ನಿತ್ಯೋಪಯೋಗಿ ವಸ್ತುಗಳ ಮೇಲೆ GST ಕಡಿತ? ಶೇ.12ರ ಸ್ಲ್ಯಾಬ್ ತೆಗೆದುಹಾಕಲು ಕೇಂದ್ರ ಚಿಂತನೆ!

ನವದೆಹಲಿ: ಕೆಲವು ನಿತ್ಯೋಪಯೋಗಿ ವಸ್ತುಗಳ ಮೇಲೆ ಇರುವ ಶೇ. 12ರಷ್ಟು ಸರಕು ಮತ್ತು ಸೇವಾ ತೆರಿಗೆಯನ್ನು (ಜಿಎಸ್ಟಿ) ಶೇ. 5ಕ್ಕೆ ಇಳಿಸಲು ಅಥವಾ ಶೇ. 12ರ ಸ್ಲಾಯಬ್ಅನ್ನು ಸಂಪೂರ್ಣವಾಗಿ ತೆಗೆದುಹಾಕಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ.

ಈ ಕ್ರಮ ಜಾರಿಗೆ ಬಂದರೆ ಮಧ್ಯಮ ವರ್ಗ ಮತ್ತು ಕಡಿಮೆ ಆದಾಯದ ಕುಟುಂಬಗಳ ದೈನಂದಿನ ಬಳಕೆಯ ವಸ್ತುಗಳ ಬೆಲೆ ಕಡಿಮೆಯಾಗಲಿದೆ.
ಸರ್ಕಾರಕ್ಕೆ 40ರಿಂದ 50 ಸಾವಿರ ಕೋಟಿ ರೂ. ಹೊರೆ ಬೀಳಲಿದೆ. ಈ ಕುರಿತ ಅಂತಿಮ ತೀರ್ಮಾನವನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ಈ ತಿಂಗಳ ಕೊನೆಗೆ ನಡೆಯಲಿರುವ 56ನೇ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ಕೈಗೊಳ್ಳುವ ಸಾಧ್ಯತೆ ಇದೆ.
ಆರೋಗ್ಯ ವಿಮೆ ಮೇಲಿನ ಜಿಎಸ್ಟಿ ಈಗ ಶೇ. 18ರಷ್ಟಿದ್ದು ಅದನ್ನು ಇಳಿಸುವ ಸಾಧ್ಯತೆ ಇದೆ. ಜೀವವಿಮೆ ಮತ್ತು ಆರೋಗ್ಯ ವಿಮೆಯ ಪ್ರೀಮಿಯಂಗಳ ಮೇಲಿನ ತೆರಿಗೆ ವಿಷಯವೂ ಚರ್ಚೆಗೆ ಬರಬಹುದು. ವಾಣಿಜ್ಯ ಡ್ರೋನ್ಗಳ ಮೇಲಿನ ಜಿಎಸ್ಟಿ ದರವನ್ನು ಶೇ. 28ರಿಂದ ಶೇ. 5ಕ್ಕೆ ಇಳಿಸುವ ಪ್ರಸ್ತಾವನೆಯೂ ಇದೆ. ಪ್ರಸ್ತುತ, ವ್ಯಾಪಾರಕ್ಕೆ ಮತ್ತು ವೈಯಕ್ತಿಕ ಕಾರಣಕ್ಕೆ ಬಳಕೆ ಆಗುತ್ತಿರುವ ಡ್ರೋನ್ಗಳಿಗೆ ಪ್ರತ್ಯೇಕ ದರಗಳಿದ್ದು ಇದರಿಂದ ಉದ್ಯಮದಲ್ಲಿ ಗೊಂದಲ ಉಂಟಾಗಿದೆ. ಆನ್ಲೈನ್ ಗೇಮಿಂಗ್, ಇ-ಕಾಮರ್ಸ್, ರಿಯಲ್ ಎಸ್ಟೇಟ್, ಕ್ರಿಪ್ಟೋಕರೆನ್ಸಿಗೆ ಸಂಬಂಧಿಸಿದ ಜಿಎಸ್ಟಿ ನಿಯಮಗಳ ಬಗ್ಗೆಯೂ ಸಮಾಲೋಚನೆ ನಡೆಯಲಿದೆ.
