ವೈದ್ಯರ ನಿರ್ಲಕ್ಷ್ಯದಿಂದ ಎದೆಎತ್ತರಕ್ಕೆ ಬೆಳೆದ ಮಗನ ಸಾವು-ಎರಡು ಮಕ್ಕಳ ಕಳೆದುಕೊಂಡ ತಾಯಿ

ಬೆಂಗಳೂರು: ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ವ್ಯಕ್ತಿಯೊಬ್ಬ ಸಾವನ್ನಪ್ಪಿದ ದಾರುಣ ಘಟನೆ ನಡೆದಿದೆ. ದಾಸರಹಳ್ಳಿಯ ಪೈಪ್‌ಲೈನ್ ರಸ್ತೆಯ ನಿವಾಸಿಯಾಗಿದ್ದ 30 ವರ್ಷದ ಶಿವಕುಮಾರ್ ಎಂಬಾತ ಇಂದು ಸಂಜೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ.

ಈ ಘಟನೆಯಿಂದ ಶಿವಕುಮಾರ್ ಅವರ ತಾಯಿ ಶಾರದಾ ಅವರು ತಮ್ಮ ಇಬ್ಬರು ಗಂಡು ಮಕ್ಕಳನ್ನು ಕಳೆದುಕೊಂಡು ಆಘಾತಕ್ಕೊಳಗಾಗಿದ್ದಾರೆ.
ಒಂದು ವಾರದ ಹಿಂದೆ ಜ್ವರದಿಂದ ಬಳಲುತ್ತಿದ್ದ ಶಿವಕುಮಾರ್ ಅವರನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಆರೋಗ್ಯ ಸಮಸ್ಯೆ ತೀವ್ರವಾಗಿದ್ದರೂ ಆತನನ್ನು ಐಸಿಯುಗೆ ದಾಖಲಿಸದೆ ಜನರಲ್ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗಿತ್ತು ಎಂದು ತಾಯಿ ಶಾರದಾ ಆರೋಪಿಸಿದ್ದಾರೆ. ವೈದ್ಯರು ಸರಿಯಾಗಿ ಸ್ಪಂದಿಸಲಿಲ್ಲ, ಆರೋಗ್ಯ ಸ್ಥಿತಿ ಹದಗೆಟ್ಟರೂ ಗಮನ ಹರಿಸಲಿಲ್ಲ ಎಂದು ಶಾರದಾ ಕಣ್ಣೀರಿಟ್ಟು ಅಳಲು ತೋಡಿಕೊಂಡಿದ್ದಾರೆ.
ಇಂದು ಸಂಜೆ ಶಿವಕುಮಾರ್ ಚಿಕಿತ್ಸೆಗೆ ಸ್ಪಂದಿಸದೆ ಸಾವನ್ನಪ್ಪಿದ್ದಾನೆ. ಶಾರದಾ ಅವರಿಗೆ ಇಬ್ಬರು ಗಂಡು ಮಕ್ಕಳಿದ್ದರು. ಕಳೆದ ವರ್ಷ ಎರಡನೇ ಮಗ ಆರೋಗ್ಯ ಸಮಸ್ಯೆಯಿಂದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ. ಈಗ ಮೊದಲ ಮಗ ಶಿವಕುಮಾರ್ ಕೂಡ ಬೌರಿಂಗ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಶಾರದಾ ಅವರಿಗೆ ತಾಳಲಾರದ ದುಃಖ ತಂದಿದೆ. ಎದೆಯೆತ್ತರಕ್ಕೆ ಬೆಳೆಸಿದ ಇಬ್ಬರು ಮಕ್ಕಳನ್ನು ಕಣ್ಮುಂದೆ ಕಳೆದುಕೊಂಡೆ, ಈಗ ಏನು ಮಾಡಲಿ?’ ಎಂದು ಶಾರದಾ ಗೋಳಾಡಿದ್ದಾರೆ.
ಈ ಘಟನೆಯಿಂದ ಬೌರಿಂಗ್ ಆಸ್ಪತ್ರೆಯ ವೈದ್ಯರ ವಿರುದ್ಧ ನಿರ್ಲಕ್ಷ್ಯದ ಆರೋಪ ಕೇಳಿಬಂದಿದ್ದು, ಸಾರ್ವಜನಿಕರಲ್ಲಿ ಆಕ್ರೋಶ ವ್ಯಕ್ತವಾಗಿದೆ.
