Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಪಂಜಾಬ್‌ನಲ್ಲಿ ಅವಳಿ ಸ್ಫೋಟದ ಆತಂಕ: ಅಮೃತಸರ ಸೇನಾ ಕಂಟೋನ್ಮೆಂಟ್ ಮತ್ತು ಜಲಂಧರ್ ಬಿಎಸ್ಎಫ್ ಕಚೇರಿ ಬಳಿ ಘಟನೆ

Spread the love

ಚಂಡೀಗಢ: ಪಂಜಾಬ್ ನ ಅಮೃತ್ ಸರ್ ಜಿಲ್ಲೆಯ ಖಾಸಾದಲ್ಲಿರುವ ಸೇನಾ ಕಂಟೋನ್ಸೆಂಟ್ ಪ್ರದೇಶದ ಬಳಿ ಮಂಗಳವಾರ ತಡರಾತ್ರಿ ಸ್ಫೋಟ ಸಂಭವಿಸಿದ್ದು, ಅದಕ್ಕೂ ಕೆಲವೇ ಗಂಟೆಗಳ ಮೊದಲು ಜಲಂಧರ್‌ನ ಗಡಿ ಭದ್ರತಾ ಪಡೆ (ಬಿಎಸ್‌ಎಫ್‌ ಪಂಜಾಬ್ ಫ್ರಾಂಟಿಯರ್ ಪ್ರಧಾನ ಕಚೇರಿ ಹೊರಗೆಯೂ ಸ್ಫೋಟ ಸಂಭವಿಸಿರುವ ಘಟನೆ ರಾಜ್ಯದಲ್ಲಿ ಆತಂಕ ಸೃಷ್ಟಿಸಿದೆ.
ಪೊಲೀಸರ ಪ್ರಕಾರ, ಎರಡೂ ಘಟನೆಗಳಲ್ಲಿ ಯಾವುದೇ ಪ್ರಾಣಹಾನಿ ಅಥವಾ ಗಾಯಗಳು ಸಂಭವಿಸಿಲ್ಲ. ಆದರೆ, ಸ್ಫೋಟಗಳ ಹಿನ್ನೆಲೆ ಹಾಗೂ ಉದ್ದೇಶದ ಕುರಿತು ತನಿಖೆ ಮುಂದುವರಿದಿದೆ.
ಮೊದಲ ಸ್ಫೋಟವು ಮಂಗಳವಾರ ರಾತ್ರಿ ಸುಮಾರು 8 ಗಂಟೆಗೆ ಜಲಂಧರ್ ನಲ್ಲಿ ಸಂಭವಿಸಿತು. ಅದಾದ ಬಳಿಕ ರಾತ್ರಿ ಸುಮಾರು 11 ಗಂಟೆಗೆ ಅಮೃತ್ ಸರ್‌ದ ಖಾಸಾ ಪ್ರದೇಶದಲ್ಲಿ ಮತ್ತೊಂದು ಸ್ಫೋಟ ನಡೆದಿದೆ.

ಅಮೃತ್ ಸರ್ (ಗ್ರಾಮೀಣ) ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸುಹೇಲ್ ಮಿರ್ ಖಾಸಿಮ್ ಮಾತನಾಡಿ, ಖಾಸಾ ರಸ್ತೆಯಲ್ಲಿ ರಾತ್ರಿ 11 ಗಂಟೆ ಸುಮಾರಿಗೆ ಭಾರೀ ಶಬ್ದ ಕೇಳಿಬಂದ ಕುರಿತು ಮಾಹಿತಿ ಲಭಿಸಿತು. ಕೂಡಲೇ ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿತು ಎಂದು ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯಲ್ಲಿ ಯಾರೋ ಸ್ಫೋಟಕ ಸಾಧನವನ್ನು ಗಡಿ ಗೋಡೆಯ ಕಡೆಗೆ ಎಸೆದಿರುವ ಸಾಧ್ಯತೆಯಿದೆ ಎಂದು ಅವರು ಹೇಳಿದರು. ಸ್ಫೋಟದ ಪರಿಣಾಮವಾಗಿ ಗಡಿ ಗೋಡೆಯ ಮೇಲಿದ್ದ ಕಬ್ಬಿಣದ ಹಾಳೆಯ ಒಂದು ಭಾಗ ಕೆಳಗೆ ಬಿದ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಯ ಬಳಿಕ ವಿಧಿವಿಜ್ಞಾನ ತಜ್ಞರ ತಂಡ ಹಾಗೂ ಬಾಂಬ್ ನಿಷ್ಕ್ರಿಯ ದಳ ಸ್ಥಳಕ್ಕೆ ಭೇಟಿ ನೀಡಿ ಮಾದರಿಗಳನ್ನು ಸಂಗ್ರಹಿಸಿತು.

