ರೈಲಿನಿಂದ ಉಡಾಯಿಸಬಹುದಾದ ಅಗ್ನಿ ಪ್ರೈಂ ಕ್ಷಿಪಣಿ ಪರೀಕ್ಷೆ ಯಶಸ್ವಿ; ಭಾರತದ ರಕ್ಷಣಾ ವಲಯಕ್ಕೆ ಮತ್ತಷ್ಟು ಬಲ

ನವದೆಹಲಿ: ಭಾರತವು ರಕ್ಷಣಾ ವಲಯದಲ್ಲಿ ಪ್ರಮುಖ ಪ್ರಗತಿಯನ್ನು ಸಾಧಿಸಿದೆ. ಈಗ ರೈಲುಗಳಿಂದ ಕ್ಷಿಪಣಿ(Missile)ಗಳನ್ನು ಉಡಾಯಿಸುವ ಸಾಮರ್ಥ್ಯವನ್ನು ಹೊಂದಿದೆ. 2,000 ಕಿಲೋಮೀಟರ್‌ಗಳ ವ್ಯಾಪ್ತಿಯನ್ನು ಹೊಂದಿರುವ ಅಗ್ನಿ-ಪ್ರೈಂ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಲಾಯಿತು. ಈ ಸಾಧನೆಗಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಡಿಆರ್‌ಡಿಒ ಮತ್ತು ಸಶಸ್ತ್ರ ಪಡೆಗಳನ್ನು ಅಭಿನಂದಿಸಿದರು. ಅಗ್ನಿ-ಪ್ರೈಂ ಕ್ಷಿಪಣಿಯನ್ನು ರೈಲಿನಿಂದ ಯಶಸ್ವಿಯಾಗಿ ಪರೀಕ್ಷಿಸಿದ್ದು ಇದೇ ಮೊದಲು.

ಭಾರತವು ರೈಲು ಆಧಾರಿತ ಮೊಬೈಲ್ ಲಾಂಚರ್ ವ್ಯವಸ್ಥೆಯಿಂದ ಮಧ್ಯಮ ಶ್ರೇಣಿಯ ಅಗ್ನಿ-ಪ್ರೈಂ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಎಕ್ಸ್ನಲ್ಲಿ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
ವಿಶೇಷವಾಗಿ ವಿನ್ಯಾಸಗೊಳಿಸಲಾದ ರೈಲು ಆಧಾರಿತ ಮೊಬೈಲ್ ಲಾಂಚರ್‌ನಿಂದ ಮಾಡುವ ಉಡಾವಣೆಯು ಯಾವುದೇ ಪೂರ್ವಭಾವಿ ಷರತ್ತುಗಳಿಲ್ಲದೆ ರೈಲು ಜಾಲದಲ್ಲಿ ಕಾರ್ಯನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿದೆ. ಕಡಿಮೆ ಗೋಚರತೆಯ ಪರಿಸ್ಥಿತಿಗಳಲ್ಲಿ ಉಡಾವಣೆ ಮಾಡಬಹುದು ಎಂದು ಅವರು ಬರೆದಿದ್ದಾರೆ.
ಈ ಪರೀಕ್ಷೆಯನ್ನು ಡಿಆರ್‌ಡಿಒ, ಎಸ್‌ಎಫ್‌ಸಿ ಮತ್ತು ಭಾರತೀಯ ಸಶಸ್ತ್ರ ಪಡೆಗಳು ಜಂಟಿಯಾಗಿ ನಡೆಸಿವೆ. ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಅಭಿನಂದನೆಗಳನ್ನು ಟ್ವೀಟ್ ಮಾಡಿದ್ದಾರೆ. ಅಗ್ನಿ-ಪ್ರೈಂನ ಯಶಸ್ವಿ ಪರೀಕ್ಷೆಯು ಭಾರತವನ್ನು ರೈಲು ಆಧಾರಿತ ಕ್ಯಾನಿಸ್ಟರ್ ಉಡಾವಣಾ ವ್ಯವಸ್ಥೆಯನ್ನು ಹೊಂದಿರುವ ಆಯ್ದ ದೇಶಗಳ ಗುಂಪಿನಲ್ಲಿ ಸೇರಿಸಿದೆ ಎಂದು ಅವರು ಹೇಳಿದ್ದಾರೆ. ಈ ಪರೀಕ್ಷೆಯು ಭಾರತದ ಆತ್ಮನಿರ್ಭರ ಭಾರತ ಉಪಕ್ರಮದ ಭಾಗವಾಗಿದೆ.
