ಉಳ್ಳಾಲ: ಇಸ್ರೇಲ್ಗೆ ಮರಳಲು ಸಿದ್ಧತೆ ನಡೆಸುತ್ತಿದ್ದ ಯುವಕ ಆತ್ಮಹ*ತ್ಯೆ; ಅನಾರೋಗ್ಯದಿಂದ ನೊಂದು ಸಾವಿಗೆ ಶರಣಾದ ಶಂಕೆ

ಉಳ್ಳಾಲ: ಉದ್ಯೋಗ ನಿಮಿತ್ತ ಇಸ್ರೇಲ್ಗೆ ತೆರಳಲು ಸಿದ್ಧತೆ ನಡೆಸುತ್ತಿದ್ದ ಯುವಕನೊಬ್ಬ ಮನೆಯೊಳಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉಳ್ಳಾಲ ಹೊಯ್ಗೆ ಎಂಬಲ್ಲಿ ಸೋಮವಾರ ನಡೆದಿದೆ.

ಉಳ್ಳಾಲ ಹೊಯ್ಗೆ ನಿವಾಸಿ, ಸೂರ್ಯಪ್ರಕಾಶ್ ಡಿ’ಸೋಜಾ (42) ಮೃತಪಟ್ಟವರು. ಕಳೆದ ಒಂದು ವರ್ಷದಿಂದ ಇಸ್ರೇಲ್ನಲ್ಲಿ ಉದ್ಯೋಗದಲ್ಲಿದ್ದ ಇವರು, ಸಹೋದರನ ವಿವಾಹ ಸಮಾರಂಭದಲ್ಲಿ ಭಾಗವಹಿಸಲು ಇತ್ತೀಚೆಗಷ್ಟೇ ಊರಿಗೆ ಬಂದಿದ್ದರು. ಮೇ 17ರಂದು ಅವರು ಮತ್ತೆ ಇಸ್ರೇಲ್ಗೆ ಮರಳಬೇಕಿತ್ತು.
ಸೋಮವಾರ ನಸುಕಿನ ಜಾವ ಸೂರ್ಯಪ್ರಕಾಶ್ ತಮ್ಮ ಕೋಣೆಯಲ್ಲಿ ನೇಣು ಬಿಗಿದುಕೊಂಡಿದ್ದಾರೆ. ತಾಯಿ ಕೋಣೆಗೆ ಹೋದಾಗ ಘಟನೆ ಬೆಳಕಿಗೆ ಬಂದಿದೆ. ಮೃತರು ಕಳೆದ ಕೆಲವು ಸಮಯದಿಂದ ನಿರಂತರ ಎದೆನೋವಿನ ಸಮಸ್ಯೆಯಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದರು. ದೈಹಿಕ ಅನಾರೋಗ್ಯದಿಂದ ನೊಂದು ಅವರು ಈ ಆತ್ಮಹತ್ಯೆಯ ನಿರ್ಧಾರ ಕೈಗೊಂಡಿರಬಹುದು ಎಂದು ಶಂಕಿಸಲಾಗಿದೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.