ಫೀನಿಕ್ಸ್‌ನಲ್ಲಿ ಭಯಾನಕ ಧೂಳಿನ ಬಿರುಗಾಳಿ ‘ಹಬೂಬ್’: ವಿದ್ಯುತ್ ಕಡಿತ, ವಿಮಾನ ಹಾರಾಟ ಸ್ಥಗಿತ

ವಾಷಿಂಗ್ಟನ್: ಅರಿಜೋನಾದ ಫೀನಿಕ್ಸ್ನಲ್ಲಿ ಹಬೂಬ್ (Phoenix Haboob) ಎಂಬ ಧೂಳಿನ ಬಿರುಗಾಳಿ (Arizona Dust Storm) ಬೀಸಿದ್ದು, ಎದೆ ಝಲ್ ಎನಿಸುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಧೂಳಿನ ಬಿರುಗಾಳಿಯಿಂದ ಅರಿಜೋನಾದಲ್ಲಿ ಸಂಚಾರ ಅಸ್ತವ್ಯಸ್ತವಾಯಿತು.
ಭಾರೀ ಬಿರುಗಾಳಿಯಿಂದ ಸಾವಿರಾರು ಮನೆಗಳ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ವಿದ್ಯುತ್ ಕಡಿತದಿಂದ ಜನರು ಸಮಸ್ಯೆ ಎದುರಿಸಿದರು. ಫೀನಿಕ್ಸ್ ನಗರ ಸೇರಿದಂತೆ ಮಾರಿಕೊಪಾ ಕೌಂಟಿಯಲ್ಲಿ 39,000 ರಿಂದ 52,000 ಗ್ರಾಹಕರ ವಿದ್ಯುತ್ ಕಡಿತಗೊಂಡಿದೆ.
ಚಂಡಮಾರುತದಿಂದಾಗಿ ಫೀನಿಕ್ಸ್ ಸ್ಕೈ ಹಾರ್ಬರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ವಿದ್ಯುತ್ ಕಡಿತಗೊಂಡಿತ್ತು. ಆದ್ದರಿಂದ ಎಲ್ಲಾ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿತ್ತು. ದಿ ಗಾರ್ಡಿಯನ್ನ ವರದಿಯ ಪ್ರಕಾರ, ಕನಿಷ್ಠ 62 ವಿಮಾನಗಳ ಹಾರಾಟ ಸ್ಥಗಿತಗೊಳಿಸಲಾಗಿದೆ. ಇನ್ನೂ ಅನೇಕ ವಿಮಾನಗಳ ಮಾರ್ಗ ಬದಲಾವಣೆ ಮಾಡಲಾಗಿದ್ಯಂತೆ.
ಹಬೂಬ್ ಎಂಬ ಧೂಳಿನ ಬಿರುಗಾಳಿ ಕಂಡು ಇದು ಮರಳಿನ ರಾಕ್ಷಸ ಎಂದು ಜನರು ಹೇಳಿದ್ದಾರೆ. ಧೂಳಿನ ಬಿರುಗಾಳಿಯ ಭಯಾನಕ ವಿಡಿಯೋ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಜನರು ಹಂಚಿಕೊಂಡಿದ್ದು, ಸಖತ್ ವೈರಲ್ ಆಗಿವೆ. ಹಬೂಬ್ ಧೂಳಿನ ಬಿರುಗಾಳಿ ಕೆಲವೇ ಕೆಲವು ನಿಮಿಷಗಳಲ್ಲಿ ಎಲ್ಲವನ್ನೂ ಆವರಿಸಿತ್ತು. ರಸ್ತೆಗಳು ಧೂಳಿನಿಂದ ಆವೃತವಾಗಿದ್ದವು, ಮುಂದೆನಿದೆ ಅನ್ನೋದು ಕೂಡಾ ಕಾಣಿಸದಷ್ಟು ಧೂಳು ಆವರಿಸಿತ್ತು.
ಧೂಳಿನ ಬಿರುಗಾಳಿಗಳು ಗಾಳಿಯ ಗುಣಮಟ್ಟವನ್ನೂ ಹಾಳು ಮಾಡುತ್ತವೆ. ಆದ್ದರಿಂದ ಉಸಿರಾಟದ ಸಮಸ್ಯೆ ಉಂಟು ಮಾಡುತ್ತವೆ. ವೇಗವಾಗಿ ಗಾಳಿ ಬೀಸುವುದರಿಂದ ಅಪಘಾತಗಳ ಅಪಾಯವೂ ಹೆಚ್ಚಾಗುತ್ತದೆ. ಸಾಧ್ಯವಾದಷ್ಟು ಜನರು ಮನೆಯಲ್ಲೇ ಇರಬೇಕು. ಧೂಳು ಮತ್ತು ಮರಳಿನ ಕಣಗಳ ಮಧ್ಯೆ ಹೋಗಲೇಬೇಕಾದ ಅನಿವಾರ್ಯತೆ ಎದುರಾದರೆ, ಮಾಸ್ಕ್ ಮತ್ತು ಕನ್ನಡಕಗಳನ್ನು ಧರಿಸುವುದು ಅನಿವಾರ್ಯ ಎಂದು ತಜ್ಞರು ಹೇಳಿದ್ದಾರೆ.
