Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಎಂಆರ್‌ಪಿಗಿಂತ ಹೆಚ್ಚು ದರಕ್ಕೆ ಚಹಾ ಪುಡಿ ಮಾರಾಟ: ಫ್ಲಿಪ್‌ಕಾರ್ಟ್‌ಗೆ ₹25,000 ದಂಡ

Spread the love

ಶಿವಮೊಗ್ಗ: ಗ್ರಾಹಕನಿಂದ ಎಂಆರ್‌ಪಿ ದರಕ್ಕಿಂತ ₹ 24 ಹೆಚ್ಚು ಪಡೆದು ಒಂದು ಕೆ.ಜಿ ಚಹಾ ಪುಡಿ ಪೂರೈಸಿದ್ದ ಸಂಸ್ಥೆಗೆ ₹ 25,000 ದಂಡ ವಿಧಿಸಿ ಇಲ್ಲಿನ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.

‘ನಾವು 2024ರ ಜುಲೈ 4ರಂದು ಆನ್‌ಲೈನ್‌ನಲ್ಲಿ ಒಂದು ಕೆ.ಜಿ ತಾಜ್‌ಮಹಲ್ ಬ್ರಾಂಡ್‌ನ ಚಹಾಪುಡಿ ತರಿಸಿದ್ದು, ಸಾಗಣೆ ವೆಚ್ಚ ₹ 41 ಹಾಗೂ ಚಹಾಪುಡಿಗೆ ₹ 849 ಸೇರಿ ₹890 ಪಾವತಿಸಿದ್ದೇನೆ.

ಆದರೆ ಚಹಾಪುಡಿ ಪೊಟ್ಟಣದ ಮೇಲೆ ಗರಿಷ್ಠ ಮಾರಾಟ ದರ (ಎಂಆರ್‌ಪಿ) ₹ 825 ಎಂದು ನಮೂದಿಸಿದ್ದು, ಹೆಚ್ಚುವರಿಯಾಗಿ ₹24 ಪಡೆಯಲಾಗಿದೆ’ ಎಂದು ಆರೋಪಿಸಿ, ಶಿವಮೊಗ್ಗದ ನಿವಾಸಿ ಮೆಹಬೂಬ್ ಮುದಸ್ಸಿರ್ ಖಾನ್‌ ಬೆಂಗಳೂರಿನ ಫ್ಲಿಪ್‌ಕಾರ್ಟ್ ಇಂಟರ್‌ನೆಟ್ ಪ್ರೈ.ಲಿ ಸಂಸ್ಥೆಯ ಸಿಇಒ, ಹಿರಿಯ ವ್ಯವಸ್ಥಾಪಕರು ಹಾಗೂ ದೆಹಲಿಯ ವಿಜಿ ಫುಡ್ ಮತ್ತು ಕೆಟರರ್ಸ್ ವಿರುದ್ಧ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿದ್ದರು.

‘ಹೆಚ್ಚಿನ ದರ ಪಡೆದಿರುವ ಬಗ್ಗೆ ಸಂಬಂಧಿಸಿದವರಿಗೆ ಇ- ಮೇಲ್ ಮೂಲಕ ತಿಳಿಸಿದ್ದು, ತಮ್ಮಿಂದ ಪಡೆದಿರುವ ಗರಿಷ್ಠ ಮಾರಾಟ ಬೆಲೆಗಿಂತ ಹೆಚ್ಚಿನ ಮೊತ್ತವನ್ನು ಹಿಂದಿರುಗಿಸಲು ತಿಳಿಸಿ ಪತ್ರ ಬರೆದಿದ್ದೇನೆ. ಆ ಪತ್ರಗಳು ಎದುರುದಾರರಿಗೆ ತಲುಪಿದ್ದರೂ ಯಾವುದೇ ಉತ್ತರ ನೀಡಿಲ್ಲ. ಸಮಸ್ಯೆ ಬಗೆಹರಿಸದೇ ಸೇವಾನ್ಯೂನ್ಯತೆ ಎಸಗಿದ್ದಾರೆ’ ಎಂದು ಮೆಹಬೂಬ್ ಮುದಸ್ಸಿರ್ ಖಾನ್ ದೂರಿನಲ್ಲಿ ಉಲ್ಲೇಖಿಸಿದ್ದರು.

