‘ಸ್ಟೂಡೆಂಟ್ ಆಫ್ ದಿ ಇಯರ್’ ನಟನ ಬಂಧನ: 35 ಕೋಟಿ ಮೌಲ್ಯದ 3.5 ಕೆಜಿ ಕೊಕೇನ್ ವಶ

ಕರಣ್ ಜೋಹರ್ ನಿರ್ದೇಶನ 2012ರ ಚಲನಚಿತ್ರ ‘ಸ್ಟೂಡೆಂಟ್ ಆಫ್ ದಿ ಇಯರ್’ನಲ್ಲಿ ಕಾಣಿಸಿಕೊಂಡ ನಟನೊರ್ವ ಚೆನ್ನೈ ವಿಮಾನ ನಿಲ್ದಾಣದಲ್ಲಿ 3.5 ಕೆಜಿ ಕೊಕೇನ್‌ನೊಂದಿಗೆ ಸಿಕ್ಕಿಬಿದ್ದಿದ್ದು, ಆತನನ್ನು ಏರ್‌ಪೋರ್ಟ್‌ನ ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ ಎಂದು ವರದಿಯಾಗಿದೆ. ನಟನಿಂದ ವಶಕ್ಕೆ ಪಡೆಯಲಾದ 3.5 ಕೇಜಿ ಕೋಕೆನ್‌ಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು 35 ಕೋಟಿ ರೂ. ಮೌಲ್ಯವಿದೆ ಎಂದು ವರದಿಯಾಗಿದೆ. ಸಿಂಗಾಪುರದಿಂದ ಚೆನ್ನೈ ಏರ್‌ಪೋರ್ಟ್‌ಗೆ ಬಂದಿಳಿದ ವೇಳೆ ಈ ಘಟನೆ ನಡೆದಿದೆ. ಕೆಲ ಆಂಗ್ಲ ಮಾಧ್ಯಮಗಳ ವರದಿಯ ಪ್ರಕಾರ, ಚೆನ್ನೈ ಕಸ್ಟಮ್ಸ್ ಮತ್ತು ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ನಡೆಸಿದ ಜಂಟಿ ಕಾರ್ಯಾಚರಣೆಯ ಭಾಗವಾಗಿ ಈ ಮಾದಕ ವಸ್ತು ಪತ್ತೆಯಾಗಿದೆ.

ಸಿಂಗಾಪುರದಿಂದ ಬಂದ ನಟನ ಬ್ಯಾಗಲ್ಲಿ 35 ಕೋಟಿ ಮೌಲ್ಯದ ಡ್ರಗ್
ಆದರೆ ಈ ನಟನ ಹೆಸರನ್ನು ಅಧಿಕಾರಿಗಳು ಇನ್ನೂ ಬಹಿರಂಗಗೊಳಿಸಿಲ್ಲ, ಚಲನಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸುವುದಕ್ಕೆ ಹೆಸರುವಾಸಿಯಾಗಿರುವ ನಟ ಎಂದು ವರದಿಯಾಗಿದೆ. ಆರೋಪಿ ನಟ ಭಾನುವಾರ (ಸೆಪ್ಟೆಂಬರ್ 28) ಮುಂಜಾನೆ ಸಿಂಗಾಪುರದಿಂದ ಬಂದು ಚೆನ್ನೈ ವಿಮಾನ ನಿಲ್ದಾಣದಲ್ಲಿ ಇಳಿದ ಕೂಡಲೇ ಗುಪ್ತಚರ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲಿ ಆತನನ್ನು ಬಂಧಿಸಿದ್ದಾರೆ. ಈ ವೇಳೆ ಆತನ ಟ್ರಾಲಿಯಲ್ಲಿ ಅಡಗಿಸಿಟ್ಟ ಪ್ಲಾಸ್ಟಿಕ್ ಚೀಲಗಳಲ್ಲಿ ಬಿಳಿ ಪುಡಿಯನ್ನು ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಮಾಡಿದ್ದು. ನಂತರ ಅದು ಕೊಕೇನ್ ಎಂದು ದೃಢಪಡಿಸಲಾಗಿದೆ.
