಭೀರ ಗಾಯಗಳು ಆಗಿಲ್ಲ ಎಂದು ಹೇಳಲಾಗಿದೆ.
ಈ ವೀಡಿಯೊವನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, 2000 ಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. ವಿಡಿಯೋ ನೋಡಿ ಹಲವು ಸೋಶಿಯಲ್ ಮೀಡಿಯಾ ಬಳಕೆದಾರರು ಕಮೆಂಟ್ ಮಾಡಿದ್ದಾರೆ. ಒಬ್ಬ ಬಳಕೆದಾರ, ಇದಕ್ಕಾಗಿಯೇ ಹೆದ್ದಾರಿಗಳಲ್ಲಿ ಆಟೋಗಳು ಮತ್ತು ಬೈಕ್ಗಳನ್ನು ಅನುಮತಿಸಬಾರದು. ಯಾಕೆಂದರೆ ಇಂತಹ ಅನಾಹುತಗಳಿಗೆ ಕಾರಣವಾಗಬಹುದು ಎಂದು ಹೇಳಿದ್ದಾರೆ. ಮತ್ತೊಬ್ಬ ಬಳಕೆದಾರ ಇಂತಹ ಘಟನೆಯನ್ನು ಬೆಂಗಳೂರಿನಲ್ಲಿ ಇತ್ತೀಚೆಗೆ ನೋಡಿದ್ದೇನೆ. ಒಬ್ಬ ಆಟೋ ಚಾಲಕ ವೇಗವಾಗಿ ಬಂದು ಯು-ಟರ್ನ್ ತೆಗೆದುಕೊಳ್ಳಲು ಹೋಗ ಪಲ್ಟಿಯಾಗಿ ಬಿದ್ದಿದ್ದಾನೆ ಎಂದು ಹೇಳಿದ್ದಾರೆ.