ಒಂದು ಸೊಳ್ಳೆ ಕಡಿತದಿಂದ ಕೋಮಾಗೆ ಜಾರಿದ ಮಹಿಳೆ

ಸೊಳ್ಳೆಯಿಂದ ಮಲೆರೀಯಾ ಡೆಂಗ್ಯೂ, ಚಿಕನ್ ಗೂನ್ಯಾ ಮುಂತಾದ ಕಾಯಿಲೆಗಳು ಬರುವುದನ್ನು ಬಹುತೇಕ ನಮಗೆಲ್ಲರಿಗೂ ಗೊತ್ತು. ಆದರೆ ಸೊಳ್ಳೆಯೊಂದು ಕಚ್ಚಿ ವ್ಯಕ್ತಿಯೊಬ್ಬರ ಮೆದುಳೇ ಕೆಲಸ ಮಾಡುವುದು ನಿಲ್ಲಿಸಿತು ಎಂದರೆ ನಂಬಲು ಸಾಧ್ಯವೇ? ಆದರೆ ಇಂತಹದೊಂದು ವಿಚಿತ್ರ ಘಟನೆ ಐರ್ಲೆಂಡ್‌ನ ಡಬ್ಲಿನ್‌ನ ಮಹಿಳೆಯೊಬ್ಬರಿಗೆ ಆಗಿದ್ದು, ಈ ವಿಚಾರವೀಗ ಜನರಲ್ಲಿ ಹೊಸ ಭೀತಿಯೊಂದನ್ನು ಹುಟ್ಟು ಹಾಕಿದೆ.

42 ವರ್ಷದ ತಾಯಿಯೊಬ್ಬರು ತಮ್ಮ ಕುಟುಂಬದೊಂದಿಗೆ ಟೆನೆರೈಫ್‌ಗೆ ಪ್ರವಾಸ ಹೋಗಿದ್ದು, ಅಲ್ಲಿ ಸೊಳ್ಳೆಯೊಂದು ಕಚ್ಚಿದ ನಂತರ ಅವರ ಮಿದುಳು ನಿಷ್ಕ್ರಿಯಗೊಂಡು ಅವರು ಕೋಮಾಗೆ ಜಾರಿದಂತಹ ಆಘಾತಕಾರಿ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಇಮ್ಮಾ ಹೀಕೀ ಅವರು ತಮ್ಮ ಪತಿ ಹಾಗೂ ಇಬ್ಬರು ಮಕ್ಕಳೊಂದಿಗೆ ಟೆನೆರಿಫ್‌ನಲ್ಲಿರುವ ಕೊಸ್ಟಾ ಅಡೆಜಾ ಪ್ರದೇಶಕ್ಕೆ 12 ದಿನಗಳ ಪ್ರವಾಸ ಹೋಗಿದ್ದರು. ಆದರೆ ಅಲ್ಲಿ 10 ದಿನ ಕಳೆಯುವ ಮೊದಲೇ ಅವರು ಅನಾರೋಗ್ಯಕ್ಕೀಡಾಗಿದ್ದಾರೆ. ಆರಂಭದಲ್ಲಿ ಅವರು ಅದನ್ನು ಮಾಮೂಲಿ ಸೊಳ್ಳೆ ಕಡಿತ ಎಂದು ನಿರ್ಲಕ್ಷ ವಹಿಸಿದ್ದಾರೆ. ಆದರೆ ಈ ಸೊಳ್ಳೆ ಕಡಿತವೇ ಅವರನ್ನು ವೈದ್ಯಕೀಯ ತುರ್ತು ಪರಿಸ್ಥಿತಿಗೆ ತಳ್ಳಿದ್ದು, ಈಗ ಅವರ ಮಿದುಳು ನಿಷ್ಕ್ರಿಯಗೊಂಡಿದ್ದಲ್ಲದೇ ಅವರು ಕೋಮಾಗ ಜಾರಿದ್ದಾರೆ. ಕೆಲವು ಸಣ್ಣ ಘಟನೆಗಳು ಕೂಡ ನಮ್ಮ ಬದುಕಿನಲ್ಲಿ ಎಂಥಾ ಅನಾಹುತವನ್ನು ಸೃಷ್ಟಿಸಬಹುದು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

