ಸುಜುಕಿಯ ಇ-ವಿಟಾರಾ ನೂರಕ್ಕೂ ಹೆಚ್ಚು ದೇಶಗಳಿಗೆ ರಫ್ತು – ಹೈಬ್ರಿಡ್ ಬ್ಯಾಟರಿ ಎಲೆಕ್ಟ್ರೋಡ್ ಉತ್ಪಾದನೆ ಆರಂಭ

ಅಹ್ಮದಾಬಾದ್: ಮಾರುತಿ ಸುಜುಕಿಯ ಹೊಸ ಹಿಟ್ ಬ್ರ್ಯಾಂಡ್ ಆದ ಗ್ರ್ಯಾಂಡ್ ವಿಟಾರಾದ ಇವಿ ಆವೃತ್ತಿಯಾದ ಇ-ವಿಟಾರಾ ಈಗ ನೂರಕ್ಕೂ ಹೆಚ್ಚು ದೇಶಗಳಿಗೆ ರಫ್ತಾಗಲು ಸಿದ್ಧವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಇ-ವಿಟಾರಾ ಯೋಜನೆಯನ್ನು ಬಿಡುಗಡೆ ಮಾಡಲಿದ್ದಾರೆ. ಇದೂ ಸೇರಿದಂತೆ ಪ್ರಧಾನಿಗಳು ಇಂದು ಹಂಸಲಪುರ್ನಲ್ಲಿರುವ ಸುಜುಕಿ ಮೋಟಾರ್ ಪ್ಲಾಂಟ್ನಲ್ಲಿ ಎರಡು ಮಹತ್ವದ ಉಪಕ್ರಮಗಳಿಗೆ ಚಾಲನೆ ನೀಡಲಿದ್ದಾರೆ. ಸುಜುಕಿ ಸೇರಿ ಮೂರು ಸಂಸ್ಥೆಗಳು ಜಂಟಿಯಾಗಿ ನಿರ್ಮಿಸಲಿರುವ ಹೈಬ್ರಿಡ್ ಬ್ಯಾಟರಿ ಎಲೆಕ್ಟ್ರೋಡ್ ಫ್ಯಾಕ್ಟರಿಗೂ ಪ್ರಧಾನಿಗಳು ಚಾಲನೆ ನೀಡಲಿದ್ದಾರೆ.

ಇ-ವಿಟಾರಾ ಇವಿಗಳ ರಫ್ತು…
ಅಹ್ಮದಾಬಾದ್ನ ಹಂಸಲಪುರ್ನಲ್ಲಿರುವ ಸುಜುಕಿ ಮೋಟಾರ್ ಪ್ಲಾಂಟ್ನಲ್ಲಿ ಇ-ವಿಟಾರಾ ಎಲೆಕ್ಟ್ರಿಕ್ ವಾಹನಗಳ ತಯಾರಿಕೆ ನಡೆದಿದೆ. ಈ ಬ್ಯಾಟರಿ ವಾಹನಗಳು ನೂರಕ್ಕೂ ಹೆಚ್ಚು ದೇಶಗಳಿಗೆ ರಫ್ತಾಗಲಿವೆ. ಜಪಾನ್, ಯೂರೋಪ್ನಂತಹ ಉನ್ನತ ಮಾರುಕಟ್ಟೆಗಳಿಗೆ ಈ ವಾಹನಗಳು ಸರಬರಾಜಾಗಲಿರುವುದು ಗಮನಾರ್ಹ. ಜಪಾನ್ ಮೂಲದ ಸುಜುಕಿ ಸಂಸ್ಥೆಯ ಮೊದಲ ಜಾಗತಿಕ ಬ್ಯಾಟರಿ ಎಲೆಕ್ಟ್ರಿಕ್ ವಾಹನ ಯೋಜನೆ ಇದು. ಇದರೊಂದಿಗೆ ಹಂಸಲಪುರವು ಸುಜುಕಿಯ ಎಲೆಕ್ಟ್ರಿಕ್ ವಾಹನಗಳಿಗೆ ಜಾಗತಿಕ ಕೇಂದ್ರವಾಗಿ ಕಾರ್ಯನಿರ್ವಹಿಸಲಿದೆ.
ಹೈಬ್ರಿಡ್ ಬ್ಯಾಟರಿ ಎಲೆಕ್ಟ್ರೋಡ್ಗಳ ತಯಾರಿಕೆ
ಸುಜುಕಿ, ಟೋಶಿಬಾ ಮತ್ತು ಡೆನ್ಸೋ ಕಂಪನಿಗಳು ಜಂಟಿಯಾಗಿ ಹೈಬ್ರಿಡ್ ಬ್ಯಾಟರಿ ಎಲೆಕ್ಟ್ರೋಡ್ಗಳನ್ನು ತಯಾರಿಸಲಿವೆ. ಟಿಡಿಎಸ್ ಲಿಥಿಯಂ ಅಯಾನ್ ಬ್ಯಾಟರಿ ಘಟಕದಲ್ಲಿ ಈ ಎಲೆಕ್ಟ್ರೋಡ್ಗಳು ತಯಾರಾಗಲಿವೆ. ಈ ಎಲೆಕ್ಟ್ರೋಡ್ಗಳು ಇವಿ ಬ್ಯಾಟರಿಗಳ ಕ್ಷಮತೆಯನ್ನು ಹೆಚ್ಚಿಸಬಲ್ಲುವು. ಇದನ್ನು ಭಾರತದಲ್ಲಿ ತಯಾರಿಸಲಾಗುತ್ತಿರುವುದು ಇದೇ ಮೊದಲು.