ಬಿಹಾರದ ನಳಂದದಲ್ಲಿ ಭೀಕರ ದುರಂತ: ಮಾತಾ ಶೀತ್ಥಾ ದೇವಾಲಯದಲ್ಲಿ ಕಾಲ್ತುಳಿತ; ಎಂಟು ಮಹಿಳೆಯರ ಸಾ*ವು

ಪಾಟ್ನಾ: ಬಿಹಾರದ ನಳಂದ ಜಿಲ್ಲೆಯ ಮಾತಾ ಶೀತ್ಥಾ ದೇವಾಲಯದಲ್ಲಿ ಮಂಗಳವಾರ ನಡೆದ ಧಾರ್ಮಿಕ ಕಾರ್ಯಕ್ರಮದ ವೇಳೆ ಉಂಟಾದ ಭಾರೀ ಕಾಲ್ತುಳಿತದಲ್ಲಿ ಕನಿಷ್ಠ ಎಂಟು ಮಹಿಳೆಯರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು indiatoday.in ವರದಿ ಮಾಡಿದೆ.
ಪೂಜೆಗೆಂದು ದೇವಾಲಯದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರು ಜಮಾಯಿಸಿದ್ದರಿಂದ ತೀವ್ರ ಜನದಟ್ಟಣೆ ಉಂಟಾಗಿ, ಪರಿಸ್ಥಿತಿ ನಿಯಂತ್ರಣ ತಪ್ಪಿದ ಪರಿಣಾಮ ಕಾಲ್ತುಳಿತ ಸಂಭವಿಸಿದೆ. ಈ ವೇಳೆ ಹಲವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯ ಮಾಹಿತಿ ತಿಳಿದ ತಕ್ಷಣ ಪೊಲೀಸರು ಸ್ಥಳೀಯ ಗ್ರಾಮಸ್ಥರೊಂದಿಗೆ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ದೇವಾಲಯದ ಆವರಣದಲ್ಲಿ ಭಕ್ತರು ಗುಂಪುಗೂಡಿರುವ ದೃಶ್ಯಗಳು ಘಟನೆಯ ಗಂಭೀರತೆಯನ್ನು ತೋರಿಸುತ್ತವೆ.

ಈ ಘಟನೆ ಕುರಿತು ಸಮಗ್ರ ತನಿಖೆ ನಡೆಸುವಂತೆ ಬಿಹಾರ ಸರ್ಕಾರ ಮುಖ್ಯ ಕಾರ್ಯದರ್ಶಿಗೆ ನಿರ್ದೇಶನ ನೀಡಿದೆ. ಗಾಯಾಳುಗಳಿಗೆ ತಕ್ಷಣವೇ ಸಮರ್ಪಕ ವೈದ್ಯಕೀಯ ಚಿಕಿತ್ಸೆ ಒದಗಿಸಲು ಸೂಚನೆ ನೀಡಲಾಗಿದೆ.
ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲು ಪಾಟ್ನಾ ಆಯುಕ್ತರನ್ನು ಬಿಹಾರ ಶರೀಫ್ ಗೆ ಕಳುಹಿಸಲಾಗಿದೆ.
ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಸಾಮಾಜಿಕ ಜಾಲತಾಣ ‘ಎಕ್ಸ್ನಲ್ಲಿ ಸಂತಾಪ ಸೂಚಿಸಿ, ಈ ಘಟನೆಯನ್ನು “ಅತ್ಯಂತ ಹೃದಯವಿದ್ರಾವಕ” ಎಂದು ಹೇಳಿದ್ದಾರೆ. ಮೃತರ ಕುಟುಂಬಗಳಿಗೆ ಸರ್ಕಾರದಿಂದ ಅಗತ್ಯ ಸಹಾಯ ಮತ್ತು ಪರಿಹಾರ ಒದಗಿಸಲಾಗುವುದು ಹಾಗೂ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
“ನಳಂದದ ಮಾತಾ ಶೀತ್ಥಾ ದೇವಾಲಯದಲ್ಲಿ ಸಂಭವಿಸಿದ ದುರಂತ ಕಾಲ್ತುಳಿತ ಘಟನೆ ಅತ್ಯಂತ ಹೃದಯವಿದ್ರಾವಕವಾಗಿದೆ. ಪ್ರಾಣ ಕಳೆದುಕೊಂಡ ಭಕ್ತರ ಕುಟುಂಬಗಳಿಗೆ ನನ್ನ ಆಳವಾದ ಸಂತಾಪಗಳು,” ಎಂದು ಅವರು ತಿಳಿಸಿದ್ದಾರೆ.