ತಮಿಳುನಾಡು ರಾಜಕೀಯದಲ್ಲಿ ಸಂಚಲನ: ಟಿವಿಕೆ ಶಾಸಕರಿಂದ ರಾಜೀನಾಮೆ ಎಚ್ಚರಿಕೆ.

ಚೆನ್ನೈ: ತಮಿಳುನಾಡಿನಲ್ಲಿ ಸರ್ಕಾರ ರಚನೆಗೆ ಸಂಬಂಧಿಸಿದ ರಾಜಕೀಯ ಚಟುವಟಿಕೆಗಳು ತೀವ್ರಗೊಂಡಿರುವ ನಡುವೆ, ಡಿಎಂಕೆ ಅಥವಾ ಎಐಎಡಿಎಂಕೆ ಸರ್ಕಾರ ರಚಿಸಲು ಮುಂದಾದರೆ ತಮ್ಮ ಪಕ್ಷದ ಎಲ್ಲ 107 ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂದು ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಎಚ್ಚರಿಕೆ ನೀಡಿದೆ ಎಂದು ಮೂಲಗಳು ತಿಳಿಸಿವೆ ಎಂದು NDTV ವರದಿ ಮಾಡಿದೆ.
ಡಿಎಂಕೆ ಹಾಗೂ ಎಐಎಡಿಎಂಕೆ ಪಕ್ಷಗಳಲ್ಲಿ ನಡೆದ ಮಹತ್ವದ ಸಭೆಗಳ ಬಳಿಕ ಟಿವಿಕೆ ಈ ತೀರ್ಮಾನಕ್ಕೆ ಬಂದಿದೆ ಎನ್ನಲಾಗಿದೆ. ಜನಪ್ರಿಯ ಮತಗಳನ್ನು ಪಡೆದ ಪಕ್ಷವನ್ನು ಅಧಿಕಾರದಿಂದ ದೂರವಿಡಲು ಎರಡು ದ್ರಾವಿಡ ಪಕ್ಷಗಳು ಒಪ್ಪಂದ ರಾಜಕೀಯಕ್ಕೆ ಮುಂದಾಗಿವೆ ಎಂಬ ಅನುಮಾನ ಟಿವಿಕೆ ವಲಯದಲ್ಲಿ ವ್ಯಕ್ತವಾಗಿದೆ.

107 ಸ್ಥಾನಗಳನ್ನು ಗೆದ್ದಿರುವ ಟಿವಿಕೆ, ವಿಧಾನಸಭೆಯಲ್ಲಿ ಏಕೈಕ ಅತಿದೊಡ್ಡ ಪಕ್ಷವಾಗಿರುವುದರಿಂದ ಸರ್ಕಾರ ರಚಿಸಲು ರಾಜ್ಯಪಾಲರು ಆಹ್ವಾನಿಸಬೇಕಿತ್ತು ಎಂದು ವಾದಿಸಿದೆ. ಆದರೆ ರಾಜ್ಯಪಾಲ ಆರ್.ವಿ. ಅರ್ಲೇಕರ್ ಅವರು ಬಹುಮತಕ್ಕೆ ಅಗತ್ಯ ಸಂಖ್ಯಾಬಲ ಇಲ್ಲವೆಂದು ಹೇಳಿ ವಿಜಯ್ ಅವರಿಗೆ ಅವಕಾಶ ನಿರಾಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಎರಡು ದಿನಗಳ ಅವಧಿಯಲ್ಲಿ ವಿಜಯ್ ರಾಜ್ಯಪಾಲರನ್ನು ಎರಡನೇ ಬಾರಿ ಭೇಟಿಯಾದರೂ, 118 ಶಾಸಕರ ಬೆಂಬಲ ಪತ್ರಗಳನ್ನು ಒದಗಿಸುವಂತೆ ರಾಜ್ಯಪಾಲರು ಒತ್ತಾಯಿಸಿದ್ದಾರೆ ಎನ್ನಲಾಗಿದೆ. “ತಮಿಳುನಾಡು ವಿಧಾನಸಭೆಯಲ್ಲಿ ಸರ್ಕಾರ ರಚಿಸಲು ಅಗತ್ಯವಾದ ಬಹುಮತದ ಬೆಂಬಲವನ್ನು ಸ್ಥಾಪಿಸಲಾಗಿಲ್ಲ” ಎಂದು ರಾಜ್ಯಪಾಲರು ವಿವರಿಸಿದ್ದಾರೆ ಎಂದು ರಾಜಭವನ ಪ್ರಕಟಣೆ ತಿಳಿಸಿದೆ.
