ಭಾರತದ ವಿರುದ್ಧ ಟ್ರಂಪ್ ಆಡಳಿತದ ಟ್ಯಾರಿಫ್ ನೀತಿಗಳ ಹಿಂದಿನ ಕೇಂದ್ರ ಶಕ್ತಿ ಪೀಟರ್ ನವರೋ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಸುಂಕ ನೀತಿಯ ಟಾರ್ಗೆಟ್ ಆಗಿರುವುದು ಪ್ರಮುಖವಾಗಿ ಭಾರತವೇ. ಟ್ರಂಪ್ ಅವರ ಹುಚ್ಚುತನದ ತೀರ್ಮಾನಗಳ ಹಿಂದೆ ಯಾರಿದ್ದಾರೆ? ಭಾರತದ ಮೇಲೆ ಭಾರೀ ಸುಂಕ ವಿಧಿಸಲು ಟ್ರಂಪ್ ಅವರನ್ನು ಪ್ರಚೋದಿಸುತ್ತಿರುವವರು ಯಾರು? ಡೊನಾಲ್ಡ್ ಟ್ರಂಪ್ ಅವರ ಟ್ಯಾರಿಫ್ ಗುರುವಿನ ಹೆಸರು ಪೀಟರ್ ನವರೋ . ಈ ಹೆಸರನ್ನು ನೀವು ಬಾರಿ ಬಾರಿ ಕೇಳುತ್ತಿರಬಹುದು. ಭಾರತದ ವ್ಯಾಪಾರ ನೀತಿಯನ್ನು ಮತ್ತು ರಷ್ಯಾದ ತೈಲವನ್ನು ಭಾರತ ಖರೀದಿಸುತ್ತಿರುವುದನ್ನು ಬಹಳ ಕಠಿಣ ಶಬ್ದಗಳಲ್ಲಿ ಆಕ್ಷೇಪಿಸುತ್ತಿರುವ ವ್ಯಕ್ತಿ ಈತನೇ. ಭಾರತದ ಮೇಲೆ ಶೇ. 50ರಷ್ಟು ಸುಂಕ ಹಾಕಬೇಕೆನ್ನುವ ನಿರ್ಧಾರದ ಹಿಂದೆ ಪೀಟರ್ ನವರೋ ಇದ್ದಾರೆ. ಈ ವ್ಯಕ್ತಿ ಭಾರತ ಮಾತ್ರವಲ್ಲ, ಕೆನಡಾ, ಚೀನಾ ಮೊದಲಾದ ದೇಶಗಳನ್ನು ಗುರಿಯಾಗಿಸಿಕೊಂಡೂ ಇವರು ವಾಗ್ದಾಳಿಗಳನ್ನು ಮಾಡುತ್ತಾ ಬಂದಿದ್ದಾರೆ. ಪೀಟರ್ ನವರೋ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಪ್ರಭಾವಿಸುವ ಹಾಗು ಒಂದು ದೇಶದ ಆರ್ಥಿಕ ಮತ್ತು ಹಣಕಾಸು ನೀತಿಯನ್ನು ತೀರಾ ದೊಡ್ಡದಾಗಿ ಬದಲಿಸುವ ಮಟ್ಟಕ್ಕೆ ಹೇಗೆ ಬಂದರು ಎನ್ನುವ ಮಾಹಿತಿ ಇಲ್ಲಿದೆ.

ಪೀಟರ್ ನವರೋ ಯಾರು?
ಪೀಟರ್ ನವರೊ ಒಬ್ಬ ಅಮೇರಿಕನ್ ಅರ್ಥಶಾಸ್ತ್ರಜ್ಞ ಮತ್ತು ಪ್ರಾಧ್ಯಾಪಕ. ಅವರು ಹಾರ್ವರ್ಡ್ ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪದವಿ ಪಡೆದಿದ್ದಾರೆ. ಕುತೂಹಲವೆಂದರೆ, ಆರಂಭದಲ್ಲಿ ಪೀಟರ್ ನವರೋ ಡೆಮಾಕ್ರಟಿಕ್ ಪಕ್ಷದ ಬೆಂಬಲಿಗರಾಗಿದ್ದರು. ಈಗ ಅವರ ನಿಲುವು ಬದಲಾಗಿದೆ. ಅಮೆರಿಕ ಫಸ್ಟ್ ಎನ್ನುವ ಉದ್ದೇಶದಲ್ಲಿ ರೂಪಿಸಲಾಗುವ ವ್ಯಾಪಾರ ನೀತಿಯ ಸಮರ್ಥಕರಾಗಿದ್ದಾರೆ. ಸದ್ಯ, ಟ್ರಂಪ್ ಅವರ ಅತ್ಯಂತ ಆಪ್ತ ಸಲಹೆಗಾರ ಎಂದರೆ ಈತನೇ. ಅಮೆರಿಕ ಅಧ್ಯಕ್ಷರಾಗಿ ಟ್ರಂಪ್ ಅವರ ಎರಡನೇ ಅವಧಿಯಲ್ಲಿ ವಿವಿಧ ದೇಶಗಳ ಮೇಲೆ ಟ್ಯಾರಿಫ್ ವಿಧಿಸುವ ನಿರ್ಧಾರದ ಹಿಂದಿನ ಮೆದುಳು ಪೀಟರ್ ನವರೋನದ್ದೇ.