‘ದೂರುದಾರರು ಖರೀದಿಸಿರುವ ಚಹಾ ಪುಡಿ ಪೊಟ್ಟಣವನ್ನು ನಾವು ಬರೀ ತಲುಪಿಸಿದ್ದೇವೆ. ಅದನ್ನು ಪೂರೈಸಿದ್ದು ಸಂಬಂಧಿಸಿದ ಆಹಾರೋತ್ಪನ್ನ ಸಂಸ್ಥೆಯವರು (ವಿಜಿ ಫುಡ್‌ ಅಂಡ್ ಕೆಟರರ್ಸ್). ಇದರಲ್ಲಿ ನಮ್ಮಿಂದ ಯಾವುದೇ ಸೇವಾ ನ್ಯೂನ್ಯತೆ ಆಗಿಲ್ಲ. ನಮ್ಮ ವಿರುದ್ಧದ ದೂರನ್ನು ವಜಾ ಮಾಡಿ’ ಎಂದು ಫ್ಲಿಪ್‌ಕಾರ್ಟ್ ಇಂಟರ್‌ನೆಟ್ ಪ್ರೈ.ಲಿ ಸಂಸ್ಥೆಯವರು ಆಯೋಗಕ್ಕೆ ಕೋರಿದ್ದರು.

ದೂರುದಾರರು ಮತ್ತು ಎದುರುದಾರರು ಸಲ್ಲಿಸಿದ ಪ್ರಮಾಣ ಪತ್ರ, ದಾಖಲಾತಿಗಳ ಪರಿಶೀಲಿಸಿ, ವಾದ-ವಿವಾದಗಳ ಆಲಿಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಗ್ರಾಹಕನ ವಾದವನ್ನು ಪುರಸ್ಕರಿಸಿದೆ.

ಸದರಿ ಚಹಾಪುಡಿ ಪೊಟ್ಟಣವನ್ನು ಪೂರೈಸಿದವರಿಗೆ ಗ್ರಾಹಕ ವಾಪಸ್ ಮರಳಿಸಬೇಕು. ಅದರ ಮೊತ್ತ ₹890ಕ್ಕೆ 2024ರ ಸೆ. 19ರಿಂದ ಆಯೋಗದ ಆದೇಶವಾದ 45 ದಿನಗಳ ಒಳಗಾಗಿ ವಾರ್ಷಿಕ ₹ 9 ಬಡ್ಡಿಯೊಂದಿಗೆ ಗ್ರಾಹಕನಿಗೆ ಸಂಬಂಧಿಸಿದ ಎದುರುದಾರರು ಹಣ ಹಿಂದಿರುಗಿಸಬೇಕು. ತಪ್ಪಿದಲ್ಲಿ ವಾರ್ಷಿಕ ಶೇ 12ರಂತೆ ಬಡ್ಡಿ ಸೇರಿಸಿ ಪೂರ್ತಿ ಹಣ ಪಾವತಿಸುವವರೆಗೆ ನೀಡಬೇಕು.

ಗ್ರಾಹಕನಿಗೆ ಆದ ಮಾನಸಿಕ ಹಿಂಸೆಗೆ ಮತ್ತು ದೂರಿನ ಖರ್ಚು ವೆಚ್ಚಗಳಿಗಾಗಿ ಆದೇಶವಾದ 45 ದಿನಗಳ ಒಳಗಾಗಿ ಎದುರುದಾರರು ₹25,000 ಪಾವತಿಸಬೇಕು. ತಪ್ಪಿದಲ್ಲಿ ಈ ಮೊತ್ತಕ್ಕೆ ವಾರ್ಷಿಕ ಶೇ 12ರಷ್ಟು ಬಡ್ಡಿ ಸೇರಿಸಿ ಪಾವತಿಸುವಂತೆ ಆಯೋಗದ ಅಧ್ಯಕ್ಷ ಟಿ.ಶಿವಣ್ಣ ಮತ್ತು ಸದಸ್ಯ ಬಿ.ಡಿ.ಯೋಗಾನಂದ ಭಾಂಡ್ಯ ಅವರನ್ನೊಳಗೊಂಡ ಪೀಠ ಆದೇಶಿಸಿದೆ.


Spread the love
Share:

administrator

Leave a Reply

Your email address will not be published. Required fields are marked *