ನೆಲಮಂಗಲದಲ್ಲಿ ಪೇಟಿಎಂ ಆಫರ್ ನೆಪದಲ್ಲಿ ₹75,000 ವಂಚನೆ

ದಿನಸಿ ಅಂಗಡಿ ಮಾಲೀಕನಿಗೆ ಉಚಿತವಾಗಿ ಪೇಟಿಎಂ ಸ್ಪೀಕರ್ ಬಾಕ್ಸ್ ಕೊಡುವುದಾಗಿ ಮತ್ತು ಅದಕ್ಕಾಗಿ ಕಟ್ಟುವ ತಿಂಗಳ ಬಾಡಿಗೆಯನ್ನು ನಿಲ್ಲಿಸುವುದಾಗಿ ನಂಬಿಸಿದ ವ್ಯಕ್ತಿಯೊಬ್ಬ ಅಂಗಡಿ ಮಾಲೀಕನ ಮೊಬೈಲ್ ತೆಗೆದುಕೊಂಡು 75 ಸಾವಿರ ಹಣವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡು ಪರಾರಿಯಾದ ಘಟನೆ ನೆಲಮಂಗಲದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ನೆಲಮಂಗಲದಲ್ಲಿ ಅಂಗಡಿ ನಡೆಸುತ್ತಿರುವ ಸಿಲೋಕೇಶ್ ವಂಚಕಗೊಳಗಾದವರು, ಹಣ ಕಳೆದುಕೊಂಡ ಬಳಿಕ ಸೈಬರ್ ಅಪರಾಧ ಕಾಯ್ದೆಯಡಿ ನೆಲಮಂಗಲ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ವಂಚಕನ ಕೈಚಳಕ ಅಂಗಡಿಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಆರೋಪಿಯ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.
ಜುಲೈ 7ರಂದು ಬೆಳಗ್ಗೆ 8 ಗಂಟೆ ಸುಮಾರಿಗೆ ಅಂಗಡಿಗೆ ಬಂದಿದ್ದ ಆರೋಪಿ, ಪೇಟಿಎಂ ಕ್ಯೂಆರ್ ಕೋಡ್ ಕಡೆಯಿಂದ ಬಂದಿರುವುದಾಗಿ ಹೇಳಿದ್ದಾನೆ. ನಿಮ್ಮ ಪೇಟಿಎಂ ಆಯಪ್‌ನಲ್ಲಿ ತಿಂಗಳ ಬಾಡಿಗೆಯನ್ನು ರದ್ದು ಮಾಡುವುದಾಗಿ, ಹಾಗೆಯೇ ಉಚಿತವಾಗಿ ಪೇಟಿಎಂ ಸ್ಪೀಕರ್ ಬಾಕ್ಸ್ ಕೊಡುವುದಾಗಿ ನಂಬಿಸಿದ್ದಾನೆ. ಈ ವೇಳೆ ಲೋಕೇಶ್ ಅವರ ಮೊಬೈಲ್ ತೆಗೆದುಕೊಂಡ ಆರೋಪಿ, ಫೋನ್ ಮೂಲಕ 75 ಸಾವಿರ ಹಣವನ್ನು ತನ್ನ ಖಾತೆಗೆ ವರ್ಗಾವಣೆ ಮಾಡಿಕೊಂಡು ಅಲ್ಲಿಂದ ಯಾವುದೇ ಅನುಮಾನ ಬಾರದಂತೆ ಪರಾರಿಯಾಗಿದ್ದಾನೆ. ಮರುದಿನ ಲೋಕೇಶ್ ಅವರಿಗೆ ತಮ್ಮ ಖಾತೆಯಿಂದ ಹಣ ಕಡಿತವಾಗಿದ್ದು ಗಮನಕ್ಕೆ ಬಂದಿದೆ. ಬಳಿಕ, ಆರೋಪಿಯ ವಿರುದ್ಧ ಜು.21ರಂದು ನೆಲಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
