ಮಲಪ್ಪುರಂ: ಮಲಗುವ ಕೋಣೆಯಲ್ಲಿ ಮೊಳೆಗೆ ಶರ್ಟ್ ಸಿಲುಕಿ ಬಾಲಕ ಉಸಿರುಗಟ್ಟಿ ಸಾವು

ಮಲಪ್ಪುರಂ: ಮಲಗುವ ಕೋಣೆಯಲ್ಲಿನ ಮೊಳಗೆ ಶರ್ಟ್ ಕಾಲರ್ ಸಿಲುಕಿದ ಪರಿಣಾಮ 11 ವರ್ಷದ ಬಾಲಕನೋರ್ವ ಉಸಿರುಗಟ್ಟಿ ಮೃತಪಟ್ಟಿರುವ ಘಟನೆ ಶುಕ್ರವಾರ ಸಂಜೆ ಕೇರಳದ ಮಲಪ್ಪುರಂನಲ್ಲಿರುವ ವಲ್ಲಿಕ್ಕಂಜಿರಾಮ್ ಗ್ರಾಮದಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಮಣಿಕಂದನ್ ಹಾಗೂ ದಿವ್ಯ ದಂಪತಿಯ ಪುತ್ರನಾದ ಧ್ವನಿತ್, ನಿರಮರ್ತೂರ್ ಸರಕಾರಿ ಶಾಲೆಯಲ್ಲಿ ಆರನೆಯ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದೆ.
ಆತ ತನ್ನ ಕೋಣೆಯಲ್ಲಿ ಏಕಾಂಗಿಯಾಗಿದ್ದಾಗ, ಆತನ ಶರ್ಟ್ ನ ಕಾಲರ್ ಗೋಡೆಯ ಮೊಳೆಯೊಂದಕ್ಕೆ ಸಿಲುಕಿಕೊಂಡಿದೆ. ಇದರಿಂದಾಗಿ ಆತನ ಕುತ್ತಿಗೆ ಸುತ್ತ ಬಟ್ಟೆ ಸುತ್ತಿಕೊಂಡು, ಆತ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗಿದೆ.

ಧನ್ವಿತ್ ನ ಕೂಗಾಟ ಕೇಳಿದ ಆತನ ತಂದೆ ಮಣಿಕಂದನ್, ಕೂಡಲೇ ಆತನ ಕೋಣೆಗೆ ಧಾವಿಸಿದ್ದು, ತಕ್ಷಣವೇ ಆತನನ್ನು ಶರ್ಟ್ ನಿಂದ ಬಿಡಿಸಿ, ಆತನನ್ನು ತಿರೂರ್ ನಲ್ಲಿರುವ ಖಾಸಗಿ ಆಸ್ಪತ್ರೆಯೊಂದಕ್ಕೆ ಕರೆದೊಯ್ದಿದ್ದಾರೆ. ಆತನಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ, ಆತನ ಗಂಭೀರ ಸ್ಥಿತಿಯನ್ನು ಕಂಡು ಹೆಚ್ಚಿನ ಚಿಕಿತ್ಸೆಗಾಗಿ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ. ವೈದ್ಯಕೀಯ ಪ್ರಯತ್ನಗಳ ಹೊರತಾಗಿಯೂ, ಶನಿವಾರ ಸಂಜೆ ಚಿಕಿತ್ಸೆ ಫಲಕಾರಿಯಾಗದೆ ಧ್ವನಿತ್ ಕೊನೆಯುಸಿರೆಳೆದಿದ್ದಾನೆ.
ಕೋಝಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ಧ್ವನಿತ್ ನ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ, ತಿರೂರ್ ನಲ್ಲಿರುವ ಪೊಟ್ಟಿಲತರ ರುದ್ರಭೂಮಿಯಲ್ಲಿ ಆತನ ಅಂತ್ಯಕ್ರಿಯೆ ನೆರವೇರಿಸಲಾಯಿತು.
