ಎಂಟು ಮಂದಿ ಪ್ರತಿಪಕ್ಷ ಸಂಸದರ ಅಮಾನತು ವಾಪಸ್; ಸದನಕ್ಕೆ ಮರಳಿದ ಸದಸ್ಯರು

ಹೊಸದಿಲ್ಲಿ: ಲೋಕಸಭೆಯು ಮಂಗಳವಾರ 8 ಮಂದಿ ವಿರೋಧ ಪಕ್ಷದ ಸಂಸದರ ಅಮಾನತು ಆದೇಶವನ್ನು ಧ್ವನಿ ಮತದ ಮೂಲಕ ರದ್ದುಗೊಳಿಸಿದೆ.
ಕಾಂಗ್ರೆಸ್ ಮುಖ್ಯ ಸಚೇತಕ ಕೆ. ಸುರೇಶ್ ಅವರು ಕೆಲವು ಸದಸ್ಯರ ‘ಅಜಾಗರೂಕ ಅಚಾತುರ್ಯ’ ಕುರಿತು ವಿಷಾದ ವ್ಯಕ್ತಪಡಿಸಿದ ನಂತರ, ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಅಮಾನತು ರದ್ದುಪಡಿಸುವ ನಿರ್ಣಯವನ್ನು ಸದನದಲ್ಲಿ ಮಂಡಿಸಿದರು. ಸಮಾಜವಾದಿ ಪಕ್ಷದ ಧರ್ಮೇಂದ್ರ ಯಾದವ್ ಮತ್ತು ಎನ್‌ಸಿಪಿ (ಎಸ್‌ಪಿ) ಯ ಸುಪ್ರಿಯಾ ಸುಳೆ ಅವರು ಈ ನಿರ್ಣಯವನ್ನು ಅನುಮೋದಿಸಿದರು.

ಗುರ್ಜೀತ್ ಸಿಂಗ್ ಔಜ್ಞಾ ಹಿಬಿ ಈಡನ್, ಸಿ.ಕಿರಣ್ ಕುಮಾರ್ ರೆಡ್ಡಿ ಅಮರಿಂದರ್ ಸಿಂಗ್ ರಾಜಾ ವಾರಿಂಗ್, ಮಾಣಿಕ್ಕಂ ಟ್ಯಾಗೋರ್, ಪ್ರಶಾಂತ್ ಪಡೋಲೆ, ಡೀನ್ ಕುರಿಯಾಕೋಸ್ ಮತ್ತು ಎಸ್. ವೆಂಟಕೇಸನ್ ಎಂಬ ಅಮಾನತುಗೊಂಡ 8 ಸಂಸದರ ಅಮಾನತನ್ನು ರದ್ದುಗೊಳಿಸಲು ಕಿರಣ್ ರಿಜಿಜು ಅವರು ವಿಧಿ 370ರ ಅಡಿಯಲ್ಲಿ ಪ್ರಸ್ತಾವನೆ ಮುಂದಿಟ್ಟರು. ಈ ಪ್ರಸ್ತಾವನೆಯನ್ನು ಸದನವು ಅಂಗೀಕರಿಸಿತು.
ಇದಾದ ಬಳಿಕ ಸದನವು 2026-27ನೇ ಸಾಲಿನ ಕೇಂದ್ರ ರೈಲ್ವೆ ಸಚಿವಾಲಯದ ಅನುದಾನ ಬೇಡಿಕೆಗಳ ಕುರಿತು ಚರ್ಚೆಯನ್ನು ಮುಂದುವರಿಸಲಿದೆ.