ಯಾವುದಕ್ಕೆ ಅನ್ವಯ?: ಈಗ ಶೇ. 12 ಜಿಎಸ್ಟಿ ಇರುವ ವಸ್ತುಗಳು ಇಂತಿವೆ. ಟೂಥ್ಪೇಸ್ಟ್, ಟೂಥ್ಪೌಡರ್, ಸ್ಯಾನಿಟರಿ ನ್ಯಾಪ್ಕಿನ್, ಅಲ್ಯುಮಿನಿಯಂ-ಸ್ಟೀಲ್ ಅಡುಗೆ ಪಾತ್ರೆಗಳು, ಸಿದ್ಧ ಉಡುಪು, ಶೂ, ಕೊಡೆ, ಹೊಲಿಗೆಯಂತ್ರ, ಕುಕ್ಕರ್, ಎಲೆಕ್ಟ್ರಿಕ್ ಇಸ್ತ್ರಿಪೆಟ್ಟಿಗೆ, ಗೀಸರ್, ಬೈಸಿಕಲ್, ಹೇರ್ ಆಯಿಲ್, ಸಾಬೂನುಗಳು, ವಾಟರ್ಫಿಲ್ಟರ್, ವ್ಯಾಕ್ಯೂಂಕ್ಲೀನರ್, ವಾಷಿಂಗ್ವುಷಿನ್, ವ್ಯಾಕ್ಸಿನ್ಗಳು, ಕೆಲವು ನಿರ್ದಿಷ್ಟ ಡಯಗ್ನೋಸ್ಟಿಕ್ ಕಿಟ್ಗಳು, ಆಯುರ್ವೆದ, ಯುನಾನಿ ಔಷಧಗಳು, ಎಕ್ಸರ್ಸೈಜ್ ಬುಕ್ಸ್, ಜಾಮೆಟ್ರಿ ಬಾಕ್ಸ್, ಡ್ರಾಯಿಂಗ್-ಕಲರಿಂಗ್ ಬುಕ್ ಇತ್ಯಾದಿ.
ಮದ್ಯ, ಫ್ಯಾನ್ಸಿ ಕಾರು ದುಬಾರಿ?
ಜಿಎಸ್ಟಿ ವ್ಯವಸ್ಥೆಯಲ್ಲಿ ತಂಬಾಕು ಉತ್ಪನ್ನಗಳು ಮತ್ತು ಆಟೋಮೊಬೈಲ್ಗಳ ಮೇಲೆ ಆರೋಗ್ಯ ಮತ್ತು ಶುದ್ಧ ಇಂಧನ ಸೆಸ್ ವಿಧಿಸುವ ಪ್ರಸ್ತಾವನೆ ಅಂಗೀಕಾರಗೊಂಡರೆ ಸಿಗರೇಟ್, ಕಾರ್ಬೆನೇಟೆಡ್ ಪಾನೀಯ, ದುಬಾರಿ ಕಾರು ಮುಂತಾದವು ಮತ್ತಷ್ಟು ದುಬಾರಿಯಾಗುವ ಸಾಧ್ಯತೆ ಇದೆ. ಕೇಂದ್ರ ವಿತ್ತ ಖಾತೆ ಸಹಾಯಕ ಸಚಿವ ಪಂಕಜ್ ಚೌಧರಿ ಅಧ್ಯಕ್ಷತೆಯ ಸಚಿವರ ಗುಂಪು ಈ ಕುರಿತು ಚರ್ಚಿಸಲಿದೆ ಎಂದು ಮೂಲಗಳು ತಿಳಿಸಿವೆ.