ಉಕ್ರೇನ್ ಮೇಲೆ ರಷ್ಯಾ ಕ್ಷಿಪಣಿ ಮಳೆ: 5 ಮಂದಿ ಸಾ*ವು, 25ಕ್ಕೂ ಹೆಚ್ಚು ಜನರಿಗೆ ಗಾಯ

ಕೀವ್: ಮಂಗಳವಾರ ಉಕ್ರೇನ್‌ನಾದ್ಯಂತ ರಶ್ಯ ನಡೆಸಿದ ಡೋನ್ ಮತ್ತು ಕ್ಷಿಪಣಿ ದಾಳಿಯಲ್ಲಿ 5 ಮಂದಿ ಸಾವನ್ನಪ್ಪಿದ್ದು 25ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ರಶ್ಯವು ಸೋಮವಾರ ತಡರಾತ್ರಿಯಿಂದ ಮಂಗಳವಾರ ಬೆಳಗ್ಗಿನವರೆಗೆ 390 ಡೋನ್‌ಗಳನ್ನು ಹಾಗೂ ಬ್ಯಾಲಿಸ್ಟಿಕ್, ಕ್ರೂಸ್ ಇತ್ಯಾದಿ 34 ಕ್ಷಿಪಣಿಗಳನ್ನು ಪ್ರಯೋಗಿಸಿದೆ. ಇದರಲ್ಲಿ 365 ಡೋನ್‌ಗಳು ಹಾಗೂ 25 ಕ್ಷಿಪಣಿಗಳನ್ನು ತುಂಡರಿಸಲಾಗಿದೆ ಎಂದು ಉಕ್ರೇನ್‌ನ ವಾಯುಪಡೆ ಹೇಳಿದೆ.
ದಕ್ಷಿಣದ ಝಪೋರಿಝಿಯಾ ನಗರದಲ್ಲಿ ಹೆಚ್ಚಿನ ನಾಶ-ನಷ್ಟ ಸಂಭವಿಸಿದೆ. ಹಲವು ಬಹುಮಹಡಿ ಕಟ್ಟಡಗಳಿಗೆ ತೀವ್ರ ಹಾನಿಯಾಗಿದ್ದು ಬೆಂಕಿಯನ್ನು ನಿಯಂತ್ರಿಸುವ ಕಾರ್ಯಾಚರಣೆ ಮುಂದುವರಿದಿರುವುದಾಗಿ ಎಎಫ್‌ಪಿ ಸುದ್ದಿಸಂಸ್ಥೆ ವರದಿ ಮಾಡಿದೆ. ಈ ಮಧ್ಯೆ, ಉಕ್ರೇನ್‌ನ ಈಶಾನ್ಯ ಖಾರ್ಕಿವ್ ಪ್ರದೇಶದಲ್ಲಿ ಆಯಕಟ್ಟಿನ ಗ್ರಾಮವನ್ನು ವಶಪಡಿಸಿಕೊಂಡಿರುವುದಾಗಿ ರಶ್ಯದ ಸೇನೆ ಮಂಗಳವಾರ ಹೇಳಿದೆ.
