ಬಿಹಾರ ಮಹಾಘಟಬಂಧನ್‌ನಲ್ಲಿ ಸೀಟು ಹಂಚಿಕೆ ಬಿಕ್ಕಟ್ಟು: ಕಾಂಗ್ರೆಸ್ ನಾಯಕರೊಂದಿಗೆ ಲಾಲು-ತೇಜಸ್ವಿ ಸುದೀರ್ಘ ಚರ್ಚೆ; ‘ಮುಂದಿನ 24 ಗಂಟೆಯಲ್ಲಿ ಎಲ್ಲವೂ ಸ್ಪಷ್ಟ’ ಎಂದ ತೇಜಸ್ವಿ

ಪಾಟ್ನಾ: ಬಿಹಾರ ಚುನಾವಣೆಗೆ (Bihar Elections 2025) ಇನ್ನೂ ಕೆಲವೇ ದಿನಗಳು ಬಾಕಿಯಿದೆ. ಈಗಾಗಲೇ ಎನ್‌ಡಿಎ ಒಕ್ಕೂಟ ಎಲ್ಲಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನ ಹಂಚಿಕೆ ಮಾಡಿದ್ದು, ಪ್ರಚಾರಕ್ಕೆ ತಯಾರಿ ನಡೆಸುತ್ತಿವೆ. ಆದ್ರೆ ಮಹಾಘಟಬಂಧನ್ (Mahagathbandhan) ಮೈತ್ರಿಕೂಟದಲ್ಲಿ ಸೀಟು ಹಂಚಿಕೆ ಬಿಕ್ಕಟ್ಟು ಇನ್ನೂ ಅಂತಿಮಗೊಂಡಿಲ್ಲ. ಈ ನಡುವೆಯೇ ಎಲ್ಲ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನ ಘೋಷಿಸಿದ್ದು ಸಾಕಷ್ಟು ಗೊಂದಲ ಏರ್ಪಟ್ಟಿದೆ. ಇದರ ಬೆನ್ನಲೆ ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ವೀಕ್ಷಕ ಅಶೋಕ್ ಗೆಹ್ಲೋಟ್ (Ashok Gehlot), ಬಿಹಾರ ಕಾಂಗ್ರೆಸ್ ಉಸ್ತುವಾರಿ ಕೃಷ್ಣ ಅಲ್ಲಾವರು ರಾಷ್ಟ್ರೀಯ ಜನತಾದಳದ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಮತ್ತು ತೇಜಸ್ವಿ ಯಾದವ್ ಅವರನ್ನ ಭೇಟಿಯಾಗಿ ಚರ್ಚಿಸಿದ್ದಾರೆ.

ಮೊದಲು ಇಬ್ಬರು ನಾಯಕರು ತೇಜಸ್ವಿ ಯಾದವ್ ಅವರನ್ನು ಭೇಟಿಯಾದರು, ಮೂವರು ನಾಯಕರು ಸುದೀರ್ಘ ಸಂಭಾಷಣೆ ನಡೆಸಿದರು. ತೇಜಸ್ವಿ ಇಬ್ಬರೂ ನಾಯಕರನ್ನ ಸುಮಾರು 54 ನಿಮಿಷಗಳ ಕಾಲ ಭೇಟಿಯಾದರು. ನಂತರ, ಅಶೋಕ್ ಗೆಹ್ಲೋಟ್, ಕೃಷ್ಣ ಅಲ್ಲಾವರು ಲಾಲು ಪ್ರಸಾದ್ ಅವರನ್ನು ರಾಬ್ರಿ ದೇವಿ ನಿವಾಸದಲ್ಲಿ ಭೇಟಿಯಾಗಿ 35 ನಿಮಿಷಗಳ ಚರ್ಚೆ ನಡೆಸಿದರು. ಈ ಸಭೆಯ ಬೆನ್ನಲ್ಲೇ ಮಹಾಮೈತ್ರಿಕೂಟದೊಳಗೆ ಎಲ್ಲವೂ ಸರಿಯಾಗಿದೆ. ಯಾವುದೇ ಸಮಸ್ಯೆಗಳಿಲ್ಲ. ಮುಂದಿನ 24 ಗಂಟೆಗಳಲ್ಲಿ ನಿಮಗೆ ಎಲ್ಲವೂ ಸ್ಪಷ್ಟವಾಗಿ ತಿಳಿಯುತ್ತದೆ ಎಂದು ತೇಜಸ್ವಿ ಯಾದವ್ (Tejashwi Yadav) ಹೇಳಿದ್ದಾರೆ.