ಎಲ್ಲವನ್ನು ಬದಲಿಸಿತು ಒಂದು ಸೊಳ್ಳೆಯ ಕಡಿತ
ಜೂನ್ 23ರಂದು ಇಮಾ ಅವರು ಸ್ಥಳೀಯ ಕ್ಲಿನಿಕ್‌ಗೆ ಹೋಗಲು ಸಿದ್ಧಗೊಳ್ಳುತ್ತಿದ್ದಾಗಲೇ ತಾವು ವಾಸವಿದ್ದ ಹೊಟೇಲ್‌ನ ಮೆಟ್ಟಿಲುಗಳ ಮೇಲೆಯೇ ಹಠಾತ್ ಕುಸಿದು ಬಿದ್ದಿದ್ದಾರೆ. ಕೂಡಲೇ ಅವರ ಪತಿ ಸ್ಟೀಫನ್ ಬ್ರೋಗಮ್ ಅವರ ಸಹಾಯಕ್ಕೆ ಧಾವಿಸಿ ಬಂದರಾದರೂ, ಈ ಕುಸಿತದಿಂದ ಅವರ ತಲೆಗೆ ಪೆಟ್ಟಾಗಿದ್ದು, ಕತ್ತಿನ ಮೂಳೆ ಮುರಿದಿದೆ.
ಆದರೆ ಅವರ ಕುಟುಂಬವೂ ವಿವರಿಸಿದಂತೆ ಸೊಳ್ಳೆ ಕಡಿತದಿಂದಾಗಿ ಇಮಾಳಿಗೆ ಮೈಯೆಲ್ಲಾ ತುರಿಕೆ ಆರಂಭವಾಗಿ ಬೊಬ್ಬೆಗಳು ಎದ್ದಿದ್ದವು. ಆಕೆ ಆಸ್ಪತ್ರೆಗೆಂದು ಹೋದಾಗ ಆಕೆಗೆ ಅಲ್ಲಿ ಇಂಜೆಕ್ಷನ್ ನೀಡಿದ್ದರು. ಸೊಳ್ಳೆ ಕಡಿತದಿಂದ ಮೈಯಲ್ಲಿ ಉಂಟಾದ ತುರಿಕೆಗಳು ಹಾಗೂ ನೋವನ್ನು ಈ ಇಂಜೆಕ್ಷನ್ ಕಡಿಮೆ ಮಾಡಬಹುದು ಎಂದು ಅವರು ಭಾವಿಸಿದರಂತೆ. ಆದರೂ ಅವರು ಸಂಪೂರ್ಣವಾಗಿ ಗುಣಮುಖರಾಗಿರಲಿಲ್ಲ, ಆದರೂ ಆಕೆ ಎಲ್ಲಾ ಅಮ್ಮಂದಿರಂತೆ ತಮ್ಮ ಮಕ್ಕಳಿಗಾಗಿ ಈ ಪ್ರವಾಸವನ್ನು ಮುಂದುವರೆಸಿದ್ದರು.
ಆದರೆ ಇತ್ತ ಅವರ ದೇಹದ ಎಲ್ಲಾ ಭಾಗದಲ್ಲಿ ಸೊಳ್ಳೆ ಕಡಿತದಿಂದಾಗಿ ಊದಿಕೊಂಡಿದ್ದಲ್ಲದೇ ಅವರು ತೀವ್ರವಾಗಿ ಕಿರಿಕಿರಿಯನ್ನು ಅನುಭವಿಸುತ್ತಿದ್ದರು. ದೇಹದ ಕೆಲವು ಭಾಗದಲ್ಲಿ ರಕ್ತಸ್ರಾವವೂ ಆರಂಭವಾಗಿ ರಕ್ತ ಬೆಡ್ ಮೇಲೂ ಸೋರಿಕೆ ಆಗಿತ್ತು. ಇಷ್ಟಾದರೂ ಇಮಾ ಅವರು ಮಕ್ಕಳಿಗಾಗಿ ಈ ಕಿರಿಕಿರಿಯನ್ನು ಸಹಿಸಿಕೊಂಡು ಆರೋಗ್ಯದ ಬಗ್ಗೆ ಸ್ವಲ್ಪ ಆಸಡ್ಡೆ ಮಾಡಿದ್ದರು.
