ರೈಲಿನಲ್ಲಿ ಕಳ್ಳತನ: ಪುರುಷೋತ್ತಮ್ ಎಕ್ಸ್ಪ್ರೆಸ್ನ ಎಸಿ ಕೋಚ್ನಲ್ಲಿ ಬೆಡ್ಶೀಟ್ ಕದ್ದ ಕುಟುಂಬ

ನಮ್ಮಲ್ಲಿ ಸರ್ಕಾರಿ ಆಸ್ತಿಯ ಮೇಲೆ ಎಲ್ಲರಿಗೂ ಅಸಡ್ಡೆ, ಅದನ್ನು ಜಾಗರೂಕವಾಗಿ ನೋಡುವ ಜವಾಬ್ದಾರಿಯನ್ನು ಯಾರೊಬ್ಬರೂ ಹೊರಲು ಸಿದ್ಧರಿಲ್ಲ, ಸಾಧ್ಯವಾದರೆ ಕದ್ದು ತೆಗೆದುಕೊಂಡು ಹೋಗಲು ಮುಂದಾಗುತ್ತಾರೆ. ಇದಕ್ಕೊಂದು ಉತ್ತಮ ಉದಾಹರಣೆ ರೈಲಿನಲ್ಲಿ ನಡೆದಿರುವ ಈ ಘಟನೆ. ಕೆಲ ತಿಂಗಳ ಹಿಂದೆ ಬೆಂಗಳೂರಿನಲ್ಲಿ ಕಬ್ಬಿಣದ ಬಸ್ ನಿಲ್ದಾಣವನ್ನೇ ಅಪಹರಿಸಿದ ಘಟನೆ ನಡೆದಿತ್ತು. ಹಾಗೆಯೇ 2022ರಲ್ಲಿ ಬಿಹಾರದಲ್ಲಿ 60 ಅಡಿ ಉದ್ದದ ಕಬ್ಬಿಣದ ಸೇತುವೆಯನ್ನೇ ದುಷ್ಕರ್ಮಿಗಳು ಅಪಹರಿಸಿದ್ದರು. ಹೀಗೆ ಸಾರ್ವಜನಿಕ ಆಸ್ತಿಗಳನ್ನು ಭಾರತದಲ್ಲಿ ಹೇಳುವವರು ಕೇಳುವವರು ಇಲ್ಲದಂತಾಗಿದೆ. ಹಾಗೆಯೇ ಇಲ್ಲೊಂದು ಕಡೆ ರೈಲಿನ ಎಸಿ ಕೋಚ್ನಲ್ಲಿ ಪ್ರಯಾಣಿಸುತ್ತಿದ್ದ ಕೆಲ ಪ್ರಯಾಣಿಕರು ಅಲ್ಲಿ ಪ್ರಯಾಣಿಕರಿಗೆ ಹಾಸಲು ಹೊದೆಯಲು ನೀಡುವ ಬೆಡ್ಶೀಟ್ ಹಾಗೂ ಟವೆಲುಗಳನ್ನೇ ಮನೆಗೆ ಒಯ್ಯಲು ಮುಂದಾಗಿದ್ದು, ಈ ವೇಳೆ ಸಿಕ್ಕಿಬಿದ್ದಿದ್ದಾರೆ. ದೆಹಲಿ ಒಡಿಶಾ ಪುರುಷೋತ್ತಮ್ ಎಕ್ಸ್ಪ್ರೆಸ್ ರೈಲಿನ ಫಸ್ಟ್ ಎಸಿಕೋಚ್ನಲ್ಲಿ ಈ ಘಟನೆ ನಡೆದಿದೆ. ಘಟನೆಯ ವೀಡಿಯೋ ನಂತರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇಂತಹ ಮನಸ್ಥಿತಿಯ ಜನರ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ದೆಹಲಿ ಒಡಿಶಾ ಪುರುಷೋತ್ತಮ್ ಎಕ್ಸ್ಪ್ರೆಸ್ ರೈಲಿನ ಫಸ್ಟ್ ಎಸಿ ಕೋಚಲ್ಲಿ ಘಟನೆ
