ನೀವು ಶಾಪಿಂಗ್ ಮಾಡಿ, ಬ್ಯಾಗ್ ಹೊರಲು ಬರ್ತಾರೆ ‘ಕ್ಯಾರಿಮೆನ್’!

ನವದೆಹಲಿ: ಶಾಪಿಂಗ್ ಎಂದ್ರೆ ಯಾವ ಮಹಿಳೆಗೆ ಇಷ್ಟವಿಲ್ಲ ಹೇಳಿ..! ಆದರೆ, ಬಹಳ ಮಂದಿ ಶಾಪರ್ಸ್ಗೆ ಒಂದೇ ಪ್ರಮುಖ ತಲೆನೋವು. ಅದು ಲಗೇಜ್ಗಳನ್ನು ಹೊತ್ತು ಶಾಪ್ನಿಂದ ಶಾಪ್ಗೆ ತಿರುಗೋದು. ಕೈಯಲ್ಲಿ ಐದಾರು ಬ್ಯಾಗ್ಗಳನ್ನು ಇಟ್ಟುಕೊಂಡು ನಡೆದಾಡುವುದರಿಂದ ಶಾಪಿಂಗ್ನ ಖುಷಿಯೇ ಬತ್ತಿಹೋಗಿರುತ್ತೆ ಹೆಂಗಳೆಯರಿಗೆ. ಆ ಮಹಿಳೆಯ ಜೊತೆ ಶಾಪಿಂಗ್ಗೆ ಬರುವ ಆಕೆಯ ಗಂಡನಿಗೋ ಅಥವಾ ಮಗನಿಗೋ ಈ ಲಗೇಜುಗಳನ್ನು ಹೊರುವ ಕಷ್ಟ ಬರಬಹುದು. ಈ ಕಷ್ಟ ನೋಡಲಾಗದೆ ದಿಲ್ಲಿಯ ಸ್ಟಾರ್ಟಪ್ವೊಂದು ಪರಿಹಾರ ಹುಡುಕಿದೆ. ಅದೇ ಶಾಪಿಂಗ್ ಅಸಿಸ್ಟೆಂಟ್ ಸೇವೆ. ಈ ಸ್ಟಾರ್ಟಪ್ನ ಹೆಸರು ಕ್ಯಾರಿಮೆನ್ (CarryMen).
‘ನೀವು ಶಾಪಿಂಗ್ ಮಾಡಿ, ನಾವು ಹೊರೆ ಹೊರುತ್ತೇವೆ’. ಇದು ದೆಹಲಿಯ ಕ್ಯಾರಿಮೆನ್ ಸಂಸ್ಥೆಯ ಧ್ಯೇಯ ನುಡಿ. ಗಂಟೆಗೆ 149 ರೂ ಚಾರ್ಜ್ ಮಾಡಲಾಗುತ್ತದೆ. 2 ಗಂಟೆ, 3 ಗಂಟೆ, 4 ಗಂಟೆಯ ಪ್ಯಾಕೇಜ್ಗಳಿವೆ. ತರಬೇತಿ ಪಡೆದ ಸಹಾಯಕರನ್ನು ಜೊತೆಗೆ ಕಳುಹಿಸಿಕೊಡಲಾಗುತ್ತದೆ.
ಈ ಸಹಾಯಕರು ಶಾಪಿಂಗ್ ಬ್ಯಾಗ್ಗಳನ್ನು ಹೊತ್ತುಕೊಂಡು ಜೊತೆಯಲ್ಲಿ ಬರುತ್ತಾರೆ. ಶಾಪ್ಗಳಿಗೆ ಕರೆದೊಯ್ಯುತ್ತಾರೆ. ಗ್ರಾಹಕರನ್ನು ಕುಳ್ಳಿರಿಸಿ ಆಹಾರದ ಕ್ಯೂಗಳಲ್ಲಿ ತಾವು ನಿಲ್ಲುತ್ತಾರೆ. ಶಾಪಿಂಗ್ ಮಧ್ಯೆ ಗ್ರಾಹಕರಿಗೆ ಕೂರಲು ಜಾಗದ ವ್ಯವಸ್ಥೆ ಮಾಡುತ್ತಾರೆ. ಕೂರುವ ಜಾಗ ಸಿಗದೇ ಹೋದರೆ ತಾವೇ ತಂದ ಫೋಲ್ಡಬಲ್ ಚೇರ್ ಅನ್ನು ಕೊಟ್ಟು ಕೂರಿಸಲು ಸಹಾಯವಾಗುತ್ತಾರೆ.‘ಜನರಿಗೆ ಶಾಪಿಂಗ್ ಮಾಡುವುದೆಂದರೆ ಇಷ್ಟ. ಆದರೆ, ಅದರಿಂದ ದೈಹಿಕ ಆಯಾಸವೂ ಇರುತ್ತದೆ. ಜನರು ಶಾಪಿಂಗ್ ಬ್ಯಾಗ್ ಹೊರಲೂ ಆಗದೆ, ಕೈಯಲ್ಲಿರುವ ಮೋಮೋ ತಿನ್ನಲೂ ಆಗದೆ ಚಿಂತಿತರಾಗುವುದುಂಟು. ಶಾಪಿಂಗ್ ಬ್ಯಾಗ್ಗಳ ಹೊರೆ ಬಿಟ್ಟು ಜನರು ಶಾಪಿಂಗ್ನ ಆನಂದ ಅನುಭವಿಸಬೇಕೆಂಬುದು ನಮ್ಮ ಉದ್ದೇಶ’ ಎಂದು ಕ್ಯಾರಿಮೆನ್ ಸಂಸ್ಥೆ ಹೇಳುತ್ತದೆ.
