ವಿಟ್ಲ: ಮನೆಯ ಮುಂದೆ ಆಟವಾಡುತ್ತಿದ್ದ ಮಗುವಿನ ಸರ ಕಳವು; ಕೆಟಿಎಂ ಬೈಕ್ ಸವಾರನ ದುಸ್ಸಾಹಸ

ವಿಟ್ಲ: ಮನೆಯ ಪರಿಸರದಲ್ಲಿ ಆಟವಾಡುತ್ತಿದ್ದ ಮಗುವಿನ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಬೈಕಿನಲ್ಲಿ ಬಂದ ಅಪರಿಚಿತನೋರ್ವ ಕಸಿದು ಪರಾರಿಯಾದ ಘಟನೆ ವಿಟ್ಲ ಪಡೂರು ಗ್ರಾಮದ ಕೋಡಪದವು ಮದಕ ಎಂಬಲ್ಲಿ ನಡೆದಿದೆ.
ಘಟನೆಯ ವಿವರ:
ಕೋಡಪದವು ಮದಕದ ನಿವಾಸಿಯೊಬ್ಬರ ಮಗು ಮನೆಯ ಮುಂಭಾಗ ಆಟವಾಡುತ್ತಿದ್ದಾಗ, ಕೆಟಿಎಂ (KTM) ಬೈಕಿನಲ್ಲಿ ಬಂದ ವ್ಯಕ್ತಿಯೋರ್ವ ಮಗುವಿನ ಸರವನ್ನು ಕಿತ್ತುಕೊಂಡು ಪರಾರಿಯಾಗಿದ್ದಾನೆ. ಈ ಕೃತ್ಯದ ದೃಶ್ಯವು ಸಮೀಪದ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬೈಕಿನಲ್ಲಿ ಸವಾರನು ಹೆಲೈಟ್ ಧರಿಸಿ ವೇಗವಾಗಿ ಚಲಿಸುತ್ತಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಕಂಡುಬಂದಿದೆ.
ವಿಟ್ಲ ಪೊಲೀಸರು ತಕ್ಷಣವೇ ಕಾರ್ಯಪ್ರವೃತ್ತರಾಗಿ, ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಆರೋಪಿಯನ್ನು ಪತ್ತೆ ಹಚ್ಚಬೇಕು. ಈ ಭಾಗದಲ್ಲಿ ಗಸ್ತು ಹೆಚ್ಚಿಸಿ, ಜನಸಾಮಾನ್ಯರು ಭಯರಹಿತವಾಗಿ ಜೀವನ ನಡೆಸಲು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
