ಮೋದಿ ಅಣಕಿಸಿ ವಿಡಿಯೋ ಪೋಸ್ಟ್: ಮಧ್ಯಪ್ರದೇಶದಲ್ಲಿ ಸರ್ಕಾರಿ ಶಾಲಾ ಶಿಕ್ಷಕ ಸಸ್ಪೆಂಡ್

ಭೋಪಾಲ: ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಏರಿಕೆ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಣಕಿಸಿ ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಪೋಸ್ಟ್ ಹಾಕಿದ ಮಧ್ಯಪ್ರದೇಶದ ಸರಕಾರಿ ಶಾಲಾ ಶಿಕ್ಷಕರೊಬ್ಬರನ್ನು ಅಮಾನತುಗೊಳಿಸಲಾಗಿದೆ.
ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ಪೊಕ್ರಿ ಬ್ಲಾಕ್‌ನ ಸರಕಾರಿ ಶಾಲೆಯ ಶಿಕ್ಷಕ ಸಾಕೇತ್ ಪುರೋಹಿತ್ ಅವರು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ಒಂದನ್ನು ಪೋಸ್ಟ್ ಮಾಡಿದ್ದರು. ಈ ಪೋಸ್ಟ್‌ನಲ್ಲಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಂತೆ ಮಾತನಾಡುತ್ತಾ, ಏರುತ್ತಿರುವ ಎಲ್‌ಪಿಜಿ ಸಿಲಿಂಡರ್ ಬೆಲೆ ಹಾಗೂ ಅವುಗಳ ಕೊರತೆಯನ್ನು ಉಲ್ಲೇಖಿಸಿದ್ದರು.

ಈ ಕುರಿತು ಪಿಛೋರೆ ವಿಧಾನ ಸಭಾ ಕ್ಷೇತ್ರ ಬಿಜೆಪಿ ಶಾಸಕ ಪ್ರೀತಮ್ ಲೋದಿ ಅವರು ಶಿವಪುರಿ ಜಿಲ್ಲಾ ಶಿಕ್ಷಣ ಅಧಿಕಾರಿ (ಡಿಇಒ)ಗೆ ದೂರು ನೀಡಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ ಡಿಇಒ ಆರೋಪದ ಕುರಿತು ತನಿಖೆ ನಡೆಸಿದ್ದಾರೆ. ಅನಂತರ ಸಾಕೇತ್ ಪುರೋಹಿತ್ ಅವರನ್ನು ಶುಕ್ರವಾರ ಅಮಾನತುಗೊಳಿಸಿದ್ದಾರೆ. ಅಮಾನತು ಆದೇಶದಲ್ಲಿ ಡಿಇಒ ಸಾಕೇತ್ ಪುರೋಹಿತ್ ಅವರು ಪೋಸ್ಟ್ ಮಾಡಿದ ವೀಡಿಯೊ ಅಶಾಂತಿ ಸೃಷ್ಟಿಸುವ ಉದ್ದೇಶವನ್ನು ಹೊಂದಿದೆ ಎಂದು ಹೇಳಿದ್ದಾರೆ.
ಸರಕಾರಿ ನಿಯಮಗಳಿಗೆ ಅನುಸಾರವಾಗಿ ಮಧ್ಯಪ್ರದೇಶ ನಾಗರಿಕ ಸೇವೆಗಳ ಕಾಯ್ದೆ 1965ರ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ತನ್ನ ವಿರುದ್ಧದ ಕ್ರಮದ ಬಗ್ಗೆ ಪ್ರತಿಕ್ರಿಯಿಸಿರುವ ಸಾಕೇತ್ ಪುರೋಹಿತ್, ತನಗೆ ನೋಟಿಸು ನೀಡದೆ, ತನ್ನ ಮಾತುಗಳನ್ನು ಆಲಿಸದೆ ಏಕಪಕ್ಷೀಯವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ.
ಎಲ್‌ಪಿಜಿ ಸಿಲಿಂಡರ್ ಬೆಲೆ ಏರಿಕೆ ಹಾಗೂ ವ್ಯತ್ಯಯದ ಕುರಿತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಣಕಿಸುವ 58 ಸೆಕೆಂಡುಗಳ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಇತ್ತೀಚೆಗೆ ವೈರಲ್ ಆಗಿತ್ತು.