ಅಮೃತ್ ಸರ್ ಗ್ರಾಮೀಣ ಪೊಲೀಸ್ ವರಿಷ್ಠಾಧಿಕಾರಿ ಆದಿತ್ಯ ಎಸ್. ವಾರಿಯರ್, ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. ಸೇನಾ ಅಧಿಕಾರಿಗಳ ತಂಡವೂ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದ್ದು, ಬಳಿಕ ಪ್ರದೇಶವನ್ನು ಭದ್ರತಾ ವಲಯವಾಗಿ ಘೋಷಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸ್ಫೋಟದ ದೃಶ್ಯ ದಾಖಲಾಗಿದೆ. ಭಾರೀ ಶಬ್ದ ಕೇಳಿ ನಿದ್ದೆಯಿಂದ ಎಚ್ಚರಗೊಂಡು ಮನೆಯ ಹೊರಗೆ ಬಂದಿದ್ದೇವೆ ಎಂದು ಸ್ಥಳೀಯ ಗ್ರಾಮಸ್ಥರು ತಿಳಿಸಿದ್ದಾರೆ.ಇದಕ್ಕೂ ಮೊದಲು ಜಲಂಧರ್ ಜಿಲ್ಲೆಯ ಬಿಎಸ್‌ಎಫ್‌ ಪಂಜಾಬ್ ಫ್ರಾಂಟಿಯರ್ ಪ್ರಧಾನ ಕಚೇರಿ ಹೊರಗೆ ಮಂಗಳವಾರ ರಾತ್ರಿ ಸ್ಫೋಟ ಸಂಭವಿಸಿತ್ತು. ಸ್ಫೋಟದ ದೃಶ್ಯಗಳು ಸಿಸಿಟಿವಿಯಲ್ಲಿ ದಾಖಲಾಗಿದ್ದು, ಘಟನೆಯ ನಂತರ ಪ್ರದೇಶ ಹೊಗೆಯಿಂದ ಆವೃತವಾಗಿರುವುದು ಕಂಡುಬಂದಿದೆ. ಸ್ಫೋಟದ ಬಳಿಕ ಅಪರಿಚಿತ ವ್ಯಕ್ತಿಯೊಬ್ಬರು ಸ್ಥಳದಿಂದ ಓಡಿ ಹೋಗುತ್ತಿರುವ ದೃಶ್ಯವೂ ಸೆರೆಯಾಗಿದೆ.

ಸ್ಫೋಟದ ಪರಿಣಾಮ ಒಂದು ಸ್ಕೂಟರ್ ಸಂಪೂರ್ಣ ಹಾನಿಗೊಳಗಾಗಿದ್ದು, ಟ್ರಾಫಿಕ್ ಸಿಗ್ನಲ್ ಕಂಬ ಹಾಗೂ ಸಮೀಪದ ಅಂಗಡಿಯ ಗಾಜುಗಳಿಗೆ ಹಾನಿಯಾಗಿದೆ.
ಸ್ಥಳೀಯರ ಪ್ರಕಾರ, ಬಿಎಸ್‌ಎಫ್ ಕಚೇರಿ ಹೊರಗೆ ನಿಲ್ಲಿಸಲಾಗಿದ್ದ ಸ್ಕೂಟರ್ ಭಾರೀ ಶಬ್ದದ ಬಳಿಕ ಬೆಂಕಿಗೆ ಆಹುತಿಯಾಯಿತು. ಸ್ಕೂಟ‌ರ್ ಗುರ್‌ಪ್ರೀತ್‌ ಸಿಂಗ್ ಅವರಿಗೆ ಸೇರಿದ್ದು, ಅವರು ಈ ಪ್ರದೇಶದಲ್ಲಿ ನಿಯಮಿತವಾಗಿ ಪಾರ್ಸೆಲ್ ವಿತರಣೆ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.
ಗುರ್‌ಪ್ರೀತ್ ಅವರ ಸಂಬಂಧಿಕರೊಬ್ಬರು ಮಾತನಾಡಿ, ಸ್ಕೂಟರ್ ಹತ್ತಿರ ತಲುಪುತ್ತಿದ್ದಂತೆಯೇ ಬೆಂಕಿ ಕಾಣಿಸಿಕೊಂಡಿತು. ತಕ್ಷಣವೇ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲಾಯಿತು ಎಂದು ತಿಳಿಸಿದ್ದಾರೆ.

