ಉಪ್ಪಿನಂಗಡಿ ನೇತ್ರಾವತಿ ನದಿಯಲ್ಲಿದ್ದ ಕಾಡಾನೆಗಳು ಕೊನೆಗೂ ಕಾಡಿನತ್ತ ವಾಪಸ್

ಉಪ್ಪಿನಂಗಡಿ : ಉಪ್ಪಿನಂಗಡಿ ನೇತ್ರಾವತಿ ನದಿ ಪರಿಸರದಲ್ಲಿ ಕಳೆದ ಕೆಲವು ದಿನಗಳಿಂದ ವಿಹರಿಸುತ್ತಿದ್ದ ಜೋಡಿ ಕಾಡಾನೆ ಇದೀಗ ಕಾಡಿನತ್ತ ತೆರಳಿದೆ.ಕಳೆದ ಶನಿವಾರ ರಾತ್ರಿ ತೋಟದಲ್ಲಿ ಇದ್ದ ಕಾಡಾನೆಗಳು ರಾತ್ರಿ ವೇಳೆ ಸರಳೀಕಟ್ಟೆ, ಪಿಲಿಗೂಡು, ಅಂಬೊಟ್ಟು ಮಾರ್ಗವಾಗಿ ಇಳಂತಿಲ ಗ್ರಾಮದ ಅಂಡೆತಡ್ಕ ಎಂಬಲ್ಲಿಂದ ನೇತ್ರಾವತಿ ನದಿಗಿಳಿದಿದೆ. ಈ ಮುಂಜಾನೆ ವೇಳೆ ನದಿಯಲ್ಲಿ ಆನೆಯ ಇರುವಿಕೆ ಸ್ಥಳೀಯರಿಗೆ ತಿಳಿದ ಕಾರಣ ಆನೆಗಳನ್ನು ನೋಡಲು ನದಿಯತ್ತ ಜನ ತಂಡೋಪತಂಡವಾಗಿ ಆಗಮಿಸತೊಡಗಿದರು. ಇದರಿಂದ ಗಲಿಬಿಲಿಗೊಂಡ ಆನೆ ನದಿಯ ಎರಡೂ ಪಾರ್ಶ್ವಕ್ಕೂ ಸಾಗಿ ದಡದತ್ತ ಹೋಗಲು ಸಾಧ್ಯವಾಗದೆ ಬಳಿಕ ನದಿ ಮಧ್ಯದ ದಿನ್ನೆಯಲ್ಲಿ ನಿಂತುಕೊಂಡಿತ್ತು.

ನದಿಯಲ್ಲಿ ಕಾಣಿಸಿದ್ದ ಕಾಡಾನೆಗಳು ಜನವಸತಿ ಪ್ರದೇಶದತ್ತ ಬಾರದಂತೆ ಅರಣ್ಯ, ಪೊಲೀಸ್ ಇಲಾಖೆ, ಹೋಂಗಾರ್ಡ್ ಸಿಬಂದಿ ನಿಗಾ ಇರಿಸಿ ಕಾರ್ಯಾಚರಣೆ ನಡೆಸಿದರು. ಕೊನೆಗೆ ಬಜತ್ತೂರು ಗ್ರಾಮದ ಬೆದ್ರೋಡಿಯ ಸುದೆಪಿಲ ಕಾಡಿನತ್ತ ಕಾಡಾನೆ ಹೋಯಿತು. ನದಿಯ ಉಭಯ ದಿಕ್ಕಿನಲ್ಲೂ ಜಮಾಯಿಸಿದ ಜನ ಸಮೂಹದಿಂದಾಗಿ ನದಿಯಲ್ಲೇ ದಿಗ್ಬಂಧನಕ್ಕೀಡಾಗಿತ್ತು.
