ಕರೀಂನಗರದಲ್ಲಿ ಉದ್ವಿಗ್ನತೆ: ಬಿಆರ್ಎಸ್ ಶಾಸಕನ ಕಚೇರಿ ಮೇಲೆ ಬಿಜೆಪಿ ಕಾರ್ಯಕರ್ತರಿಂದ ದಾಳಿ; ಪೊಲೀಸರಿಂದ ಲಾಠಿ ಪ್ರಹಾರ

ಹೈದರಾಬಾದ್: ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಬಂಡಿ ಸಂಜಯ್ ಕುಮಾರ್ ಅವರ ವಿರುದ್ಧ ಬಿಆರ್ಎಸ್ ಶಾಸಕ ಕೌಶಿಕ್ ರೆಡ್ಡಿ ವಿವಾದಾತ್ಮಕ ಹೇಳಿಕೆ ಬೆನ್ನಲ್ಲೇ ಕರೀಂನಗರದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಮಾಜಿ ಸಚಿವ ಹಾಗೂ ಶಾಸಕ ಗಂಗುಲ ಕಮಲಾಕರ್ ಅವರ ಕ್ಯಾಂಪ್ ಕಚೇರಿಗೆ ನುಗ್ಗಿ ಬಿಜೆಪಿಗರು ದಾಂಧಲೆ ನಡೆಸಿದ್ದಾರೆ. ಬಿಆರ್ಎಸ್ ಶಾಸಕ ಕೌಶಿಕ್ ರೆಡ್ಡಿ ಒಳಗೆ ಸುದ್ದಿಗೋಷ್ಠಿ ನಡೆಸುತ್ತಿದ್ದ ವೇಳೆ ಕಚೇರಿಗೆ ನುಗ್ಗಿ ಪೀಠೋಪಕರಣಗಳನ್ನು ಬಿಜೆಪಿ ಬೆಂಬಲಿತರು ಧ್ವಂಸಗೊಳಿಸಿದ್ದು, ಕೂಡಲೇ ಲಘು ಲಾಠಿ ಪ್ರಹಾರ ನಡೆಸಿ ಪೊಲೀಸರು ಗುಂಪು ಚದುರಿಸಿದ ಪ್ರಸಂಗ ನಡೆದಿದೆ.
ಬಿಜೆಪಿಗರ ಆಕ್ರೋಶಕ್ಕೆ ಕಾರಣ ಏನು?
ಕೆಟಿಆರ್ ಡ್ರಗ್ ಟೆಸ್ಟ್ ಮಾಡಿಸಬೇಕು ಎಂಬ ಬಂಡಿ ಸಂಜಯ್ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಕೌಶಿಕ್ ರೆಡ್ಡಿ, ಬಂಡಿ ಸಂಜಯ್ ಕೂಡ ಡ್ರಗ್ ಟೆಸ್ಟ್ ಮಾಡಿಸಿಕೊಳ್ಳಲಿ ಎಂದು ಸವಾಲು ಹಾಕಿದ್ದರು. ಅಲ್ಲದೆ, ಮಾದಕ ವಸ್ತು ಮಿಶ್ರಿತ ತಂಬಾಕು ಸೇವನೆಯ ಪರಿಣಾಮದಿಂದಲೇ ಬಂಡಿ ಸಂಜಯ್ ಅವರ ಕೂದಲು ಉದುರಿದೆ ಎಂದು ಟೀಕಿಸಿದ್ದರು. ಈ ಹೇಳಿಕೆ ಬಿಜೆಪಿ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿತ್ತು.ಇನ್ನು ಘಟನೆ ಬಗ್ಗೆ ಎಕ್ಸ್ ಪೋಸ್ಟ್ ಮಾಡಿ ಬಿಆರ್ಎಸ್ ಕಿಡಿ ಕಾರಿದೆ. ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಬಂಡಿ ಸಂಜಯ್ ಸ್ವತಃ ದಾಳಿಗೆ ಸಂಚು ರೂಪಿಸಿರುವುದು ಅತ್ಯಂತ ಖಂಡನೀಯ. ಬಿಜೆಪಿ ಗೂಂಡಾಗಳು ಕರೀಂನಗರ ಶಾಸಕರ ಕ್ಯಾಂಪ್ ಕಚೇರಿಯ ಮೇಲೆ ದಾಳಿ ನಡೆಸಿ ಫೋಠೋಪಕರಣಗಳು, ಬಾಗಿಲುಗಳು ಹಾಗೂ ಕಾರನ್ನು ಧ್ವಂಸಗೊಳಿಸಿದ್ದಾರೆ. ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಸ್ಥಾನದಲ್ಲಿರುವ ಬಂಡಿ ಸಂಜಯ್ ಸ್ವತಃ ಬಿಜೆಪಿ ಕಾರ್ಯಕರ್ತರನ್ನು ಪ್ರೇರೇಪಿಸಿ ಈ ದಾಳಿ ನಡೆಸಿಸಿರುವುದು ಪ್ರಜಾಪ್ರಭುತ್ವಕ್ಕೆ ಮಾಡಿದ ಅವಮಾನವಾಗಿದೆ. ಜನರು ಎಲ್ಲವನ್ನೂ ಗಮನಿಸುತ್ತಿದ್ದು, ಸರಿಯಾದ ಸಮಯದಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದಿದೆ.