ಆದರೆ ಸೊಳ್ಳೆ ಕಡಿತವೊಂದು ಸೊಳ್ಳೆ ಸಂಬಂಧಿ ಮಾರಕ ಸೋಂಕಿಗೆ ಕಾರಣವಾಗಬಹುದು ಎಂದು ಯಾರು ಭಾವಿಸಿರಲಿಲ್ಲ. ಆದರೆ ಈಗ ವೈದ್ಯರು ಸೊಳ್ಳೆ ಕಡಿತವೇ ಮೆಡಿಕಲ್ ರಿಯಾಕ್ಷನ್‌ಗೆ ಕಾರಣವಾಗಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಬಹುಶಃ ಸೋಂಕು, ಉಷ್ಣತೆ, ಔಷಧಿ ಮತ್ತು ಹಾಗೂ ದೇಹದ ಆಯಾಸ ಎಲ್ಲವೂ ಮಿಳಿತವಾಗಿ ಆಕೆ ಮೂರ್ಛೆ ಹೋಗಿರಬಹುದು ಎಂದು ವೈದರು ಹೇಳುತ್ತಿದ್ದಾರೆ.
ಆರೋಗ್ಯ ತಜ್ಞರ ಪ್ರಕಾರ, ಕೀಟಗಳ ಕಡಿತದಿಂದ ಉಂಟಾಗುವ ತೀವ್ರ ಅಲರ್ಜಿ ಅಥವಾ ಸಾಂಕ್ರಾಮಿಕ ಪ್ರತಿಕ್ರಿಯೆಗಳು ಅಪರೂಪವಾಗಿದ್ದರೂ, ಎನ್ಸೆಫಾಲಿಟಿಸ್ ಅಥವಾ ರಕ್ತದೊತ್ತಡ ಕುಸಿತದಂತಹ ತೊಡಕುಗಳಿಗೆ ಇದು ಕಾರಣವಾಗಬಹುದು, ಇದು ಕುಸಿದು ಬೀಳುವುದು ಮೂರ್ಛೆ ಹೋಗುವುದಕ್ಕೆ ಕಾರಣವಾಗಬಹುದು. ಇತ್ತ ಕುಸಿದು ಬಿದ್ದ ಇಮಾಗೆ ಆಸ್ಪತ್ರೆಯಲ್ಲಿ ನಡೆಸಿದ ಸಿಟಿ ಸ್ಕ್ಯಾನ್‌ನಲ್ಲಿ ಮೆದುಳಿನಲ್ಲಿ ರಕ್ತಸ್ರಾವ ಮತ್ತು ಕುತ್ತಿಗೆ ಮುರಿತ ದೃಢಪಟ್ಟಿದೆ. ಆಕೆಯ ಮೆದುಳಿನಿಂದ ರಕ್ತ ಹೆಪ್ಪುಗಟ್ಟುವಿಕೆಯನ್ನು ತೆಗೆದುಹಾಕಲು ತುರ್ತು ಶಸ್ತ್ರಚಿಕಿತ್ಸೆಯನ್ನು ನಡೆಸಲಾಗಿದೆ. ಆದರೆ ಈಗ ಅವರು ಕೋಮಾದಲ್ಲಿ ಇದ್ದಾರೆ.
