ಅಗ್ನಿ ಐಪಿಎಸ್’ ಬರಹಗಾರ ಎಸ್.ಎಸ್. ಡೇವಿಡ್ ಅನಾಥ ಶವವಾಗಿ ಅಂತಿಮ ಯಾತ್ರೆ

ಸಾಯಿಕುಮಾರ್ ನಟನೆಯ ‘ಅಗ್ನಿ ಐಪಿಎಸ್’ ಚಿತ್ರ ಒಂದು ಕಾಲದಲ್ಲಿ ಸಂಚಲನ ಸೃಷ್ಟಿ ಮಾಡಿತ್ತು. ಈ ಚಿತ್ರ ಈಗಲೂ ಅನೇಕರ ಫೇವರಿಟ್ ಆಗಿದೆ. ಇದಲ್ಲದೆ, ‘ಪೋಲಿಸ್ ಸ್ಟೋರಿ’ ಸಿನಿಮಾದಲ್ಲೂ ಪೊಲೀಸ್ ಇಲಾಖೆಯ ಬಗ್ಗೆ ಹೇಳಲಾದ ಸಿನಿಮಾ. ಈ ರೀತಿಯ ಸಿನಿಮಾಗಳಿಗೆ ಬರಹಗಾರರಾಗಿ ಕೆಲಸ ಮಾಡಿದ್ದ ಎಸ್ಎಸ್. ಡೇವಿಡ್ ನಿಧನ ಹೊಂದಿದ್ದಾರೆ. ಈಗ ಅವರು ಅನಾಥ ಶವವಾಗಿದ್ದಾರೆ. ಸಾವಿನ ಬಳಿಕ ಅವರನ್ನು ನೋಡಲು ಯಾರೂ ಇಲ್ಲವಾಗಿದ್ದಾರೆ.

ಎಸ್ಎಸ್ ಡೇವಿಡ್ ಅವರು ಚಿತ್ರಕಥೆ ಬರಹಗಾರನಾಗಿ ಮಾತ್ರವಲ್ಲದೆ ನಿರ್ದೇಶನದಲ್ಲೂ ಛಾಪು ಮೂಡಿಸಿದ್ದರು. ‘ಹಾಯ್ ಬೆಂಗಳೂರು’ ಹಾಗೂ ‘ಧೈರ್ಯ’ ಚಿತ್ರವನ್ನ ನಿರ್ದೇಶನ ಮಾಡಿ ಡೇವಿಡ್ ಗಮನ ಸೆಳೆದಿದ್ದರು. ಈಗ ಅವರು ನಿಧನ ಹೊಂದಿದ್ದು, ಚಿತ್ರರಂಗದ ಅನೇಕರು ಸಂತಾಪ ಸೂಚಿಸಿದ್ದಾರೆ. ಆದರೆ, ಕುಟುಂಬದವರು ಅವರ ಶವ ಪಡೆಯಲು ಸಿದ್ಧರಿಲ್ಲ.
ನಿಧನ ಹೊಂದಿದ್ದು ಹೇಗೆ?
ಡೇವಿಡ್ ಅವರು ಆಗಸ್ಟ್ 31ರಂದು ಮೆಡಿಕಲ್ ಶಾಪ್ಗೆ ತೆರಳಿದ್ದರು. ಈ ವೇಳೆ ಅವರು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಅವರನ್ನು ಬೆಂಗಳೂರಿನ ಆರ್ಆರ್ ನಗರದ ಎಸ್ಎಸ್ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ, ಅವರು ಹೃದಯಘಾತದಿಂದ ಕೊನೆಯುಸಿರು ಎಳೆದಿದ್ದಾರೆ.
ಅನಾಥ ಶವ
ಈಗ ಡೇವಿಡ್ ಅನಾಥ ಶವವಾಗಿದ್ದಾರೆ. ವಿಕ್ಟೋರಿಯಾ ಆಸ್ಪತ್ರೆಗೆ ಡೇವಿಡ್ ಪಾರ್ಥಿವ ಶರೀರ ರವಾನೆ ಆಗಿದೆ. ಸದ್ಯ ಕುಟುಂಬದವರು ಬಾರದೆ ಬಾಡಿ ಕೊಡೋದಿಲ್ಲ ಎಂದು ಆರ್ಆರ್ ನಗರ ಪೊಲೀಸರು ಹೇಳಿದ್ದಾರೆ. ಡೇವಿಡ್ ಅಕ್ಕ ಉಡುಪಿಯ ಕಾಪುವಿನಲ್ಲಿದ್ದಾರೆ. ಅವರು ತಮಗೆ ಬರೋಕೆ ಸಾಧ್ಯವಿಲ್ಲ ಎಂದು ಹೇಳಿದ್ದು, ಇಲ್ಲಿಯೇ ಅಂತಿಮ ಸಂಸ್ಕಾರ ನಡೆಸುವಂತೆ ಸೂಚನೆ ಕೊಟ್ಟಿದ್ದಾರೆ ಎನ್ನಲಾಗಿದೆ. ಈಗ ಡೇವಿಡ್ ಅವರು ಅನಾಥ ಶವವಾಗಿದ್ದಾರೆ.