ಇದು ಅಗ್ನಿ ಸರಣಿಯ ಆರನೇ ಕ್ಷಿಪಣಿಯಾಗಿದ್ದು, ಇದನ್ನು ಈಗಾಗಲೇ ಭಾರತೀಯ ಸೇನೆಯಲ್ಲಿ ನಿಯೋಜಿಸಲಾಗಿದೆ. ಅಮೆರಿಕ, ರಷ್ಯಾದಂತಹ ದೇಶಗಳೊಂದಿಗೆ ಭಾರತದ ಸಮಾನತೆಯನ್ನು ಕಾಣಬಹುದು.
ಕ್ಯಾನಿಸ್ಟರ್-ಉಡಾವಣಾ ವ್ಯವಸ್ಥೆ ಎಂದರೇನು?
ಕ್ಯಾನಿಸ್ಟರ್-ಉಡಾವಣಾ ವ್ಯವಸ್ಥೆಯು ಕ್ಷಿಪಣಿಯ ಉಡಾವಣಾ ಸಮಯವನ್ನು ಕಡಿಮೆ ಮಾಡುತ್ತದೆ. ಇದು ಕ್ಷಿಪಣಿಯ ಕಾರ್ಯಾಚರಣೆಯನ್ನು ಸಹ ಸುಗಮಗೊಳಿಸುತ್ತದೆ. ಅಗತ್ಯವಿದ್ದರೆ, ಅದನ್ನು ರೈಲು ಅಥವಾ ರಸ್ತೆಯ ಮೂಲಕ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸುಲಭವಾಗಿ ಸಾಗಿಸಬಹುದು. ಹೊಸ ಕ್ಷಿಪಣಿಯು ಚೀನಾ ಮತ್ತು ಪಾಕಿಸ್ತಾನ ಎರಡರಿಂದಲೂ ಯಾವುದೇ ಬೆದರಿಕೆಯ ವಿರುದ್ಧ ಭಾರತವನ್ನು ಬಲಪಡಿಸುತ್ತದೆ.
ಕಳೆದ ಡಿಸೆಂಬರ್‌ನಲ್ಲಿ, ಭಾರತವು ಪರಮಾಣು ಸಾಮರ್ಥ್ಯದ ಬ್ಯಾಲಿಸ್ಟಿಕ್ ಕ್ಷಿಪಣಿ ಅಗ್ನಿ -5 ಅನ್ನು ಯಶಸ್ವಿಯಾಗಿ ಪರೀಕ್ಷಿಸಿತು, ಇದು 5,000 ಕಿಲೋಮೀಟರ್‌ಗಳವರೆಗಿನ ಗುರಿಗಳನ್ನು ತಲುಪಬಹುದು. ಅಗ್ನಿ 1 ರಿಂದ 4 ಕ್ಷಿಪಣಿಗಳು 700 ಕಿಲೋಮೀಟರ್‌ಗಳಿಂದ 3,500 ಕಿಲೋಮೀಟರ್‌ಗಳ ವ್ಯಾಪ್ತಿಯನ್ನು ಹೊಂದಿವೆ ಮತ್ತು ಈಗಾಗಲೇ ನಿಯೋಜಿಸಲಾಗಿದೆ.