ಎಮ್ಮಾ ತೀವ್ರ ನಿಗಾದಲ್ಲಿ ತನ್ನ ಹೋರಾಟವನ್ನು ಮುಂದುವರಿಸುತ್ತಿದ್ದು,, ಆಕೆಯ ಕುಟುಂಬವು ಪ್ರವಾಸ ಬಂದ ಟೆನೆರೈಫ್‌ನಲ್ಲಿ ಸಿಲುಕಿಕೊಂಡಿದ್ದು, ಸ್ವಯಂ ಉದ್ಯೋಗಿ ಪ್ಲಾಸ್ಟರರ್ ಆಗಿರುವ ಅವರ ಸಂಗಾತಿ ಈಗ ತಮ್ಮ ಇಬ್ಬರು ಮಕ್ಕಳಾದ 13 ವರ್ಷದ ಸೋಫಿ ಮತ್ತು 7 ವರ್ಷದ ಬಾಬಿಯನ್ನು ನೋಡಿಕೊಳ್ಳುತ್ತಿದ್ದು, ಹೆಚ್ಚುತ್ತಿರುವ ಆಸ್ಪತ್ರೆ ವೆಚ್ಚಗಳನ್ನು ನಿರ್ವಹಿಸಲು ಪರದಾಡುತ್ತಿದ್ದಾರೆ.
ಸೊಳ್ಳೆ ಕಡಿತ ಇಷ್ಟೊಂದು ಹಾನಿಕಾರಕವೇ?
ಉಷ್ಣವಲಯದ ಅಥವಾ ಬೆಚ್ಚಗಿನ ರಜಾ ತಾಣಗಳಲ್ಲಿ ಸೊಳ್ಳೆ ಕಡಿತವನ್ನು ಸಾಮಾನ್ಯವಾಗಿ ಸಾಮಾನ್ಯ ತೊಂದರೆ ಎಂದು ಪರಿಗಣಿಸಲಾಗುತ್ತದೆ. ಆದರೆ ಈ ಪ್ರಕರಣದಲ್ಲಿ ಸೊಳ್ಳೆ ಜೀವಕ್ಕೆ ಎರವಾಗಿದೆ. ಇಂತಹ ಘಟನೆಗಳು ಅಪರೂಪವಾಗಿದ್ದರೂ, ಕೆಲವು ಸೊಳ್ಳೆ ಪ್ರಭೇದಗಳು ಡೆಂಗ್ಯೂ, ಜಿಕಾ ವೈರಸ್ ಅಥವಾ ಎನ್ಸೆಫಾಲಿಟಿಸ್‌ನಂತಹ ಗಂಭೀರ ಸೋಂಕುಗಳನ್ನು ಉಂಟುಮಾಡಬಹುದು, ಇವುಗಳಲ್ಲಿ ಯಾವುದಾದರೂ ತ್ವರಿತವಾಗಿ ಚಿಕಿತ್ಸೆ ನೀಡದಿದ್ದರೆ ನರವೈಜ್ಞಾನಿಕ ತೊಡಕುಗಳಿಗೆ ಕಾರಣವಾಗಬಹುದು.
ಹೀಗಿದ್ದೂ ಎಮ್ಮಾಳಿಗೆ ಸೊಳ್ಳೆ ಕಡಿತದಿಂದ ಉಂಟಾದ ನಿಖರವಾದ ವೈದ್ಯಕೀಯ ಸ್ಥಿತಿಯನ್ನು ವೈದ್ಯರು ಇನ್ನೂ ದೃಢಪಡಿಸಿಲ್ಲ. ಆದರೂ ಕಾಲಾನುಕ್ರಮದ ರೋಗ ಲಕ್ಷಣಗಳು ಆಕೆಯ ಆರೋಗ್ಯವು ಸೋಂಕಿನಿಂದ ಪ್ರಭಾವಿತವಾಗಿದೆ ಎಂದು ಬಲವಾಗಿ ಸೂಚಿಸುತ್ತವೆ, ಇದು ತಲೆತಿರುಗುವಿಕೆ, ಕುಸಿತ ಮತ್ತು ಆಘಾತಕಾರಿ ಮಿದುಳಿನ ಗಾಯಕ್ಕೆ ಕಾರಣವಾಗುತ್ತದೆ ಎಂದು ಅಲ್ಲಿನ ವೈದ್ಯರು ಹೇಳುತ್ತಿದ್ದಾರೆ.