ಟ್ರಂಪ್ ಮೊದಲ ಅವಧಿಯಲ್ಲೂ ನವರೋಗೆ ಪ್ರಮುಖ ಹುದ್ದೆ
ಟ್ರಂಪ್ ಅವರ ಮೊದಲ ಅವಧಿಯಲ್ಲಿ (2017-2021), ಪೀಟರ್ ನವರೊ ಅವರು ಶ್ವೇತಭವನದಲ್ಲಿ ರಾಷ್ಟ್ರೀಯ ವ್ಯಾಪಾರ ಮಂಡಳಿಯ ನಿರ್ದೇಶಕರಾಗಿದ್ದರು. ಈಗ ಅವರ ಎರಡನೇ ಅವಧಿಯಲ್ಲಿ, ಅವರು ವ್ಯಾಪಾರ ಮತ್ತು ಉತ್ಪಾದನೆಯ ಹಿರಿಯ ಸಲಹೆಗಾರರಾಗಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ನವರೊ ಅವರನ್ನು ಟ್ರಂಪ್ ಅವರ ಟ್ಯಾರಿಫ್ ನೀತಿಗಳ ಮಾಸ್ಟರ್ ಮೈಂಡ್ ಎಂದು ಕರೆಯಲಾಗುತ್ತದೆ. ಅವರು ಅಮೆರಿಕ ಫಸ್ಟ್ ನೀತಿಯ ಹಿಂದಿನ ಪ್ರಮುಖ ಶಕ್ತಿಯಾಗಿದ್ದಾರೆ ನವರೋ.
ಟ್ರಂಪ್‌ಗೆ ಪೀಟರ್ ನವರೋ ಹತ್ತಿರವಾಗಿದ್ದು ಹೇಗೆ?
ET ವರದಿಯ ಪ್ರಕಾರ, ಡೊನಾಲ್ಡ್ ಟ್ರಂಪ್ ಮತ್ತು ಪೀಟರ್ ನವರೊ ಅವರನ್ನು ಒಟ್ಟಿಗೆ ತರುವಲ್ಲಿ ಟ್ರಂಪ್ ಅವರ ಅಳಿಯ ಜೇರೆಡ್ ಕುಶ್ನರ್ ಪ್ರಮುಖ ಪಾತ್ರ ವಹಿಸಿದ್ದಾರೆ. ನವರೊ ಅವರ “ಡೆತ್ ಬೈ ಚೀನಾ” ಪುಸ್ತಕವನ್ನು ಓದಿದ ನಂತರ ಅದರಿಂದ ಜೇರೆಡ್ ತುಂಬಾ ಪ್ರಭಾವಿತರಾದರು. ಕುಶ್ನರ್ ಅವರನ್ನು ಸಂಪರ್ಕಿಸಿ ಟ್ರಂಪ್ ಪರ ಪ್ರಚಾರ ಮಾಡಲು ಆಹ್ವಾನಿಸಿದರು. ಟ್ರಂಪ್ ಅವರ ಮೊದಲ ಅವಧಿಯಲ್ಲಿ, ಅವರನ್ನು ವ್ಯಾಪಾರ ಸಲಹೆಗಾರರನ್ನಾಗಿ ಮಾಡಲಾಯಿತು. ನವರೊ ಅವರ ಆಕ್ರಮಣಕಾರಿ ನೀತಿ ಶೈಲಿಯಿಂದಾಗಿ, ಸಹೋದ್ಯೋಗಿಗಳೊಂದಿಗೆ ತಿಕ್ಕಾಟ ಇದ್ದೇ ಇದೆ.
25% ಹೆಚ್ಚುವರಿ ಸುಂಕ
ಭಾರತವು ರಷ್ಯಾದಿಂದ ಕಚ್ಚಾ ತೈಲ ಖರೀದಿಸುವ ಬಗ್ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಕರಾರು ವ್ಯಕ್ತಪಡಿಸುತ್ತಾ ಬಂದಿದ್ದಾರೆ. ಟ್ರೇಡ್ ಡೀಲ್ ಮಾಡಿಕೊಳ್ಳದಕ್ಕೆ ಭಾರತಕ್ಕೆ ಶೇ. 25ರಷ್ಟು ಸುಂಕ ಪ್ರಕಟಿಸಿದ್ದ ಟ್ರಂಪ್ ಅವರು, ರಷ್ಯಾದ ತೈಲ ಖರೀದಿಸುತ್ತಿರುವ ಕಾರಣಕ್ಕೆ ಭಾರತದ ಮೇಲೆ ಹೆಚ್ಚುವರಿ ಶೇ. 25 ಸುಂಕ ಪ್ರಕಟಿಸಿದ್ದರೆ. ಇದರೊಂದಿಗೆ ಭಾರತದ ಮೇಲೆ ಅಮೆರಿಕ ಶೇ. 50 ಟ್ಯಾರಿಫ್ ಹಾಕಿದಂತಾಗಿದೆ.
ಭಾರತದ ಸರಕುಗಳ ರಫ್ತಿಗೆ ಅಮೆರಿಕವೇ ಅತಿದೊಡ್ಡ ಮಾರುಕಟ್ಟೆಯಾಗಿದೆ. ಈಗ ಶೇ. 50 ಸುಂಕ ಹಾಕಿರುವುದು ಭಾರತದ ಹಲವು ರಫ್ತುದಾರರಿಗೆ ಆಘಾತವಾಗಬಹುದು. ಎರಡೂ ದೇಶಗಳ ನಡುವಿನ ವ್ಯಾಪಾರ ಸಂಬಂಧಕ್ಕೂ ಧಕ್ಕೆಯಾಗಿದೆ. ಅಮೆರಿಕ ಈ ಏಕಪಕ್ಷೀಯ ಕ್ರಮದ ಮೂಲಕ ಭಾರತವನ್ನು ರಷ್ಯಾದಿಂದ ದೂರ ಮಾಡುವ ಗುರಿ ಹೊಂದಿರಬಹುದು ಎನ್ನುವ ಅಭಿಪ್ರಾಯಗಳಿವೆ.