ಕೆದಿಲ ತೋಡಿನಲ್ಲಿ ಪತ್ತೆಯಾದ ಮಹಿಳೆ ಶವ: ಪತಿಯ ಸಹೋದರನ ಮೇಲೆ ಕೊಲೆ ಆರೋಪ

ಪುತ್ತೂರು: ಕೆದಿಲ ಸಮೀಪ ಕಾಂತಕೋಡಿ ತೋಡಿನಲ್ಲಿ ಮಹಿಳೆಯ ಶವ ಪತ್ತೆಯಾದ ಪ್ರಕರಣ ಇದೀಗ ತಿರುವು ಪಡೆದುಕೊಂಡಿದ್ದು, ಮಹಿಳೆಯ ಪತಿಯ ಸಹೋದರ ಆಕೆಯನ್ನು ಕೊಲೆ ಮಾಡಿರುವುದಾಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಕಾಂತಕೋಡಿ ನಿವಾಸಿ ರಾಮಣ್ಣ ಗೌಡ ಅವರ ಪತ್ನಿ ಮಮತಾ (35) ಮೃತ ಮಹಿಳೆ. ಇವರ ಮೃತದೇಹ ಕೆದಿಲ ಸಮೀರ ಕಾಂತಕೋಡಿ ತೋಡಿನಲ್ಲಿ ಪತ್ತೆಯಾಗಿತ್ತು, ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಮಹಿಳೆ ಪತಿ ರಾಮಣ್ಣ ಗೌಡ ಅವರು ಪುತ್ತೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅದರಲ್ಲಿ ತನ್ನ ಸಹೋದರ ಮಮತಾ ಅವರನ್ನು ಕೊಲೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಸದ್ಯ ಆರೋಪಿ ಲೋಕಯ್ಯ ಆಲಿಯಾಸ್ ಸುಂದರ್ ನಾಪತ್ತೆಯಾಗಿದ್ದು, ಪೊಲೀಸರು ಬಂದನಕ್ಕೆ ಬಲೆ ಬೀಸಿದ್ದಾರೆ.
ದೂರಿನ ಪ್ರಕಾರ
ಮೃತ ಮಮತಾ ರವರ ಗಂಡ ಗಣಪತಿ @ರಾಮಣ್ಣಗೌಡ (44) ರವರು ನೀಡಿದ ದೂರಿನಂತೆ, ಮಮತಾರವರನ್ನು ರಾಮಣ್ಣಗೌಡ ಅವರ ಸಹೋದರ ಆರೋಪಿ ಬಂಟ್ವಾಳ ಕೆದಿಲ ನಿವಾಸಿ ಲೋಕಯ್ಯ @ ಸುಂದರ ತನ್ನ ವಿವಾಹ ವಿಚ್ಛೇದನದ ಪರಿಹಾರ ಹಣದ ವಿಚಾರದಲ್ಲಿ ಉಂಟಾದ ಮನಸ್ತಾಪಕ್ಕೆ ಅಗಸ್ಟ್ 6 ರಂದು ಕೆದಿಲ ಗ್ರಾಮದ ವಳಕುಮೇರು ಎಂಬಲ್ಲಿ ಮಮತಾ ಅವರ ಮೇಲೆ ಹಲ್ಲೆ ನಡೆಸಿದ್ದಾನೆ. ಈ ವೇಳೆ ಮಮತಾ ಪ್ರಜ್ಞೆ ತಪ್ಪಿದ್ದಾರೆ. ಬಳಿಕ ಆರೋಪಿ ಅವರನ್ನು ಹರಿಯುವ ನೀರಿಗೆ ದೂಡಿ ಹಾಕಿ ಕೊಲೆ ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ದೂರಿನ ಮೇರೆಗೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ ಕ್ರ: ಅ.ಕ್ರ:69/2025 ಕಲಂ: 115(2),103(1) BNS 2023 ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.