ಬಹುಮತಕ್ಕೆ ಟಿವಿಕೆಗೆ ಇನ್ನೂ 10 ಶಾಸಕರ ಬೆಂಬಲ ಅಗತ್ಯವಿದೆ. ಈಗಾಗಲೇ ಐದು ಶಾಸಕರನ್ನು ಹೊಂದಿರುವ ಕಾಂಗ್ರೆಸ್ ಬೆಂಬಲ ನೀಡಿರುವುದಾಗಿ ತಿಳಿದುಬಂದಿದೆ. ಎಡಪಂಥೀಯ ಪಕ್ಷಗಳು ಹಾಗೂ ಕೆಲವು ಸಣ್ಣ ಪಕ್ಷಗಳೊಂದಿಗೆ ಟಿವಿಕೆ ಮಾತುಕತೆ ನಡೆಸುತ್ತಿದೆ. ಈ ವಿಚಾರವನ್ನು ನ್ಯಾಯಾಲಯಕ್ಕೆ ಕೊಂಡೊಯ್ಯುವ ಸಾಧ್ಯತೆಯೂ ಇದೆ ಎಂದು ಮೂಲಗಳು ಹೇಳಿವೆ.
ಸ್ಟಾಲಿನ್‌ಗೆ ‘ತುರ್ತು ನಿರ್ಧಾರ’ ಕೈಗೊಳ್ಳುವ ಅಧಿಕಾರ
ಡಿಎಂಕೆ ನಡೆಸಿದ ಸಭೆಯಲ್ಲಿ ನಾಲ್ಕು ನಿರ್ಣಯಗಳನ್ನು ಅಂಗೀಕರಿಸಲಾಗಿದ್ದು, ಪಕ್ಷದ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಅವರಿಗೆ “ತುರ್ತು ನಿರ್ಧಾರಗಳನ್ನು” ಕೈಗೊಳ್ಳುವ ಅಧಿಕಾರ ನೀಡಲಾಗಿದೆ. “ಮತ್ತೊಂದು ಚುನಾವಣೆಯನ್ನು ತಪ್ಪಿಸುವುದು, ಸ್ಥಿರ ಸರ್ಕಾರ ಒದಗಿಸುವುದು ಹಾಗೂ ಕೋಮು ಶಕ್ತಿಗಳಿಗೆ ಅವಕಾಶ ನೀಡದಿರುವುದು ನಮ್ಮ ಮೊದಲ ಆದ್ಯತೆ” ಎಂದು ಡಿಎಂಕೆ ಹೇಳಿದೆ.
ಬಹುಮತದ ಕೊರತೆಯನ್ನು ಜಟಿಲ ಬಿಕ್ಕಟ್ಟು ಎಂದು ಹೇಳಿರುವ ಡಿಎಂಕೆ, ತನ್ನ ಎಲ್ಲ ಶಾಸಕರಿಗೂ ಮೇ 10ರವರೆಗೆ ಚೆನ್ನೈನಲ್ಲೇ ಉಳಿಯುವಂತೆ ಸೂಚಿಸಿದೆ.