ಎಸಿ ಕೋಚ್ನಲ್ಲಿ ಪ್ರಯಾಣಿಸುತ್ತಿದ್ದ ಕುಟುಂಬವೊಂದರ ಮಹಿಳೆಯೊಬ್ಬರು ಪ್ರಯಾಣಿಕರಿಗೆ ರೈಲಿನಲ್ಲಿ ನೀಡುವ ಬೆಡ್ಶಿಟ್ ಎತ್ತಿ ಬ್ಯಾಗ್ಗೆ ತುಂಬಿಸಿ ಕದಿಯುವ ಪ್ರಯತ್ನ ಮಾಡಿದ್ದಾರೆ. ಆದರೆ ರೈಲ್ವೆ ಇಲಾಖೆ ಸಿಬ್ಬಂದಿಯ ಅದೃಷ್ಟ ಚೆನ್ನಾಗಿತ್ತೆಂದೆನಿಸುತ್ತಿದೆ. ರೈಲಿನಿಂದ ಇಳಿಯುವಷ್ಟರಲ್ಲಿ ಅವರು ಸಿಕ್ಕಿಬಿದ್ದಿದ್ದಾರೆ. ಈ ಘಟನೆಯನ್ನು ಬೋಗಿ ಅಟೆಂಡೆಂಟ್ ರೆಕಾರ್ಡ್ ಮಾಡಿದಂತೆ ಕಾಣುತ್ತಿದ್ದು, ವೀಡಿಯೋ ವೈರಲ್ ಆಗಿದೆ. ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ @bapisahoo ಎಂಬುವವರು ಈ ವೀಡಿಯೋವನ್ನು ಪೋಸ್ಟ್ ಮಾಡಿದ್ದು, ವೀಡಿಯೋದಲ್ಲಿ ಪ್ರಯಾಣಿಕರ ಕುಟುಂಬ ಹಾಗೂ ರೈಲ್ವೆ ಸಿಬ್ಬಂದಿ ಮಧ್ಯ ಮಾತಿನ ಚಕಮಕಿ ನಡೆದಿದೆ.
4 ಸೆಟ್ ಬೆಡ್ಶೀಟನ್ನು ಬ್ಯಾಗೊಳಗೆ ತುಂಬಿಸಿದ ಕುಟುಂಬ
ಪುರುಷೋತ್ತಮ ಎಕ್ಸ್ಪ್ರೆಸ್ನ 1ನೇ ಎಸಿಯಲ್ಲಿ ಪ್ರಯಾಣಿಸುವುದು ಹೆಮ್ಮೆಯ ವಿಷಯ. ಆದರೆ ಪ್ರಯಾಣದ ಸಮಯದಲ್ಲಿ ಹೆಚ್ಚುವರಿ ಸೌಕರ್ಯಕ್ಕಾಗಿ ಒದಗಿಸಲಾದ ಬೆಡ್ಶೀಟ್ಗಳನ್ನು ಕದ್ದು ಮನೆಗೆ ತೆಗೆದುಕೊಂಡು ಹೋಗಲು ಹಿಂಜರಿಯದ ಜನರು ಈ ಬೋಗಿಯಲ್ಲಿಯೂ ಇದ್ದಾರೆ ಎಂದು ಅವರು ವಿಡಿಯೋ ಪೋಸ್ಟ್ ಮಾಡಿ ಬರೆದುಕೊಂಡಿದ್ದಾರೆ. ವೀಡಿಯೋದಲ್ಲಿ ಅಟೆಂಡೆಂಟ್ ಬೊಟ್ಟು ಮಾಡಿ ತೋರಿಸುವುದನ್ನು ಕೇಳಬಹುದು. ಸರ್, ನೋಡಿಲ್ಲಿ ಬೆಡ್ಶಿಟ್ ಹಾಗೂ ಬ್ಲಾಂಕೆಟ್ಗಳು ಇಲ್ಲಿರುವ ಪ್ರತಿ ಬ್ಯಾಗ್ನಿಂದ ಹೊರಗೆ ಬರುತ್ತಿವೆ. ಟವೆಲ್ ಬೆಡ್ಶಿಟ್ ಎಲ್ಲಾ ಸೇರಿ 4 ಸೆಟ್ಗಳಿವೆ. ಒಂದೋ ಇವುಗಳನ್ನು ಹಿಂದಿರುಗಿಸಿ ಅಥವಾ 780 ರೂಪಾಯಿ ಪಾವತಿಸಿ ಎಂದು ಆತ ಒಡಿಯಾ ಭಾಷೆಯಲ್ಲಿ ಹೇಳುವುದನ್ನು ಕೇಳಬಹುದಾಗಿದೆ.
