ಪತಿಯನ್ನು ಕೊಂದು ಮಕ್ಕಳೊಂದಿಗೆ ಶವದ ಪಕ್ಕದಲ್ಲೇ ಮಲಗಿದ್ದ ಪತ್ನಿ; ದರೋಡೆ ಕಥೆ ಹೆಣೆದಿದ್ದ ಮಹಿಳೆ ಅಂದರ್”

ಅದ್ರೋಹಾ: ಉತ್ತರ ಪ್ರದೇಶದ ಅದ್ರೋಹಾ ಜಿಲ್ಲೆಯಲ್ಲಿ ಪತಿಯ ಕೊಲೆ ಮಾಡಿದ ಆರೋಪದಲ್ಲಿ ಮಹಿಳೆ, ಆಕೆಯ ಪ್ರಿಯಕರ ಹಾಗೂ ಆತನ ಸ್ನೇಹಿತನನ್ನು ಪೊಲೀಸರು ಬಂಧಿಸಿದ್ದಾರೆ.
ತನ್ನ ಮಕ್ಕಳೊಂದಿಗೆ ರಾತ್ರಿಯಿಡೀ ಪತಿಯ ಶವದ ಪಕ್ಕದಲ್ಲಿಯೇ ಮಲಗಿದ್ದ ಮಹಿಳೆ ಬಳಿಕ ದರೋಡೆ ಕಥೆಯನ್ನು ಹೆಣೆದಿದ್ದಳು.
ಕೊಲೆಯಾಗಿರುವ ಮೆಹ್ರಾಜ್ ಅದ್ರೋಹಾದ ಪಿಪಲೌತಿ ಕಲಾ ಗ್ರಾಮದ ನಿವಾಸಿಯಾಗಿದ್ದು, ಗಾರೆ ಕೆಲಸ ಮಾಡುತ್ತಿದ್ದ. ಆತನ ಪತ್ನಿ ರುಹಿ ತನ್ನ ತಂಗಿಯ ಭಾವ ಫರ್ಮಾನ್ ಜೊತೆ ಅನೈತಿಕ ಸಂಬಂಧ ಹೊಂದಿದ್ದು, ಇಬ್ಬರೂ ಜೊತೆಯಾಗಿ ವಾಸವಿರಲು ಬಯಸಿದ್ದರು. ಈ ಸಂಬಂಧ ಮೆಹ್ರಾಜ್ ಗೆ ಗೊತ್ತಾದಾಗ ಅದನ್ನು ಬಲವಾಗಿ ವಿರೋಧಿಸಿದ್ದ.

ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನನ್ನು ಕೊಲ್ಲಲು ಸಂಚು ರೂಪಿಸಿದ್ದ ರುಹಿ, ಆತನ ಊಟದಲ್ಲಿ ಮತ್ತೇರಿಸುವ ಮದ್ದನ್ನು ಸೇರಿಸಿದ್ದಳು. ರಾತ್ರಿ ಫರ್ಮಾನ್ ಹಾಗೂ ಆತನ ಸ್ನೇಹಿತ ಅದ್ವಾನ್ ಅನ್ನು ಮನೆಗೆ ಕರೆಸಿಕೊಂಡಿದ್ದಳು.
ಮೆಹ್ರಾಜ್ನ ಕೈಕಾಲುಗಳನ್ನು ಕಟ್ಟಿದ ಅವರು ಬಳಿಕ ಹರಿತವಾದ ಚೂರಿಯಿಂದ ಆತನ ಕತ್ತನ್ನು ಸೀಳಿ ಕೊಲೆ ಮಾಡಿದ್ದರು. ಈ ಘೋರ ಕೃತ್ಯದ ಬಳಿಕ ರುಹಿ ತನ್ನ ಮಕ್ಕಳೊಂದಿಗೆ ರಾತ್ರಿಯಿಡೀ ಮೆಹ್ರಾಜ್ ನ ಶವದ ಪಕ್ಕದಲ್ಲಿಯೇ ಮಂಚದಲ್ಲಿ ಮಲಗಿದ್ದಳು.
ಮರುದಿನ ಬೆಳಿಗ್ಗೆ ಮೆಹ್ರಾಜ್ ನ ತಂದೆ ಮಗನ ಮನೆಗೆ ಬಂದಾಗ ಆತ ವರಾಂಡಾದ ಮಂಚದಲ್ಲಿ ಬಿದ್ದಿರುವುದನ್ನು ಕಂಡಿದ್ದರು. ಮೆಹ್ರಾಜ್ನ ಕೈಕಾಲುಗಳು ಇನ್ನೂ ಕಟ್ಟಿಹಾಕಿದ ಸ್ಥಿತಿಯಲ್ಲಿಯೇ ಇದ್ದವು.
ತನ್ನನ್ನು ರಕ್ಷಿಸಿಕೊಳ್ಳಲು ರುಹಿ ದರೋಡೆ ಕಥೆಯನ್ನು ಹೆಣೆದಿದ್ದಳು. ಆದರೆ ಮೆಹ್ರಾಜ್ನ ತಂದೆ ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದರು. ರುಹಿಯನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು ವಿಚಾರಣೆ ನಡೆಸಿದಾಗ ಕೊಲೆಯ ಹಿಂದಿನ ಸತ್ಯ ಬಯಲಾಗಿತ್ತು.
ಆರೋಪಿಗಳಿಂದ ಕೊಲೆಗೆ ಬಳಸಿದ್ದ ಎರಡು ಚೂರಿಗಳು ಮತ್ತು ಎರಡು ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಂಡಿರುವ ಪೊಲೀಸರು ಅವರನ್ನು ಜೈಲಿಗೆ ತಳ್ಳಿ ಮುಂದಿನ ತನಿಖೆ ನಡೆಸುತ್ತಿದ್ದಾರೆ.