ಇದರ ಮಧ್ಯೆ, ಡಿಎಂಕೆಯ ಬಾಹ್ಯ ಬೆಂಬಲದೊಂದಿಗೆ ಎಐಎಡಿಎಂಕೆ ನಾಯಕ ಇ. ಪಳನಿಸ್ವಾಮಿ ಮುಖ್ಯಮಂತ್ರಿ ಆಗುವ ಪರ್ಯಾಯ ರಾಜಕೀಯ ಸಮೀಕರಣದ ಕುರಿತು ಚರ್ಚೆ ನಡೆಯುತ್ತಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ. ಡಿಎಂಕೆಯೊಳಗಿನ ಒಂದು ವಲಯ, ವಿಶೇಷವಾಗಿ ಉದಯನಿಧಿ ಸ್ಟಾಲಿನ್ ಬೆಂಬಲಿಗರು, ವಿಜಯ್ ಅಧಿಕಾರಕ್ಕೇರಿದರೆ ಎಂಜಿ ರಾಮಚಂದ್ರನ್ ಮಾದರಿಯಲ್ಲಿ ದೀರ್ಘಕಾಲ ಪ್ರಭಾವ ಸಾಧಿಸಬಹುದು ಮತ್ತು ನಂತರ ಅವರನ್ನು ರಾಜಕೀಯವಾಗಿ ಎದುರಿಸುವುದು ಕಷ್ಟವಾಗಬಹುದು ಎಂಬ ಆತಂಕ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಆದರೆ ಎಂ.ಕೆ. ಸ್ಟಾಲಿನ್ ಸೇರಿದಂತೆ ಹಿರಿಯ ನಾಯಕರು ಈ ರೀತಿಯ ಪ್ರಯೋಗದ ಬಗ್ಗೆ ಇನ್ನೂ ಎಚ್ಚರಿಕೆಯಿಂದಿದ್ದಾರೆ. ದಶಕಗಳ ಕಾಲ ಪರಸ್ಪರ ಎದುರಾಳಿಗಳಾಗಿದ್ದ ಎರಡು ದ್ರಾವಿಡ ಪಕ್ಷಗಳು ಒಂದಾಗುವ ನಿರ್ಧಾರಕ್ಕೆ ಸಾರ್ವಜನಿಕರಿಂದ ತೀವ್ರ ಪ್ರತಿಕ್ರಿಯೆ ಬರಬಹುದೆಂಬ ಆತಂಕವೂ ಪಕ್ಷದೊಳಗೆ ಇದೆ.
ಎಐಎಡಿಎಂಕೆ ‘ಕಾಯುವ-ವೀಕ್ಷಿಸುವ’ ತಂತ್ರ
ಎಐಎಡಿಎಂಕೆಯೂ ಇದೇ ರೀತಿಯ ನಿಲುವು ತಾಳಿದ್ದು, ಶಾಸಕರಿಗೆ ಶಾಂತವಾಗಿದ್ದು ಪರಿಸ್ಥಿತಿಯನ್ನು ಗಮನಿಸುವಂತೆ ಸೂಚಿಸಿದೆ. ಪಕ್ಷದೊಳಗಿನ ಕೆಲವರು ಟಿವಿಕೆ ಜೊತೆ ಮೈತ್ರಿಗೆ ಒಲವು ತೋರಿದರೂ, ಹಿರಿಯ ನಾಯಕರು ಅದನ್ನು ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ.
ಇ. ಪಳನಿಸ್ವಾಮಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ 45ಕ್ಕೂ ಹೆಚ್ಚು ಶಾಸಕರು ಭಾಗವಹಿಸಿದ್ದರು. ಟಿವಿಕೆ ಮತ್ತು ಎಐಎಡಿಎಂಕೆ ನಡುವೆ ಯಾವುದೇ ಸಂಪರ್ಕ ಇಲ್ಲ, ಈ ಹಂತದಲ್ಲಿ ಮೈತ್ರಿಯ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಪಳನಿಸ್ವಾಮಿ ಸ್ಪಷ್ಟಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
- ರಾಜ್ಯಪಾಲರ ನಿಲುವಿಗೆ ವಿರೋಧ
ರಾಜ್ಯಪಾಲರ ನಿಲುವಿಗೆ ಟಿವಿಕೆಯ ಸಂಭಾವ್ಯ ಮಿತ್ರಪಕ್ಷಗಳೂ ಆಕ್ಷೇಪ ವ್ಯಕ್ತಪಡಿಸಿವೆ.
