ದಲಿತರ ಗ್ರಾಮಗಳಲ್ಲಿ 1,000 ದೇವಾಲಯಗಳನ್ನು ನಿರ್ಮಿಸಲಿದೆ ಟಿಟಿಡಿ

ತಿರುಮಲ: ಆಂಧ್ರಪ್ರದೇಶದ ತಿರುಮಲ ತಿರುಪತಿ ದೇವಸ್ಥಾನ (TTD) ವತಿಯಿಂದ ರಾಜ್ಯಾದ್ಯಂತ ದಲಿತ ವಸಾಹತುಗಳಲ್ಲಿ 1,000 ಶ್ರೀ ವೆಂಕಟೇಶ್ವರ ದೇವಾಲಯಗಳನ್ನು ನಿರ್ಮಿಸುವ ಯೋಜನೆಯನ್ನು ಘೋಷಿಸಲಾಗಿದೆ. ಈ ಯೋಜನೆಯು ದಲಿತ ಸಮುದಾಯಗಳಲ್ಲಿ ಹಿಂದೂ ಧರ್ಮದ ಕುರಿತಾದ ನಂಬಿಕೆಯನ್ನು ಬಲಪಡಿಸುವ ಮತ್ತು ಧಾರ್ಮಿಕ ಮತಾಂತರಗಳನ್ನು ತಡೆಯುವ ಗುರಿಯನ್ನು ಹೊಂದಿದೆ.

ಇತ್ತೀಚಿನ ಟಿಟಿಡಿ ಮಂಡಳಿಯ ಸಭೆಯಲ್ಲಿ, ದಲಿತ ಗ್ರಾಮಗಳಲ್ಲಿ 1,000 ದೇವಾಲಯಗಳನ್ನು ನಿರ್ಮಿಸುವ ನಿರ್ಣಯವನ್ನು ಮಂಡಳಿ ಅಂಗೀಕರಿಸಿತು. ಬಳಿಕ ಮಾತನಾಡಿದ ಟಿಟಿಡಿ ಅಧ್ಯಕ್ಷ ಬಿ.ಆರ್ ನಾಯ್ಡು, “ಧಾರ್ಮಿಕ ಮತಾಂತರಗಳನ್ನು ತಡೆಯಲು ದಲಿತ ವಸಾಹತುಗಳಲ್ಲಿ ದೇವಾಲಯಗಳನ್ನು ನಿರ್ಮಿಸಲಾಗುವುದು. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಶ್ರೀವಾಣಿ ಟ್ರಸ್ಟ್‌ನ ಆರ್ಥಿಕ ನೆರವಿನೊಂದಿಗೆ 6 ದೇವಾಲಯಗಳನ್ನು ನಿರ್ಮಿಸಲಾಗುವುದು” ಎಂದು ಅವರು ಹೇಳಿದರು.
ಧಾರ್ಮಿಕ ಮತಾಂತರಗಳನ್ನು ತಡೆಯುವ ಉದ್ದೇಶದೊಂದಿಗೆ ಟಿಟಿಡಿ ಈ ಕಾರ್ಯಕ್ರಮವನ್ನು ಮುಂದಿಡುತ್ತಿದ್ದರೂ, ವಿಮರ್ಶಕರು ಇದನ್ನು ವಿವಾದಾತ್ಮಕ ಕ್ರಮವೆಂದು ಟೀಕಿಸಿದ್ದಾರೆ. ಇದು “ಹಿಂದೂ ಧರ್ಮ ಪ್ರಚಾರ”, ಮತಬ್ಯಾಂಕ್‌ಗಳಿಗಾಗಿ ಧರ್ಮದ ಶೋಷಣೆ ಮತ್ತು ದಲಿತ ಸಮುದಾಯದ ಶಿಕ್ಷಣ, ಉದ್ಯೋಗ ಮತ್ತು ಆರೋಗ್ಯದಂತಹ ಪ್ರಮುಖ ಅವಶ್ಯಕತೆಗಳಿಂದ ಗಮನವನ್ನು ಬೇರೆಡೆ ಸೆಳೆಯುವ ಪ್ರಯತ್ನ ಎಂದು ಅವರು ಟೀಕಿಸಿದ್ದಾರೆ.
