ಬಿಸಿಯಾದ ಹಾಲು ಪಾತ್ರೆಯಲ್ಲಿ ಬಿದ್ದು 17 ತಿಂಗಳ ಬಾಲಕಿ ಸಾವು

ಅನಂತಪುರ: ಆಂಧ್ರಪ್ರದೇಶದ ಅನಂತಪುರದ ಶಾಲೆಯೊಂದರಲ್ಲಿ ಬಿಸಿಯಾದ ಹಾಲನ್ನು ಇಡಲಾಗಿದ್ದ ಪಾತ್ರೆಯೊಳಗೆ ಬಿದ್ದ ಪುಟ್ಟ ಬಾಲಕಿ ಸಾವನ್ನಪ್ಪಿದ್ದಾಳೆ. ಆ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಕೃಷ್ಣವೇಣಿ ತನ್ನ ಜೊತೆ 17 ತಿಂಗಳ ಮಗಳನ್ನೂ ಕರೆದುಕೊಂಡು ಬಂದಿದ್ದರು. ಮನೆಯಲ್ಲಿ ಯಾರೂ ಇಲ್ಲದ ಕಾರಣದಿಂದ ಆ ಬಾಲಕಿ ಅಮ್ಮನ ಜೊತೆ ಶಾಲೆಗೆ ಬಂದಿದ್ದಳು. ಆದರೆ, ಆ ದಿನವೇ ಆಕೆಯ ಕೊನೆಯ ದಿನವಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ.

ಘಟನೆ ನಡೆದ ದಿನ, ಕೃಷ್ಣ ವೇಣಿ ಶಾಲೆಯಲ್ಲಿ ಕೆಲಸ ಮಾಡುವಾಗ ತನ್ನ 17 ತಿಂಗಳ ಮಗಳನ್ನು ಕರೆದುಕೊಂಡು ಬಂದಿದ್ದರು. ಅವಳು ತನ್ನ ಕೆಲಸದಲ್ಲಿ ತೊಡಗಿದ್ದಾಗ ಅವರ ಪುಟ್ಟ ಮಗಳು ಅಕ್ಷಿತಾ ಅಲ್ಲೇ ಆಚೀಚೆ ಆಟವಾಡುತ್ತಾ ಇದ್ದಳು. ಆಗ ಒಂದು ಬೆಕ್ಕು ಅಡುಗೆಮನೆಯೊಳಗೆ ಬಂದಿತು. ಆ ಬೆಕ್ಕನ್ನು ಹಿಡಿಯಲು ಅಕ್ಷಿತಾ ಕೂಡ ಅದರ ಹಿಂದೆ ಬಂದಳು. ಆಗ ಆ ಬೆಕ್ಕು ಬಿಸಿಯಾದ ಹಾಲನ್ನು ತಣ್ಣಗಾಗಲು ಇಡಲಾಗಿದ್ದ ದೊಡ್ಡ ಪಾತ್ರೆಯ ಬಳಿಯಿಂದ ಓಡಿಹೋಯಿತು. ಅದರ ಹಿಂದೆಯೇ ಬಂದ ಅಕ್ಷಿತಾ ಕಾಲಿಗೆ ಆ ಪಾತ್ರೆ ತಾಗಿ ಆಕಸ್ಮಿಕವಾಗಿ ಬಿಸಿಯಾದ ಹಾಲು ತುಂಬಿದ್ದ ಪಾತ್ರೆಯೊಳಗೆ ಬಿದ್ದಿದ್ದಾಳೆ.
ದೊಡ್ಡದಾದ ಪಾತ್ರೆಯಿಂದ ಹೊರಗೆ ಬರಲಾಗದೆ ಆಕೆ ಜೋರಾಗಿ ಕಿರುಚಾಡಿದ್ದಾಳೆ. ಆಗ ಮಗಳ ಕಿರುಚಾಟ ಕೇಳಿ ಕೃಷ್ಣವೇಣಿ ಓಡಿಬಂದು ಮಗಳನ್ನು ಪಾತ್ರೆಯಿಂದ ಮೇಲೆತ್ತಿದ್ದಾರೆ. ಬಿಸಿಯಾದ ಹಾಲು ತಾಗಿದ್ದರಿಂದ ಅಕ್ಷಿತಾಳ ಮೈ ಸುಟ್ಟುಹೋಗಿತ್ತು. ತಕ್ಷಣ ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಯಿತು. ಅಲ್ಲಿಂದ ಅವರು ಜಿಲ್ಲಾಸ್ಪತ್ರೆಗೆ ಕಳುಹಿಸಿದರು. ಆದರೆ, ಎಳೆಯ ಬಾಲಕಿಯ ಮೈ ಸುಟ್ಟುಹೋಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದಾಳೆ.