ರಾಬ್ರಿ ದೇವಿ ಅವರ ನಿವಾಸದಿಂದ ಹೊರಬಂದ ನಂತರ ಮಾತನಾಡಿದ ಅಶೋಕ್ ಗೆಹ್ಲೋಟ್, ನಾವು ಲಾಲು ಪ್ರಸಾದ್ ಮತ್ತು ತೇಜಸ್ವಿ ಯಾದವ್ ಅವರೊಂದಿಗೆ ಉತ್ತಮ ಸಂಭಾಷಣೆ ನಡೆಸಿದ್ದೇವೆ. ನಾಳೆ ಪತ್ರಿಕಾಗೋಷ್ಠಿ ನಿಗದಿಪಡಿಸಲಾಗಿದೆ. ಅಲ್ಲಿ ಎಲ್ಲವೂ ಸ್ಪಷ್ಟವಾಗುತ್ತದೆ. ಮಹಾಮೈತ್ರಿಕೂಟವು ಒಗ್ಗಟ್ಟಿನಿಂದ ಚುನಾವಣೆಯಲ್ಲಿ ಹೋರಾಡುತ್ತಿದೆ. ಬಿಹಾರದಲ್ಲಿ 243 ಸ್ಥಾನಗಳಿವೆ ಮತ್ತು ಪರಸ್ಪರ ಒಪ್ಪಂದದ ಮೂಲಕ 5-10 ಸ್ಥಾನಗಳಲ್ಲಿ ಸ್ನೇಹಪರ ಹೋರಾಟ ನಡೆಸಬಹುದು. ನಾವು ಒಟ್ಟಾಗಿ ಪ್ರಚಾರ ಮಾಡಿ ಚುನಾವಣೆಯಲ್ಲಿ ಗೆಲ್ಲುತ್ತೇವೆ ಎಂದು ಹೇಳಿದ್ದಾರೆ.
ಕಾಂಗ್ರೇಸ್ ಉಸ್ತುವಾರಿ ಕೃಷ್ಣ ಅಲ್ಲಾವರು ಮಾತನಾಡಿ, ಬಿಹಾರ ಚುನಾವಣೆಗೆ ನಮ್ಮ ಭವಿಷ್ಯದ ಕಾರ್ಯತಂತ್ರಗಳ ಕುರಿತು ಚರ್ಚಿಸಿದ್ದೇವೆ ಮತ್ತು ಸರ್ಕಾರ ರಚಿಸಿದ ನಂತರ ರಾಜ್ಯದ ಜನರಿಗೆ ನಾವು ಹೇಗೆ ಕೆಲಸ ಮಾಡಬಹುದು ಎಂಬುದರ ಕುರಿತು ಮಾತನಾಡಿದ್ದೇವೆ ಎಂದು ಹೇಳಿದರು. ಕೆಲವು ಸ್ಥಾನಗಳ ಮೇಲಿನ ಸ್ನೇಹಪರ ಹೋರಾಟದ ಪ್ರಶ್ನೆಗೆ, ಎಲ್ಲಾ ರೀತಿಯ ಮಾಹಿತಿಯನ್ನು ನಾಳೆ ಅಂದ್ರೆ ಅಕ್ಟೋಬರ್ 23 ರಂದು ನೀಡಲಾಗುವುದು ಎಂದು ವಿವರಿಸಿದ್ದಾರೆ.
ಈ ನಡುವೆ ಸುಗೌಲಿ ಕ್ಷೇತ್ರದ ಬಳಿಕ ಇಂಡಿಯಾ ಮಹಾ ಮೈತ್ರಿಕೂಟವು ಮೊಹಾನಿಯಾ ವಿಧಾನಸಭಾ ಸ್ಥಾನವನ್ನು ಕಳೆದುಕೊಂಡಿದೆ. ರಾಷ್ಟ್ರೀಯ ಜನತಾ ದಳ ಮಹಾ ಮೈತ್ರಿಕೂಟದ ಭಾಗವಾಗಿ ಈ ಸ್ಥಾನಕ್ಕೆ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು. ತೇಜಸ್ವಿ ಯಾದವ್ ಈ ಸ್ಥಾನದಿಂದ ಶ್ವೇತಾ ಸುಮನ್ ಅವರಿಗೆ ಟಿಕೆಟ್ ನೀಡಿದ್ದರು, ಅವರು ತಮ್ಮ ನಾಮಪತ್ರ ಸಲ್ಲಿಸಿದರು, ಆದರೆ ಇಂದು ಅವರ ನಾಮಪತ್ರ ತಿರಸ್ಕೃತಗೊಂಡಿದೆ. ಶ್ವೇತಾ ಸುಮನ್ ಈಗ ತಮ್ಮ ನಾಮಪತ್ರ ತಿರಸ್ಕೃತವಾಗಿದೆ ಎಂದು ಆರೋಪಿಸಿದ್ದಾರೆ, ಜನ ಸೂರಜ್ ಪಕ್ಷದ ಅಭ್ಯರ್ಥಿ ಗೀತಾ ಪಾಸಿ ಅವರ ನಾಮಪತ್ರವನ್ನು ಅಂಗೀಕರಿಸಲಾಗಿದೆ.