ಇತ್ತೀಚೆಗೆ ನಡೆದ ಟಿಟಿಡಿ ಮಂಡಳಿಯ ಸಭೆಯಲ್ಲಿ ದಲಿತ ಗ್ರಾಮಗಳಲ್ಲಿ 1,000 ದೇವಾಲಯಗಳನ್ನು ನಿರ್ಮಿಸುವ ಪ್ರಸ್ತಾವನೆಯನ್ನು ಅಂಗೀಕರಿಸಲಾಯಿತು. ದಲಿತರನ್ನು ಹಿಂದೂ ಧರ್ಮದ ಕಡೆಗೆ ಕರೆತರುವ ಟಿಟಿಡಿ ಪ್ರಯತ್ನ ಇದೇ ಮೊದಲೇನಲ್ಲ. 2004ರಲ್ಲಿ ಆಗಿನ ಟಿಟಿಡಿ ಅಧ್ಯಕ್ಷ ಭೂಮನ ಕರುಣಾಕರ ರೆಡ್ಡಿ ಅವರು “ದಲಿತ ಗೋವಿಂದಂ” ಕಾರ್ಯಕ್ರಮವನ್ನು ಪ್ರಾರಂಭಿಸಿದರು. ಈ ಉಪಕ್ರಮದಡಿಯಲ್ಲಿ ಟಿಟಿಡಿ ದಲಿತ ವಸಾಹತುಗಳಲ್ಲಿ ಭಗವಾನ್ ಬಾಲಾಜಿಯ ಮೆರವಣಿಗೆಗಳನ್ನು ಆಯೋಜಿಸಿ ಅವರಿಗೆ ಪ್ರಸಾದ ನೀಡಲು ಪ್ರಾರಂಭಿಸಿತು.
2014ರಲ್ಲಿ ಆಂಧ್ರಪ್ರದೇಶದ ವಿಭಜನೆಯ ನಂತರ ಈ ಕಾರ್ಯಕ್ರಮವು ನಿಂತಿತು. 2019ರಲ್ಲಿ ಜಗನ್ ಮೋಹನ್ ರೆಡ್ಡಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಾಗ ಮತ್ತು ಕರುಣಾಕರ ರೆಡ್ಡಿ ಮತ್ತೆ ಟಿಟಿಡಿಯ ಅಧ್ಯಕ್ಷರಾದಾಗ ಇದು ಮತ್ತೆ ವೇಗವನ್ನು ಪಡೆಯಿತು. ಈ ಅವಧಿಯಲ್ಲಿ, ದಲಿತ ಸಮುದಾಯಗಳನ್ನು ಒಳಗೊಂಡಂತೆ ಭಾರತದಾದ್ಯಂತ ಹಲವಾರು ಶ್ರೀ ವೆಂಕಟೇಶ್ವರ ದೇವಾಲಯಗಳನ್ನು ಸ್ಥಾಪಿಸಲಾಯಿತು. ಈ ಉಪಕ್ರಮವನ್ನು ಬೆಂಬಲಿಸಲು ಭಕ್ತರಿಂದ ದೇಣಿಗೆ ಸಂಗ್ರಹಿಸಲು ಶ್ರೀವಾಣಿ ಟ್ರಸ್ಟ್ ಅನ್ನು ಪ್ರಾರಂಭಿಸಲಾಯಿತು. ದಲಿತ, ಬುಡಕಟ್ಟು ಮತ್ತು ಮೀನುಗಾರರ ವಸಾಹತುಗಳಲ್ಲಿ ದೇವಾಲಯಗಳ ನಿರ್ಮಾಣಕ್ಕಾಗಿ, ಟಿಟಿಡಿ ಮಂಡಳಿಯು 10 ಲಕ್ಷ, 15 ಲಕ್ಷ ಅಥವಾ 20 ಲಕ್ಷ ರೂ.ಗಳ ವಿವಿಧ ಸ್ಲ್ಯಾಬ್‌ಗಳಲ್ಲಿ ಅನುದಾನವನ್ನು ಅನುಮೋದಿಸಿದೆ. ಮರಳು, ಸಿಮೆಂಟ್ ಮತ್ತು ಕಬ್ಬಿಣದ ಬೆಲೆಗಳು ಏರುತ್ತಿರುವುದರಿಂದ ಜುಲೈ 2025ರ ಮಂಡಳಿಯ ಸಭೆಯಲ್ಲಿ ಮಂಡಳಿಯು ಪ್ರತಿ ಸ್ಲ್ಯಾಬ್‌ಗೆ 5 ಲಕ್ಷ ರೂ. ಹೆಚ್ಚುವರಿ ಮೊತ್ತವನ್ನು ಅನುಮೋದಿಸಿದೆ.