ಧೂಳಿನ ಚಂಡಮಾರುತಗಳು ಹೇಗೆ ರೂಪುಗೊಳ್ಳುತ್ತವೆ?
ಗುಡುಗು ಸಹಿತ ಬಲವಾದ ಗಾಳಿ ಬೀಸಿದಾಗ, ಗಂಟೆಗೆ 50-80 mph (ಗಂಟೆಗೆ 80-129 ಕಿಮೀ) ವೇಗದಲ್ಲಿ ನೆಲಕ್ಕೆ ಅಪ್ಪಳಿಸಿ ಸುರುಳಿ ಆಕಾರದಲ್ಲಿ ಗಾಳಿ ಸುತ್ತಿದಾಗ ಬಿರುಗಾಳಿ ರೂಪುಗೊಳ್ಳುತ್ತವೆ. ಆ ಬಿರುಗಾಳಿಗೆ ಸಡಿಲವಾದ ಧೂಳು ಮತ್ತು ಮಣ್ಣನ್ನು ಸೇರಿ, ಧೂಳಿನ ಚಂಡಮಾರುತಗಳು ರೂಪುಗೊಳ್ಳುತ್ತವೆ.
ಈ ರೀತಿಯ ಧೂಳಿನ ಚಂಡಮಾರುತಗಳು ಹೆಚ್ಚಾಗಿ ಶುಷ್ಕ ಪ್ರದೇಶಗಳು, ಖಾಲಿ ಜಮೀನುಗಳು, ಮರಳುಗಾಡಿನಂಥಾ ಪ್ರದೇಶದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ಭಾರೀ ಮಳೆ ಬರದಿದ್ದರೆ ಧೂಳಿನ ಚಂಡಮಾರುತಗಳ ಅಬ್ಬರ ಮತ್ತಷ್ಟು ಹೆಚ್ಚಾಗುತ್ತದೆ. ಮಳೆ ಪ್ರಮಾಣ ಹೆಚ್ಚಾದರೆ, ಧೂಳು ಕರಗುತ್ತದೆ.
ಹ್ಯಾಬೂಬ್ ಎಂದರೆ ಏನು?
ಮರಳಿನ ಬಿರುಗಾಳಿ ಅಥವಾ ಧೂಳಿನ ಬಿರುಗಾಳಿಯನ್ನು ಹೆಚ್ಚಾಗಿ ಹಬೂಬ್ ಎಂದು ಕರೆಯಲಾಗುತ್ತದೆ. ಹಬೂಬ್ ಎಂಬ ಪದ ಉತ್ತರ ಸುಡಾನ್‌ನಿಂದ ಹುಟ್ಟಿಕೊಂಡಿದೆ. ಹಬೂಬ್ ಎಂಬ ಪದ ಅರೇಬಿಕ್ ಪದ ‘ಹಬ್ಬ್’ನಿಂದ ಹುಟ್ಟಿದೆ. ಹಬ್ ಎಂದರೆ ‘ಬೀಸುವುದು’ ಎಂದರ್ಥ. ಈಗ ಈ ಪದವನ್ನು ಮರುಭೂಮಿಯಲ್ಲಿ ಬೀಸುವ ಧೂಳಿನ ಚಂಡಮಾರುಗಳ ಬಗ್ಗೆ ಮಾಹಿತಿ ನೀಡುವಾಗ ಬಳಸಲಾಗುತ್ತದೆ.
ಮರುಭೂಮಿ ಪ್ರದೇಶಗಳಲ್ಲಿ, ಮರಳು ಮತ್ತು ಧೂಳಿನ ಕಣಗಳನ್ನು ಒಳಗೊಂಡ ಧೂಳಿನ ಬಿರುಗಾಳಿಗಳು ವೇಗದಲ್ಲಿ ನುಗ್ಗುತ್ತವೆ. ಈ ಧೂಳಿನ ಬಿರುಗಾಳಿಗಳು 5,000 ಅಡಿಗಳಷ್ಟು ಎತ್ತರವನ್ನು ತಲುಪುತ್ತದೆ.