ಗರ್ಭಿಣಿಯಾಗಿರುವವರು, ಸಣ್ಣ ಮಕ್ಕಳಿರುವವರು, ಜನಸಂದಣಿ ಇರುವ ಮಾರುಕಟ್ಟೆ ಪ್ರದೇಶಗಳಲ್ಲಿ ಶಾಪಿಂಗ್ ಮಾಡುವವರು, ಜೊತೆಗೆ ಸಾಮಾನು ಹೊರಲು ನೆರವಾಗಲು ಯಾರೂ ಇಲ್ಲದವರು, ಇಂಥವರಿಗೆ ಶಾಪಿಂಗ್ ಅಸಿಸ್ಟೆಂಟ್ಗಳು ಬೇಕಾಗಬಹುದು. ಗಂಟೆ ಲೆಕ್ಕದಲ್ಲಿ ಶುಲ್ಕ ಪಡೆಯಲಾಗುತ್ತದೆ.
ಅಸಿಸ್ಟೆಂಟ್ಗೆ ಹೆಚ್ಚು ಭಾರ ಹೊರಿಸುವಂತಿಲ್ಲ
ಮೇಲೆ ಹೇಳಲಾದಂತೆ ಶಾಪಿಂಗ್ ಅಸಿಸ್ಟೆಂಟ್ಗಳಿಗೆ ಗಂಟೆಯ ಲೆಕ್ಕದಲ್ಲಿ ಶುಲ್ಕ ಇರುತ್ತದೆ. ಗಂಟೆಗೆ 149 ರೂ ನಿಗದಿ ಮಾಡಲಾಗಿದೆ. ಆದರೆ, ಒಬ್ಬ ಸಹಾಯಕರು ಎಲ್ಲಾ ತೂಕವನ್ನೂ ಹೊರಲು ಆಗುವುದಿಲ್ಲ. ಒಬ್ಬ 12 ಕಿಲೋ ಮಾತ್ರ ಹೊರುವುದು. ಅದಕ್ಕಿಂತ ಹೆಚ್ಚಿನ ತೂಕದ ಶಾಪಿಂಗ್ ಬ್ಯಾಗ್ಗಳಿದ್ದರೆ ಮತ್ತೊಬ್ಬ ಅಸಿಸ್ಟೆಂಟ್ ಅನ್ನು ಬುಕ್ ಮಾಡಿಕೊಳ್ಳಬೇಕಾಗುತ್ತದೆ.ದೆಹಲಿಯಲ್ಲಿ ಏಪ್ರಿಲ್ ತಿಂಗಳಲ್ಲಿ ಈ ಸ್ಟಾರ್ಟಪ್ ಆರಂಭವಾಗಿದೆ. ಮೊದಲ ತಿಂಗಳಲ್ಲೇ 50 ಬುಕಿಂಗ್ ಆಗಿದೆಯಂತೆ. ದೊಡ್ಡ ಪ್ರಚಾರ ಇಲ್ಲದೆ, ಸೋಷಿಯಲ್ ಮೀಡಿಯಾ ಹಾಗೂ ಬಾಯಿಯಿಂದ ಬಾಯಿಗೆ ಈ ಸ್ಟಾರ್ಟಪ್ ಸೇವೆ ಪ್ರಚಾರ ಪಡೆಯುತ್ತಿದೆಯಂತೆ.
