ಲೈಂಗಿಕ ದೌರ್ಜನ್ಯ ಆರೋಪ: ಕೇರಳ ಶಾಸಕ ರಾಹುಲ್ ಮಮ್‌ತಥಿಲ್ ಅಮಾನತು

ತಿರುವನಂತಪುರ: ಹಲವು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಆರೋಪ ಎದುರಿಸುತ್ತಿರುವ ಪಾಲಕ್ಕಾಡ್ ಶಾಸಕ ರಾಹುಲ್ ಮಮ್‌ತಥಿಲ್ ಅವರನ್ನು ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಯು (ಕೆಪಿಸಿಸಿ) ಪಕ್ಷದಿಂದ ಅಮಾನತು ಮಾಡಿದೆ.

ರಾಹುಲ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂಬ ಕೂಗು ವ್ಯಾಪಕವಾಗಿದೆ. ಒಂದು ವೇಳೆ, ಅವರು ಸ್ಥಾನ ತ್ಯಜಿಸಿ, ಚುನಾವಣೆ ನಡೆದರೆ ಬಿಜೆಪಿಗೆ ಲಾಭವಾಗಬಹುದೇ ಎಂಬ ಲೆಕ್ಕಾಚಾರ ಕಾಂಗ್ರೆಸ್ ಪಾಳೆಯದಲ್ಲಿ ಶುರುವಾಗಿದೆ.
ಪಾಲಕ್ಕಾಡ್ ವಿಧಾನಸಭೆಗೆ ನಡೆದ ಕಳೆದ ಮೂರೂ ಚುನಾವಣೆಗಳಲ್ಲಿ ಬಿಜೆಪಿ ಎರಡನೇ ಸ್ಥಾನ ಗಳಿಸಿತ್ತು. ರಾಹುಲ್ ಅವರಿಗೆ ವಿಧಾನಸಭೆ ಅಧಿವೇಶನದಿಂದಲೂ ಹೊರಗುಳಿಯುವಂತೆ ಕೆಪಿಸಿಸಿ ಸೂಚಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ರಾಹುಲ್ ವಿರುದ್ಧದ ಆರೋಪವನ್ನು ಪಕ್ಷದ ಹೈಕಮಾಂಡ್ ಗಂಭೀರವಾಗಿ ಪರಿಗಣಿಸಿದೆ. ಆರೋಪದ ಬೆನ್ನಲ್ಲೇ, ಕೇರಳ ಘಟಕದ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ತಕ್ಷಣವೇ ರಾಜೀನಾಮೆ ನೀಡುವಂತೆ ಸೂಚಿಸಲಾಗಿತ್ತು.
ಲೈಂಗಿಕತೆಗೆ ಒತ್ತಾಯಿಸಿದ್ದು, ಗರ್ಭಪಾತ ಮಾಡಿಸಿಕೊಳ್ಳುವಂತೆ ಬಲವಂತ ಮಾಡಿದ್ದು ಸೇರಿದಂತೆ ಗಂಭೀರ ಆರೋಪಗಳನ್ನು ಹಲವು ಮಹಿಳೆಯರು ರಾಹುಲ್ ವಿರುದ್ಧ ಮಾಡಿದ್ದಾರೆ. ಆದರೆ, ಯಾರೊಬ್ಬರೂ ಔಪಚಾರಿಕವಾಗಿ ದೂರು ದಾಖಲಿಸಿಲ್ಲ.
ಕೇರಳ ವಿಧಾನಸಭೆ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇದೆ. ಒಂದು ವೇಳೆ ರಾಹುಲ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರೆ, ಚುನಾವಣೆ ನಡೆಸುವ ವಿಚಾರವು ಚುನಾವಣಾ ಆಯೋಗ ವಿವೇಚನೆಗೊಳಪಡುತ್ತದೆ.
