ತಂದೆಯ ಅಂತ್ಯಕ್ರಿಯೆಗೆ ಮೊಬೈಲ್ ಸ್ವಿಚ್ ಆಫ್ ಮಾಡಿ ಪರಾರಿಯಾದ ಮಗ-ಸೊಸೆ: ಮೃತದೇಹ ಮನೆಯ ಹೊರಗೆ ಇಟ್ಟು ಅಂತ್ಯಸಂಸ್ಕಾರ!

ತ್ರಿಶೂರ್: ವೃದ್ಧಾಶ್ರಮದಲ್ಲಿ ತಂದೆ ತೀರಿಕೊಂಡ ವಿಷಯ ತಿಳಿದ ಮಗ ಮತ್ತು ಸೊಸೆ ಮನೆಗೆ ಬೀಗ ಹಾಕಿ ಮೊಬೈಲ್ ಸ್ಚಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದಾರೆ. ಇದರಿಂದಾಗಿ, ಮನೆಗೆ ತಂದಿದ್ದ ತಂದೆಯ ಮೃತದೇಹವನ್ನು ಮನೆಯೊಳಗೆ ತೆಗೆದುಕೊಂಡು ಹೋಗಲು ಸಾಧ್ಯವಾಗಲಿಲ್ಲ. ಮಗನಿಗಾಗಿ ಮೃತದೇಹವನ್ನು ಮನೆಯ ಹೊರಗೆ ಇಟ್ಟು ಕಾಯುತ್ತಿದ್ದರೂ, ಮಗ ಫೋನ್ ಸ್ವಿಚ್ ಆಫ್ ಮಾಡಿ ತಂದೆಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸದೆ ದೂರ ಉಳಿದಿದ್ದಾನೆ ಎಂದು ಸಂಬಂಧಿಕರು ತಿಳಿಸಿದ್ದಾರೆ.

ಅರಿಂಪೂರ್ ಕೈಪಿಳ್ಳಿ ರಿಂಗ್ ರಸ್ತೆಯಲ್ಲಿ ವಾಸವಾಗಿದ್ದ ಥಾಮಸ್ (78) ಬುಧವಾರ ಬೆಳಿಗ್ಗೆ ಮಣಲೂರಿನ ವೃದ್ಧಾಶ್ರಮದಲ್ಲಿ ನಿಧನರಾದರು. ಕೆಲವು ತಿಂಗಳ ಹಿಂದೆ, ಮಗ ಮತ್ತು ಸೊಸೆ ಹೊಡೆಯುತ್ತಿದ್ದಾರೆ ಎಂದು ಆರೋಪಿಸಿ, ಥಾಮಸ್ ತಮ್ಮ ಪತ್ನಿ ರೋಸಿಲಿಯೊಂದಿಗೆ ಮನೆ ಬಿಟ್ಟು ಹೋಗಿದ್ದರು. ಈ ಬಗ್ಗೆ ಅವರು ಅಂತಿಕ್ಕಾಡ್ ಪೊಲೀಸರಿಗೆ ದೂರು ನೀಡಿದ್ದರು. ಸ್ಥಳೀಯರು ತಿಳಿಸಿದ ನಂತರ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಬಂದು ಅವರನ್ನು ಮಣಲೂರಿನ ವೃದ್ಧಾಶ್ರಮಕ್ಕೆ ಸ್ಥಳಾಂತರಿಸಿದರು. ತಿಂಗಳುಗಳಿಂದ ಥಾಮಸ್ ಮತ್ತು ರೋಸಿಲಿ ಮಣಲೂರಿನ ವೃದ್ಧಾಶ್ರಮದಲ್ಲಿದ್ದರು.
ಈ ಮಧ್ಯೆ, ಬುಧವಾರ ಬೆಳಿಗ್ಗೆ ಥಾಮಸ್ ನಿಧನರಾದರು. ಅಧಿಕಾರಿಗಳು ಈ ವಿಷಯವನ್ನು ಮಗನಿಗೆ ತಿಳಿಸಿದರು. ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಮೃತದೇಹವನ್ನು ಮನೆಗೆ ತಂದಾಗ, ಮಗ ಮನೆಗೆ ಬೀಗ ಹಾಕಿ ಹೋಗಿರುವುದು ಗೊತ್ತಾಯಿತು. ಮಗನನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಫೋನ್ ಸ್ವಿಚ್ ಆಫ್ ಆಗಿತ್ತು ಎಂದು ಸಂಬಂಧಿಕರು ಮತ್ತು ನೆರೆಹೊರೆಯವರು ತಿಳಿಸಿದ್ದಾರೆ. ನಂತರ, ಮನೆಯ ಅಂಗಳದಲ್ಲಿಯೇ ಮೃತದೇಹವನ್ನು ಇಟ್ಟು ಅಂತ್ಯಕ್ರಿಯೆ ನಡೆಸಿ, ಸಂಜೆ ಎರವ್ ಸೆಂಟ್ ತೆರೆಸಾಸ್ ಚರ್ಚ್ನಲ್ಲಿ ಅಂತ್ಯಸಂಸ್ಕಾರ ಮಾಡಲಾಯಿತು.