ನಂತರ ನಟನ ಬಗ್ಗೆ ವಿವರವಾದ ಮಾಹಿತಿ ಪಡೆದ ಅಧಿಕಾರಿಗಳು ಘಟನೆ ಬಗ್ಗೆ ತನಿಖೆ ಮಾಡಿದ್ದು, ತನಿಖೆಯಲ್ಲಿ ಅವನು ಕಾಂಬೋಡಿಯಾದಿಂದ ಸಿಂಗಾಪುರ ಮೂಲಕ ಚೆನ್ನೈಗೆ ಬಂದಿದ್ದಾನೆ ಎಂದು ತಿಳಿದು ಬಂದಿದೆ. ವರದಿಯ ಪ್ರಕಾರ ಆತನಿಗೆ ಟ್ರಾಲಿ ಬ್ಯಾಗ್ ಅನ್ನು ಕಾಂಬೋಡಿಯಾದಲ್ಲಿ ಅಪರಿಚಿತರು ನೀಡಿದ್ದು, ಅದನ್ನು ಅವನು ಚೆನ್ನೈ ವಿಮಾನ ನಿಲ್ದಾಣದಲ್ಲಿ ಇದ್ದವರಿಗೆ ಹಸ್ತಾಂತರಿಸಬೇಕಿತ್ತು ಎಂದು ಆತ ತನಿಖೆ ವೇಳೆ ಹೇಳಿಕೊಂಡಿದ್ದಾನೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ ಆತ ಕೊಕೇನ್ ಅನ್ನು ಮುಂಬೈ ಅಥವಾ ದೆಹಲಿಗೆ ಸಾಗಿಸುತ್ತಿದ್ದ, ಇದು ಸಂಘಟಿತ ಮಾದಕವಸ್ತು ಜಾಲಗಳ ಭಾಗವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಆ ನಟನ ಗುರುತನ್ನು ರಹಸ್ಯವಾಗಿಡಲಾಗಿದೆ. ಸ್ಟುಡೆಂಟ್ ಆಫ್ ದಿ ಇಯರ್ ಸಿನಿಮಾದಲ್ಲಿ ವರುಣ್ ಧವನ್, ಆಲಿಯಾ ಭಟ್ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ನಟಿಸಿದ್ದಾರೆ. ಆದರೆ ಈ ಸುದ್ದಿ ವೈರಲ್ ಆದ ತಕ್ಷಣವೇ ಸಾಮಾಜಿಕ ಜಾಲತಾಣಗಳಲ್ಲಿ ಆ ನಟ ಯಾರು ಇರಬಹುದು ಎಂಬ ಬಗ್ಗೆ ನೆಟ್ಟಿಗರು ಊಹೆ ಮಾಡುತ್ತಿದ್ದಾರೆ. ಬೊಲ್ಲಿ ಬ್ಲೈಂಡ್ಸ್ ಎನ್ ಗಾಸಿಪ್ ಸಬ್‌ರೆಡಿಟ್‌ನಲ್ಲಿ ಇದು ಯಾರಾಗಿರಬಹುದು? ಎಂದು ಕೇಳಿ ಪೋಸ್ಟ್ ಮಾಡಲಾಗಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ನೆಟ್ಟಿಗರು ಆ ಸಿನಿಮಾದಲ್ಲಿದ್ದ ಸಾಹಿಲ್ ಆನಂದ್, ಮಂಜೋತ್ ಸಿಂಗ್? ಕಾಯೋಜ್ ಇರಾನಿ ಹೀಗೆ ನಟರ ಹೆಸರನ್ನು ಊಹೆ ಮಾಡಿದ್ದಾರೆ. ಅಲ್ಲದೇ ಇವರು ಒಂದು ವೇಳೆ ಸಿಂಗಾಪುರ್‌ನಲ್ಲೇ ಸಿಕ್ಕಿಬಿದ್ದಿದ್ದಾರೆ ಹೇಗಿರಬಹುದು ಊಹಿಸಿ ನೇರವಾಗಿ ಗಲ್ಲು ಶಿಕ್ಷೆಯಾಗ್ತಿತ್ತು ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.