“ನವಜಾತ ಶಿಶುವನ್ನು 10 ಸಾವಿರ ರೂ.ಗೆ ಮಾರಾಟ!

ಹೊಸಪೇಟೆ: ನವಜಾತ ಶಿಶುವೊಂದನ್ನು 10 ಸಾವಿರ ರೂ.ಗೆ ಮಾರಾಟ ಮಾಡಿದ ಆಘಾತಕಾರಿ ಘಟನೆ ಹೊಸಪೇಟೆಯ 60 ಹಾಸಿಗೆಗಳ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಸದ್ಯ, ಘಟನೆ ಸಂಬಂಧ ಇಬ್ಬರು ಆಶಾ ಕಾರ್ಯಕರ್ತರು ಸೇರಿದಂತೆ ನಾಲ್ವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ಘಟನೆ ಆಗಸ್ಟ್ 31 ರಂದು ನಡೆದಿತ್ತು. ಈ ವಿಚಾರವಾಗಿ ವ್ಯಕ್ತಿಯೊಬ್ಬರು ನೀಡಿದ ದೂರಿನ ಆಧಾರದಲ್ಲಿ ಇದೀಗ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಹೊಸಪೇಟೆ ತಾಲ್ಲೂಕಿನ ಕಮಲಾಪುರ ಗ್ರಾಮದ ಮಹಿಳೆಯೊಬ್ಬರು ಆಗಸ್ಟ್ 26 ರಂದು ಸರ್ಕಾರಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಇದಾದ ಕೇವಲ ಐದು ದಿನಗಳ ನಂತರ, ಶಿಶುವನ್ನು ಹಗರಿಬೊಮ್ಮನಹಳ್ಳಿಯ ನಿವಾಸಿ ಕರಿಬಸಪ್ಪ ಎಂಬಾತನಿಗೆ ಮಾರಾಟ ಮಾಡಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಮಕ್ಕಳ ಸಹಾಯವಾಣಿಗೆ ಬಂದ ಸುಳಿವಿನ ಮೇರೆಗೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ (ಡಿಸಿಪಿಯು) ಸಂಯೋಜಕರಾದ ಚಿದಾನಂದ್ ಪೊಲೀಸ್ ದೂರು ದಾಖಲಿಸಿದ್ದರು. ಆಸ್ಪತ್ರೆಯ ಮೂಲಗಳಲ್ಲಿ ಒಬ್ಬರು ಸುಳಿವು ನೀಡಿದ್ದರಿಂದ ಈ ವಿಚಾರ ತಮಗೆ ಗೊತ್ತಾಗಿದೆ ಎಂದು ಚಿದಾನಂದ್ ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದರು.
ಪ್ರಕರಣ ಸಂಬಂಧ ನಾಲ್ವರನ್ನು ಬಂಧಿಸಲಾಗಿದ್ದು, ಈ ಪೈಕಿ ಇಬ್ಬರು ಆಶಾ ಕಾರ್ಯಕರ್ತೆಯರನ್ನು ಕವಿತಾ ಎಂ ಮತ್ತು ನಾಗರತ್ನ ಎಂದು ಗುರುತಿಸಲಾಗಿದೆ. ಇವರಿಬ್ಬರು ಬಾಣಂತಿಯನ್ನು ಮನವೊಲಿಸಿ ಮಗುವನ್ನು ಮಾರಾಟ ಮಾಡಲು ಹಣ ನೀಡಲು ಮುಂದಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಹೊಸಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಗುವನ್ನು ರಕ್ಷಿಸಲಾಗಿದೆ. ಮಗುವನ್ನು ಸರ್ಕಾರ ನಡೆಸುವ ವಿಶೇಷ ದತ್ತು ಕೇಂದ್ರದ ಆರೈಕೆಯಲ್ಲಿ ಇರಿಸಲಾಗಿದೆ.
