ಶಿಕ್ಷಕಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ವಿದ್ಯಾರ್ಥಿ: ಮಧ್ಯಪ್ರದೇಶದಲ್ಲಿ ಬೆಚ್ಚಿಬೀಳಿಸುವ ಘಟನೆ

ಭೋಪಾಲ್: 18 ವರ್ಷದ ವಿದ್ಯಾರ್ಥಿಯೋರ್ವ ಶಿಕ್ಷಕಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಇಟ್ಟಿರೋ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದೆ. ಮಧ್ಯಪ್ರದೇಶದ ನರಸಿಂಗಪುರ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಶಿಕ್ಷಕಿ ಸ್ಮೃತಿ ದೀಕ್ಷಿತ್ ಸುಟ್ಟ ಗಾಯಗಳಿಂದ ಗಾಯಗೊಂಡಿದ್ದ, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಆರೋಪಿ 18 ವರ್ಷದ ಸೂರ್ಯಾಂಶ್ ಕೊಚಾರ್ ಎಂಬಾತನ್ನು ಪೊಲೀಸರು ಬಂಧಿಸಿದ್ದಾರೆ. ಟೀಚರ್ ಸ್ಮೃತಿ ಅವರು ಆಡಳಿತ ಮಂಡಳಿ ಮುಂದೆ ಸೂರ್ಯಾಂಶ್ ನಡವಳಿಕೆ ವಿರುದ್ಧ ದೂರು ನೀಡಿದ್ದರು. ಇದರಿಂದ ಕೋಪಗೊಂಡ ಸೂರ್ಯಾಂಶ್ ಕೊಚಾರ್ ಬೆಂಕಿ ಸುರಿದು ಶಿಕ್ಷಕಿಯನ್ನು ಕೊಲ್ಲಲು ಮುಂದಾಗಿದ್ದಾನೆ.

ಮನೆಗೆ ಹೋಗಿ ಪೆಟ್ರೋಲ್ ಎರಚಿ ಬೆಂಕಿ ಹಚ್ಚಿದ
ಸೋಮವಾರ ಮಧ್ಯಾಹ್ನ ಸುಮಾರು 3.30ರ ವೇಳೆಗೆ ಟೀಚರ್ ಸ್ಮೃತಿ ಮನೆಗೆ ಸೂರ್ಯಾಂಶ್ ಪೆಟ್ರೋಲ್ ತುಂಬಿದ ಕ್ಯಾನ್ ಹಿಡಿದುಕೊಂಡು ಬಂದಿದ್ದಾನೆ. ನೋಡ ನೋಡುತ್ತಿದ್ದಂತೆ ಶಿಕ್ಷಕಿ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹೆಚ್ಚಿ ಪರಾರಿಯಾಗಿದ್ದಾನೆ. ಸ್ಥಳೀಯರು ಶಿಕ್ಷಕಿಯನ್ನು ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ. ಶಿಕ್ಷಕಿ ದೇಹ ಶೇ.10 ರಿಂದ 15 ದೇಹದ ಭಾಗ ಸುಟ್ಟಿದೆ ಎಂದು ವರದಿಯಾಗಿದೆ. ಶಿಕ್ಷಕಿ ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಶಾಲಾ ಆಡಳಿತ ಮಂಡಳಿಗೆ ದೂರು ನೀಡಿದ್ದಕ್ಕೆ ಸೂರ್ಯಾಂಶ್ಗೆ ಕೋಪ
ಆರೋಪಿ ಸೂರ್ಯಾಂಶ್ ಕೊಚಾರ್ ಮತ್ತು ಶಿಕ್ಷಕಿ ಸ್ಮೃತಿ ದೀಕ್ಷಿತ್ ಕಳೆದ ಎರಡು ವರ್ಷಗಳಿಂದ ಪರಿಚಿತರಾಗಿದ್ದಾರೆ. ಆರೋಪಿ ವಿದ್ಯಾರ್ಥಿ ಸೂರ್ಯಾಂಶ್ ಶಿಕ್ಷಕಿಯನ್ನು ಪ್ರೀತಿಸುತ್ತಿದ್ದನು. ಇದು ಒನ್ ಸೈಡ್ ಲವ್ ಆಗಿತ್ತು ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಇದೇ ವಿಷಯವಾಗಿ ವಿದ್ಯಾರ್ಥಿ ಸೂರ್ಯಾಂಶ್ನನ್ನು ಶಾಲೆಯಿಂದ ಹೊರಹಾಕಿದ್ದನು. ನಂತರ ಸೂರ್ಯಾಂಶ್ ಬೇರೆ ಶಾಲೆಯಲ್ಲಿ ಓದುತ್ತಿದ್ದನು. ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದ ಸಂದರ್ಭದಲ್ಲಿ ಆರೋಪಿ ಸೂರ್ಯಾಂಶ್, ಶಿಕ್ಷಕಿಯ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಾನೆ. ಈ ವಿಷಯ ತಿಳಿದ ಶಿಕ್ಷಕಿ ಶಾಲಾ ಆಡಳಿತ ಮಂಡಳಿಗೆ ದೂರು ನೀಡಿದ್ದರು ಎಂದು ಪೊಲೀಸ್ ಅಧಿಕಾರಿ ಮನೋಜ್ ಗುಪ್ತಾ ಹೇಳಿದ್ದಾರೆ. ಇದರಿಂದ ಕೋಪಗೊಂಡ ಸೂರ್ಯಾಂಶ್ ಕೊಚಾರ್ ಈ ರೀತಿಯಾಗಿ ಮಾಡಿದ್ದಾನೆ.
ಸಂತ್ರಸ್ತೆಯ ಹೇಳಿಕೆ ದಾಖಲಿಸಿಕೊಂಡ ನಂತರ ಮುಂದಿನ ಕ್ರಮ
ಇದು ಒನ್ ಸೈಡ್ ಲವ್ ಸ್ಟೋರಿ ಮತ್ತು ಶಿಕ್ಷಕಿಯ ಮೇಲಿನ ವೈಯಕ್ತಿಕ ದ್ವೇಷದಿಂದಾಗಿ ಕೊಲೆ ಪ್ರಯತ್ನ ಮಾಡಲಾಗಿದೆ. ಆರೋಪಿ ಸಂಪೂರ್ಣವಾಗಿ ಪ್ಲಾನ್ ಮಾಡಿಕೊಂಡು ಈ ದಾಳಿ ನಡೆಸಿದ್ದಾನೆ. ಐಪಿಸಿ ಸೆಕ್ಷನ್ 124 ಎ ಮತ್ತು ಇತರ ಸೆಕ್ಷನ್ಗಳ ಅಡಿಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸಂತ್ರಸ್ತೆಯ ಹೇಳಿಕೆ ದಾಖಲಿಸಿಕೊಂಡ ನಂತರ ಮುಂದಿನ ಕಾನೂನು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಡೊಂಗರ್ಗಾಂವ್ ಪೊಲೀಸ್ ಠಾಣೆ ವ್ಯಾಪ್ತಿಯ ಕಲ್ಯಾಣಪುರ ಗ್ರಾಮದಲ್ಲಿದ್ದ ಆರೋಪಿ ಸೂರ್ಯಾಂಶ್ ಕೊಚಾರ್ನನ್ನು ಬಂಧಿಸಲಾಗಿದೆ. ಈ ಸಂಬಂಧ ಕೊಟ್ವಾಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಈ ಸಂಬಂಧ ತನಿಖೆ ಮುಂದುವರಿಸಲಾಗಿದೆ.