ತಿಳಿಯದೇ ಆಗಿದೆ ಎಂದ ಪಯಣಿಕ: ರೈಲ್ವೆ ಸಿಬ್ಬಂದಿಯಿಂದ ತರಾಟೆ
ಈ ವೇಳೆ ಪ್ರಯಾಣಿಕ ಅದು ಕಣ್ತಪ್ಪಿನಿಂದ ಗೊತ್ತಿಲ್ಲದೆಯೇ ಆಗಿದೆ ಎಂದು ಸಮಜಾಯಿಸಿ ನೀಡಲು ಯತ್ನಿಸುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ನನ್ನ ತಾಯಿ ಅವರಿಗೆ ತಿಳಿಯದೇ ಆ ವಸ್ತುಗಳನ್ನು ಪ್ಯಾಕ್ ಮಾಡಿ ಚೀಲಕ್ಕೆ ತುಂಬಿಸಿದ್ದಾರೆ ಎಂದು ಅಲ್ಲಿದ್ದ ಯುವಕ ಹೇಳಿದ್ದಾನೆ. ಆದರೆ ಇದರಿಂದ ಸಮಾಧಾನಗೊಳ್ಳದ ರೈಲ್ವೆ ಸಿಬ್ಬಂದಿ, ಎಸಿಯ ಫಸ್ಟ್ ಕೋಚ್ನಲ್ಲಿ ಪ್ರಯಾಣಿಸುತ್ತಿರುವಾಗ ಏಕೆ ಕಳ್ಳತನ ಮಾಡಿದ್ದೀರಿ? ನೀವು ಹೇಳಿದ್ದೀರಿ ನೀವು ತೀರ್ಥಯಾತ್ರೆ ಹೋಗಿದ್ದೀರಿ ಎಂದು ರೈಲ್ವೆ ಸಿಬ್ಬಂದಿ ಆ ಕುಟುಂಬವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಅಲ್ಲದೇ ರೈಲ್ವೆಯ ನಿಯಮಗಳ ಪ್ರಕಾರ, ಇದು ಅಪರಾಧ, ಪ್ರಕರಣ ತೀವ್ರ ಸ್ವರೂಪ ಪಡೆಯುತ್ತದೆ. ನಿಮ್ಮ ಪಿಎನ್ಆರ್ ನಂಬರ್ ಏನು? ಒಂದೋ ನೀವು ಈ ಬೆಡ್ಶಿಟ್ಗಳಿಗೆ ಹಣ ಪಾವತಿ ಮಾಡಿ, ನಾನು ರಶೀದಿ ನೀಡುತ್ತೇನೆ ಅಥವಾ ಪೊಲೀಸರು ಬರುತ್ತಾರೆ ನಿಮ್ಮ ಪಿಎನ್ಆರ್ಗೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಿಸುತ್ತೇನೆ ಎಂದು ರೈಲ್ವೆ ಸಿಬ್ಬಂದಿ ಹೇಳುವುದನ್ನು ವೀಡಿಯೋದಲ್ಲಿ ಕಾಣಬಹುದು. ಆದರೂ ಕುಟುಂಬ ಕೇವಮ ಮೂರು ಬೆಡ್ಶಿಟ್ ಮಾತ್ರ ಇದೆ ಹಾಗೂ ತಿಳಿಯದೇ ಆಗಿದೆ ಎಂದು ವಾದ ಮಾಡಿದ್ದಾರೆ. ಆದರೆ ರೈಲ್ವೆ ಸಿಬ್ಬಂದಿ ಅದು ಹೇಗೆ ತಿಳಿಯದೇ ಆಗುತ್ತದೆ. ಈಗಾಗಲೇ ಮೂರು ಬೆಡ್ಶಿಟ್ ನಿಮ್ಮ ಬ್ಯಾಗ್ನಲ್ಲಿ ಇರುವಾಗ ಎಂದು ಪ್ರಶ್ನಿಸಿದ್ದಾರೆ. ಇನ್ನೊಂದು ಬೆಡ್ಶಿಟ್ ಕೊಡಿ ಅಥವಾ 780 ರೂಪಾಯಿ ಪೇ ಮಾಡಿ ಎಂದು ಅವರು ಹೇಳಿದ್ದಾರೆ.
ಫಸ್ಟ್ ಎಸಿಯಲ್ಲಿ ಪ್ರಯಾಣಿಸುವುದೇ ಒಂದು ಘನತೆಯ ವಿಚಾರ ಆದರೆ ಅದರಲ್ಲೂ ಕಳ್ಳತನ ಮಾಡ್ತಿದ್ದಾರಲ್ಲ, ಇವರೆಂತವರು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.
