ಇನ್‌ಸ್ಟಾದಿಂದ ಸೋಷಿಯಲ್ ಮೀಡಿಯಾ ಕಿಂಗ್ ಸಡನ್ ಔಟ್

ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ (Virat Kohli) ಈಗ ಸುದ್ದಿಯಲ್ಲಿದ್ದಾರೆ. ಕೊಹ್ಲಿ ಇನ್ಸ್ಟಾಗ್ರಾಮ್ನಿಂದ ಇದ್ದಕ್ಕಿದ್ದಂತೆ ಕಣ್ಮರೆಯಾಗಿದ್ದರು. ಎಷ್ಟೇ ಹುಡುಕಿದರೂ ಅವರು ಸಿಗಲೇ ಇಲ್ಲ. ಇದು ಕೋಲಾಹಲ ಸೃಷ್ಟಿ ಮಾಡಿತ್ತು. ಕೊಹ್ಲಿ ಸುಮಾರು 12 ಗಂಟೆಗಳ ಬಳಿಕ ಇನ್ಸ್ಟಾಗ್ರಾಮ್ಗೆ ಮರಳಿದ್ದಾರೆ. ಇದು ಅಭಿಮಾನಿಗಳ ಖುಷಿಗೆ ಕಾರಣ ಆಗಿದೆ.

ವಿರಾಟ್ ಕೊಹ್ಲಿ ಅತ್ಯಂತ ಜನಪ್ರಿಯ ಕ್ರಿಕೆಟ್ ಆಟಗಾರ. ಅವರು ಭಾರತದಲ್ಲಿ ಮಾತ್ರವಲ್ಲ, ವಿಶ್ವಾದ್ಯಂತ ಹೆಸರು ಮಾಡಿದ್ದಾರೆ. ಅವರ ಇನ್ಸ್ಟಾ ಖಾತೆಗೆ 27 ಕೋಟಿ ಹಿಂಬಾಲಕರು ಇದ್ದಾರೆ. ಆದಾಗ್ಯೂ ಕೊಹ್ಲಿ ಇನ್ಸ್ಟಾ ಖಾತೆ ಕಾಣೆ ಆಯಿತು. ಇನ್ಸ್ಟಾದಲ್ಲಿ ಅವರನ್ನು ಹುಡುಕಿದರೂ ಅವರು ಸಿಗಲೇ ಇಲ್ಲ. ವಿರಾಟ್ ಸೋಶಿಯಲ್ ಮೀಡಿಯಾಗೆ ಗುಡ್ಬೈ ಹೇಳಿದರು ಎಂಬ ಚರ್ಚೆ ಶುರುವಾಯಿತು. ಅವರ ಖಾತೆಯನ್ನು ಹ್ಯಾಕ್ ಮಾಡಲಾಗಿದೆಯೇ ಎಂಬ ಪ್ರಶ್ನೆ ಮೂಡಿದವು. ವಿರಾಟ್ ಖಾತೆ ಕಾಣಿಸದ ಕಾರಣ, ಅವರ ಪತ್ನಿ, ನಟಿ ಅನುಷ್ಕಾ ಶರ್ಮಾ ಅವರ ಇನ್ಸ್ಟಾಗ್ರಾಮ್ ಪೋಸ್ಟ್ಗೆ ‘ವಿರಾಟ್ ಕೊಹ್ಲಿ ಎಲ್ಲಿದ್ದಾರೆ?’ ಎಂದು ಪ್ರಶ್ನೆ ಮಾಡಿದ್ದಾರೆ.

ಗುರುವಾರ ರಾತ್ರಿ ಕೊಹ್ಲಿ ಇನ್ಸ್ಟಾ ಖಾತೆ ಮಾಯ ಆಯಿತು. ಬೆಳಿಗ್ಗೆ 8-8.30ರ ವೇಳೆಗೆ ಇನ್‌ಸ್ಟಾಗ್ರಾಮ್ ಖಾತೆ ಮತ್ತೆ ಸಕ್ರಿಯಗೊಂಡಿದೆ. ತಾಂತ್ರಿಕ ಕಾರಣಗಳಿಂದ ಖಾತೆಯನ್ನು ನಿಷ್ಕ್ರಿಯಗೊಂಡಿತ್ತೇ ಅಥವಾ ಇದು ಕೊಹ್ಲಿ ಅವರ ಸ್ವಂತ ನಿರ್ಧಾರವೇ ಎಂಬುದು ಸ್ಪಷ್ಟವಾಗಿಲ್ಲ. ಕಾಕತಾಳೀಯ ಎಂಬಂತೆ ವಿರಾಟ್ ಸಹೋದರ ವಿಕಾಸ್ ಕೊಹ್ಲಿ ಅವರ ಇನ್‌ಸ್ಟಾಗ್ರಾಮ್ ಖಾತೆ ಕೂಡ ಕಾಣೆ ಆಗಿದೆ. ‘ಪ್ರೊಫೈಲ್ ಲಭ್ಯವಿಲ್ಲ’ ಎಂದು ಬರುತ್ತಿದೆ.
ಕೊಹ್ಲಿ ಇತರ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಸಕ್ರಿಯರಾಗಿದ್ದಾರೆ. ಅವರು ಪ್ರಮೋಷನ್ ಪೋಸ್ಟ್ಗಳನ್ನು ಮಾಡುತ್ತಾರೆ. ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ನಂತರ ಅವರು ಇತ್ತೀಚೆಗೆ ಲಂಡನ್‌ಗೆ ಮರಳಿದರು. ಅವರು ಈಗ ಐಪಿಎಲ್ 2026 ರಲ್ಲಿ ಆರ್‌ಸಿಬಿ (ರಾಯಲ್ ಚಾಲೆಂಜರ್ಸ್ ಬೆಂಗಳೂರು) ಪರ ಆಡಲಿದ್ದಾರೆ.