ಮೇ ತಿಂಗಳಿನಲ್ಲಿ ರಾಜ್ಯಾದ್ಯಂತ ವರುಣನ ಆರ್ಭಟ; ಕರಾವಳಿಗೂ ಹವಮಾನ ಇಲಾಖೆಯಿಂದ ಗುಡ್ ನ್ಯೂಸ್

ಬೆಂಗಳೂರು: ಬಿರು ಬೀಸಿಲಿನಿಂದ ಕಂಗೆಟ್ಟಿದ್ದ ಕರಾವಳಿಗೆ ಇದೀಗ ಹವಮಾನ ಇಲಾಖೆ ಗುಡ್ ನ್ಯೂಸ್ ಕೊಟ್ಟಿದ್ದು ಮೇ ತಿಂಗಳಿನಲ್ಲಿ ಸಾಮಾನ್ಯ ಮಳೆಯಾಗಲಿದೆ ಎಂದು ತಿಳಿಸಿದೆ.

ಈಗಾಗಲೇ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆಯಾಗುತ್ತಿದ್ದು. ಇದೀಗ ಮೇ ತಿಂಗಳಿನಲ್ಲಿ ದೇಶದಾದ್ಯಂತ ವಾಡಿಕೆಗಿಂತ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮೇ ನಲ್ಲಿ ಸುರಿಯುವ ಮಳೆಯು ದೀರ್ಘಾವಧಿಯ ಸರಾಸರಿಗಿಂತ 110 ಪ್ರತಿಶತಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಇರಲಿದೆ ಎಂದು ಅಂದಾಜಿಸಲಾಗಿದೆ.
ಮಳೆಯ ಜತೆಗೆ ಗಾಳಿಯ ವೇಗ ಗಂಟೆಗೆ 40 ರಿಂದ 60 ಕಿ.ಮೀ ಇರಲಿದೆ. ಮಳೆಯಿಂದಾಗಿ ಉತ್ತರ ಭಾರತ ಮತ್ತು ಮಧ್ಯ ಭಾರತದ ಹಲವು ಭಾಗಗಳಲ್ಲಿ ತಾಪಮಾನ ಇಳಿಕೆಯಾಗಲಿದೆ. ಪಶ್ಚಿಮ ಬಂಗಾಳ, ಸಿಕ್ಕಿಂ, ಈಶಾನ್ಯ ರಾಜ್ಯಗಳಲ್ಲಿ ಮೇ 5ರವರೆಗೆ ಗುಡುಗು ಸಹಿತ ಮಳೆಯಾಗಲಿದ್ದು, ಪ್ರವಾಹ ಪರಿಸ್ಥಿತಿ ಎದುರಾಗಲಿದೆ ಎಂದು ಇಲಾಖೆ ಹೇಳಿದೆ.
ರಾಜ್ಯದಲ್ಲಿ ಪ್ರಮುಖವಾಗಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದ ಕೆಲವು ಭಾಗಗಳಲ್ಲಿ ಸಾಮಾನ್ಯ ಮಳೆಯಾಗಲಿದ್ದು, ಉತ್ತರ ಕರ್ನಾಟಕದ ಜಿಲ್ಲೆಗಳಾದ ಗದಗ, ಬಳ್ಳಾರಿ, ರಾಯಚೂರು, ಕಲಬುರಗಿ, ವಿಜಯಪುರವನ್ನೂ ಒಳಗೊಂಡು ದಕ್ಷಿಣ ಭಾಗದ ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಬೆಂಗಳೂರು ಸೇರಿದಂತೆ ಬಹುತೇಕ ಜಿಲ್ಲೆಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆ ಸುರಿಯಲಿದೆ.