ಎಪ್ರಿಲ್ 27ರಂದು ಪಟಿಯಾಲಾದ ಶಂಭು ಪ್ರದೇಶದಲ್ಲಿಯೂ ಸರಕು ಸಾಗಣೆ ಕಾರಿಡಾರ್ ರೈಲು ಹಳಿಯಲ್ಲಿ ಸ್ಫೋಟ ಸಂಭವಿಸಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಐಎಸ್‌ಐ ಬೆಂಬಲಿತ ಖಲಿಸ್ತಾನ ಪರ ಉಗ್ರ ಸಂಘಟನೆಯ ನಾಲ್ವರನ್ನು ಪೊಲೀಸರು ಬಂಧಿಸಿದ್ದರು.
ಈ ಅವಳಿ ಸ್ಫೋಟಗಳ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ತೀವ್ರ ವಾಗ್ದಾಳಿ ನಡೆಸಿವೆ. ಶಿರೋಮಣಿ ಅಕಾಲಿ ದಳ ಅಧ್ಯಕ್ಷ ಸುಖ್‌ಬೀರ್ ಸಿಂಗ್ ಬಾದಲ್, ಮುಖ್ಯಮಂತ್ರಿ ಭಗವಂತ್ ಮಾನ್ ವಿರುದ್ಧ ಟೀಕಾ ಪ್ರಹಾರ ನಡೆಸಿದರು.
’10 ದಿನಗಳಲ್ಲಿ ಮೂರು ಸ್ಫೋಟಗಳು ಮತ್ತು ಒಂದೇ ದಿನದಲ್ಲಿ ಎರಡು ಸ್ಫೋಟಗಳು ಸಂಭವಿಸಿವೆ. ಜಲಂಧರ್ ನ ಬಿಎಸ್ಎಫ್ ಕಚೇರಿ ಹಾಗೂ ಅಮೃತ್ ಸರ್ ಸೇನಾ ಪ್ರದೇಶದ ಬಳಿ ನಡೆದ ಘಟನೆಗಳು ಕಾನೂನು ಮತ್ತು ಸುವ್ಯವಸ್ಥೆಯ ಕುಸಿದಿದೆ ಎಂದು ತೋರಿಸುತ್ತವೆ’ ಎಂದು ಅವರು ಸಾಮಾಜಿಕ ಜಾಲತಾಣ Xನಲ್ಲಿ ಆರೋಪಿಸಿದರು.
ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಕೂಡ ಸರ್ಕಾರವನ್ನು ಟೀಕಿಸಿ, ‘ಪಂಜಾಬ್ ನಲ್ಲಿ ನಿರಂತರ ಸ್ಫೋಟಗಳು ನಡೆಯುತ್ತಿರುವುದು ತೀವ್ರ ಆತಂಕಕಾರಿ. ರಾಜ್ಯವನ್ನು ಅಸ್ಥಿರಗೊಳಿಸಲು ಯಾರು ಪ್ರಯತ್ನಿಸುತ್ತಿದ್ದಾರೆ ಎಂಬುದನ್ನು ಪತ್ತೆಹಚ್ಚಬೇಕು. ಗುಪ್ತಚರ ಹಾಗೂ ಭದ್ರತಾ ವ್ಯವಸ್ಥೆಯ ವೈಫಲ್ಯಗಳು ಬಹಿರಂಗವಾಗುತ್ತಿವೆ’ ಎಂದು ಹೇಳಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *