ಟ್ರಂಪ್ ಆಡಳಿತದ ದೊಡ್ಡ ಪ್ಲಾನ್ – ಗೋಲ್ಡ್ ಕಾರ್ಡ್ ಮೂಲಕ ಶ್ರಿಮಂತರ ಆಕರ್ಷಣೆ

ಫಾಕ್ಸ್ ನ್ಯೂಸ್ ಜೊತೆ ಮಾತನಾಡಿದ ಹೊವಾರ್ಡ್ ಲುಟ್ನಿಕ್, ‘H1B ಮತ್ತು ಗ್ರೀನ್ ಕಾರ್ಡ್ ಕಾರ್ಯಕ್ರಮದ ಮೇಲೆ ಪರಿಣಾಮ ಬೀರುವ ಬದಲಾವಣೆಯ ಕಾರ್ಯಕ್ರಮದಲ್ಲಿ ನಾನು ಭಾಗವಾಗಿದ್ದೇನೆ’ ಎಂದು ಹೇಳಿದ್ದಾರೆ.
‘ನಾನು H1B ಕಾರ್ಯಕ್ರಮವನ್ನು ಬದಲಾಯಿಸುವ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದ್ದೇನೆ. ಏಕೆಂದರೆ H1B ವಿಸಾ ಅನ್ನೋದೇ ಭಯಾನಕ. ನಾವು ಗ್ರೀನ್ ಕಾರ್ಡ್ನ್ನೂ ಬದಲಾಯಿಸಲಿದ್ದೇವೆ. ಸರಾಸರಿ ಅಮೆರಿಕನ್ ವ್ಯಕ್ತಿ ವರ್ಷಕ್ಕೆ $75,000 ಮತ್ತು ಸರಾಸರಿ ಗ್ರೀನ್ ಕಾರ್ಡ್ ಸ್ವೀಕರಿಸುವವರು $66,000 ಗಳಿಸುತ್ತಾರೆ. ಆ ಹಣವನ್ನೂ ಅಮೆರಿಕನ್ನರ ಬಳಿಯಲ್ಲೇ ಯಾಕೆ ಉಳಿಸಿಕೊಳ್ಳಬಾರದು? ಅಂತ ಡೊನಾಲ್ಡ್ ಟ್ರಂಪ್ ಚಿಂತನೆ ಮಾಡುತ್ತಿದ್ದಾರೆ. ಅದಕ್ಕಾಗಿ ಚಿನ್ನದ ಕಾರ್ಡ್ ತರುತ್ತೇವೆ’ ಎಂದು ಹೊವಾರ್ಡ್ ಲುಟ್ನಿಕ್ ಹೇಳಿದ್ದಾರೆ.ಗೋಲ್ಡ್ ಕಾರ್ಡ್ ಹೊಂದಿರುವವರು ಅಮೆರಿಕದಲ್ಲಿ ಶಾಶ್ವತವಾಗಿ ನೆಲೆಸಬಹುದು. ಯಾವುದೇ ಅಮೆರಿಕನ್ ಪ್ರಜೆಯು ಜಗತ್ತಿನಾದ್ಯಂತ ಗಳಿಸುವ ಆದಾಯಕ್ಕೆ ತೆರಿಗೆ ಕಟ್ಟಬೇಕು. ಆದರೆ ಗೋಲ್ಡ್ ಕಾರ್ಡ್ ಹೊಂದಿರುವವರು ಅಮೆರಿಕದಲ್ಲಿ ಗಳಿಸುವ ಆದಾಯಕ್ಕೆ ಮಾತ್ರ ತೆರಿಗೆ ಕಟ್ಟಬೇಕು. ಗೋಲ್ಡ್ ಕಾರ್ಡ್ ಮೂಲಕ ಪೌರತ್ವ ಅವಕಾಶ ಕೂಡ ಲಭ್ಯವಿದ್ದು, ಜಾಗತಿಕ ಶ್ರಿಮಂತರನ್ನು ಅಮೆರಿಕದತ್ತ ಸೆಳೆಯುವ ಉದ್ದೇಶವನ್ನು ಹೊಂದಿದೆ.
ಡೊನಾಲ್ಡ್ ಟ್ರಂಪ್ ಆಡಳಿತದ ಸಂಶೋಧನೆಯ ಪ್ರಕಾರ, ಜಗತ್ತಿನಲ್ಲಿ 37 ಮಿಲಿಯನ್ (3.7 ಕೋಟಿ) ಜನರು ಗೋಲ್ಡ್ ಕಾರ್ಡ್ ಖರೀದಿಸುವ ಸಾಮರ್ಥ್ಯ ಹೊಂದಿದ್ದಾರೆ. ಡೊನಾಲ್ಡ್ ಟ್ರಂಪ್ ಆಡಳಿತ ಒಟ್ಟು ಒಂದು ಮಿಲಿಯನ್ ಕಾರ್ಡ್‌ಗಳನ್ನು ಮಾರಾಟ ಮಾಡುವ ಉದ್ದೇಶ ಹೊಂದಿದೆ. ಈ ಯೋಜನೆಯಿಂದ ಬರುವ ಹಣವನ್ನು ಅಮೆರಿಕದ ಆರ್ಥಿಕ ಕೊರತೆ ಅಥವಾ ಸಾಲವನ್ನು ಕಡಿಮೆ ಮಾಡಲು ಬಳಸಲಾಗುತ್ತದೆ.
