ಅಫ್ಘಾನ್ ಮಹಿಳೆಯರಿಗೆ ಶೂನ್ಯ ಸ್ವಾತಂತ್ರ್ಯ: ಪತಿಯ ಅನುಮತಿ ಇಲ್ಲದೆ ತವರಿಗೆ ಹೋದರೆ ಜೈಲು ಶಿಕ್ಷೆ ಖಚಿತ!

ಅಫ್ಘಾನಿಸ್ತಾನ : ತಾಲಿಬಾನ್ ಆಡಳಿತ ಜಾರಿಗೆ ತಂದಿರುವ ಹೊಸ ಕ್ರಿಮಿನಲ್ ಕಾನೂನು ದೇಶಾದ್ಯಂತ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಹೊಸ ಕಾನೂನಿನ ಪ್ರಕಾರ, ಪತ್ನಿಯನ್ನು ಹಿಂಸಿಸಿದ ಪ್ರಕರಣಗಳಲ್ಲಿ ದೇಹದ ಮೇಲೆ ಸ್ಪಷ್ಟ ಗಾಯದ ಗುರುತುಗಳು ಕಂಡುಬಂದರೆ ಮಾತ್ರ ಪತಿಗೆ ಗರಿಷ್ಠ 15 ದಿನಗಳ ಜೈಲು ಶಿಕ್ಷೆ ವಿಧಿಸುವ ವ್ಯವಸ್ಥೆ ಮಾಡಲಾಗಿದೆ.

ಹೊಸ ಕಾನೂನಿನಲ್ಲಿ ಕೌಟುಂಬಿಕ ಹಿಂಸೆಗೆ ಸಂಬಂಧಿಸಿದ ನಿಯಮಗಳ ಬಗ್ಗೆ ಸಾರ್ವಜನಿಕರಿಂದ ತೀವ್ರ ಟೀಕೆ ವ್ಯಕ್ತವಾಗಿದೆ. ಪತ್ನಿಯನ್ನು ಹೊಡೆಯಲಾಗಿದ್ದರೂ ಗಾಯದ ಗುರುತುಗಳು ಕಾಣಿಸದಿದ್ದರೆ ಕಾನೂನು ಕ್ರಮಕ್ಕೆ ಅವಕಾಶವೇ ಇಲ್ಲ ಎನ್ನುವುದು ಮಹಿಳಾ ಹಕ್ಕುಗಳ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಇದರಿಂದ ಗೃಹಹಿಂಸೆಯನ್ನು ಪರೋಕ್ಷವಾಗಿ ಸಮರ್ಥಿಸುವಂತಾಗಿದೆ ಎಂಬ ಆರೋಪಗಳು ಕೇಳಿಬಂದಿವೆ.

ಇದೇ ಸಂಹಿತೆಯಲ್ಲಿ ಮಹಿಳೆಯರ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಹಲವು ಕಟ್ಟುನಿಟ್ಟಿನ ನಿಯಮಗಳೂ ಸೇರಿವೆ. ಪತಿಯ ಅನುಮತಿ ಇಲ್ಲದೆ ಪತ್ನಿ ತವರೂರಿಗೆ ತೆರಳಿದರೆ ಜೈಲು ಶಿಕ್ಷೆ ಎದುರಿಸಬೇಕಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಕುಟುಂಬದ ಒಳಗಿನ ಶಿಸ್ತು ಮತ್ತು ನಿಯಂತ್ರಣದ ಹೆಸರಿನಲ್ಲಿ ಮಹಿಳೆಯರ ಮೇಲೆ ಹೆಚ್ಚಿನ ನಿರ್ಬಂಧಗಳನ್ನು ವಿಧಿಸಲಾಗುತ್ತಿದೆ ಎಂಬ ಟೀಕೆಗಳು ವ್ಯಕ್ತವಾಗಿವೆ.
ಮಕ್ಕಳ ವಿಚಾರದಲ್ಲೂ ವಿವಾದಾತ್ಮಕ ವಿಧಿಗಳು ಸೇರಿವೆ. ಮಗುವಿಗೆ ಶಿಸ್ತು ಕಲಿಸುವ ನೆಪದಲ್ಲಿ ದೈಹಿಕ ಶಿಕ್ಷೆ ನೀಡುವುದನ್ನು ಕೆಲವು ಮಟ್ಟಿಗೆ ಅನುಮತಿಸುವಂತೆ ಕಾನೂನು ರೂಪಿಸಲಾಗಿದೆ ಎಂದು ವರದಿಯಾಗಿದೆ. ಇದರಿಂದ ಮಕ್ಕಳ ಹಕ್ಕುಗಳ ಮೇಲೂ ಗಂಭೀರ ಪ್ರಶ್ನೆಗಳು ಎದ್ದಿವೆ.
ಮಾನವ ಹಕ್ಕುಗಳ ಹೋರಾಟಗಾರರು ಈ ಕಾನೂನನ್ನು ಮಹಿಳೆಯರು ಮತ್ತು ಮಕ್ಕಳ ಹಕ್ಕುಗಳಿಗೆ ವಿರುದ್ಧವಾದದ್ದು ಎಂದು ಖಂಡಿಸಿದ್ದಾರೆ. ತಾಲಿಬಾನ್ ಆಡಳಿತದ ಈ ಕ್ರಮಗಳು ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಸ್ಥಿತಿಯನ್ನು ಇನ್ನಷ್ಟು ಹಿನ್ನಡೆಗೆ ತಳ್ಳುತ್ತಿವೆ ಎಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಆತಂಕ ವ್ಯಕ್ತವಾಗಿದೆ.