ಭಾರತೀಯ ಕಮ್ಯೂನಿಸ್ಟ್ ಪಕ್ಷದ ತಮಿಳುನಾಡು ಘಟಕ, “ಏಕೈಕ ಅತಿದೊಡ್ಡ ಪಕ್ಷವಾಗಿರುವ ಟಿವಿಕೆಗೆ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು ಅವಕಾಶ ನೀಡಬೇಕು. ಪ್ರಮಾಣವಚನಕ್ಕೂ ಮೊದಲು 118 ಶಾಸಕರ ಬೆಂಬಲ ಕೇಳುವುದು ಸಂವಿಧಾನಾತ್ಮಕವಾಗಿ ಸೂಕ್ತವಲ್ಲ” ಎಂದು ಹೇಳಿದೆ.
ಎಸ್‌ಆರ್ ಬೊಮ್ಮಾಯಿ ಪ್ರಕರಣ ಸೇರಿದಂತೆ ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಉಲ್ಲೇಖಿಸಿದ ಸಿಪಿಐ, ರಾಜ್ಯಪಾಲರು ಸಂವಿಧಾನದ ಪ್ರಕಾರ ನಡೆದುಕೊಳ್ಳಬೇಕು ಎಂದು ಒತ್ತಾಯಿಸಿದೆ.
ವಿದುತಲೈ ಚಿರುತೈಗಲ್ ಕಚ್ಚಿ (ವಿಸಿಕೆ) ನಾಯಕ ಥೋಲ್ ತಿರುಮಾವಲವನ್ ಕೂಡ ವಿಜಯ್ ಪರ ನಿಂತಿದ್ದು, “ಏಕೈಕ ಅತಿದೊಡ್ಡ ಪಕ್ಷವಾಗಿರುವ ಟಿವಿಕೆಗೆ ಸರ್ಕಾರ ರಚಿಸಲು ಅವಕಾಶ ನೀಡಿ, ಬಳಿಕ ಸದನದಲ್ಲಿ ಬಹುಮತ ಸಾಬೀತುಪಡಿಸಲು ಅವಕಾಶ ಕೊಡಬೇಕು” ಎಂದು ಹೇಳಿದ್ದಾರೆ.
“ನಿಮಗೆ ಯಾರು ಬೆಂಬಲ ನೀಡಿದ್ದಾರೆ? 118 ಸಂಖ್ಯೆಯನ್ನು ತಂದು ತೋರಿಸಿ, ನಂತರ ಪ್ರಮಾಣವಚನ ಸ್ವೀಕರಿಸಿ’ ಎಂದು ರಾಜ್ಯಪಾಲರು ಹೇಳಲು ಸಾಧ್ಯವಿಲ್ಲ” ಎಂದು ಅವರು ಟೀಕಿಸಿದ್ದಾರೆ.
ರಾಜ್ಯಪಾಲರ ನಿರ್ಧಾರವನ್ನು ಡಿಎಂಕೆಯೂ “ಸ್ವೀಕಾರಾರ್ಹವಲ್ಲ” ಹಾಗೂ “ಜನಾದೇಶಕ್ಕೆ ಅಗೌರವ” ಎಂದು ಕರೆದಿದೆ. ನಟ ಹಾಗೂ ರಾಜಕೀಯ ನಾಯಕ ಕಮಲ್ ಹಾಸನ್ ಕೂಡ ವಿಜಯ್ ಪರವಾಗಿ ಮಾತನಾಡಿದ್ದಾರೆ.