ಚೀನಾದಲ್ಲಿ ಕ್ಸಿ ಜಿನ್‌ಪಿಂಗ್ ಅಧಿಕಾರ ಪತನದ ವದಂತಿ: ರಾಜಕೀಯ ಅಸ್ಥಿರತೆ ಶುರುವಾಯಿತೇ?

ಜಗತ್ತಿನಲ್ಲಿ ಅಮೆರಿಕಕ್ಕೆ ಪ್ರತಿಯಾಗಿ ಮತ್ತೊಂದು ಜಾಗತಿಕ ಶಕ್ತಿಯಾಗಿ ಬೆಳೆಯುವ ಘೋಷಣೆಗಳನ್ನು ಮಾಡಿದ್ದ ಚೀನದಲ್ಲಿ ಈಗ ರಾಜಕೀಯ ಅಸ್ಥಿರತೆ ಶುರುವಾದಂತಿದೆ. 13 ವರ್ಷಗಳಿಂದ ಏಕಚಕ್ರಾಧಿಪತ್ಯ ನಡೆಸಿದ್ದ ಚೀನದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅಧಿಕಾರದಿಂದ ಕೆಳಗಿಳಿಯಲಿದ್ದಾರೆ ಎಂಬ ವರದಿಗಳು ಪ್ರಕಟವಾಗುತ್ತಿವೆ.

ಇದಕ್ಕೆ ಪುಷ್ಟಿ ನೀಡುವಂತೆ ಕಳೆದ ಸುಮಾರು 15 ದಿನಗಳಿಂದ ಜಿನ್‌ಪಿಂಗ್ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಜಿನ್ ಪಿಂಗ್ ಅಧಿಕಾರ ಕಳೆದುಕೊಂಡರೆ ಚೀನದ ರಾಜಕೀಯ, ವಿದೇಶಾಂಗ ನೀತಿ ಏನಾಗಬಹುದು ಎಂಬೆಲ್ಲದರ ಕುರಿತು ಒಂದಷ್ಟು ಮಾಹಿತಿ ಇಲ್ಲಿದೆ.
ಚೀನ ಏಕಪಕ್ಷೀಯ ಸರಕಾರದ ದೇಶ
ಚೀನವೊಂದು ಕಮ್ಯುನಿಸ್ಟ್ ರಾಷ್ಟ್ರವಾಗಿದ್ದು, ಇಲ್ಲಿ ಕೇವಲ ಒಂದು ಪಕ್ಷ ಮಾತ್ರ ಅಸ್ತಿತ್ವದಲ್ಲಿರುತ್ತದೆ. ಇಡೀ ದೇಶದ ಎಲ್ಲ ಚಟುವಟಿಕೆಗಳನ್ನು ಇದೊಂದೇ ಪಕ್ಷ ನಿರ್ಧರಿಸುತ್ತದೆ. ಹೀಗಾಗಿ ಇಲ್ಲಿ ಸರಕಾರದ ನೀತಿಗಳು ತಪ್ಪಾದಾಗ ಅದನ್ನು ಪ್ರಶ್ನೆ ಮಾಡಲು ಯಾರಿಗೂ ಅವಕಾಶವಿರುವುದಿಲ್ಲ. 1921ರಲ್ಲಿ ಸ್ಥಾಪನೆಯಾದ ಚೀನ ಕಮ್ಯನಿಸ್ಟ್ ಪಕ್ಷ ಪ್ರಸ್ತುತ ಚೀನದಲ್ಲಿ ಆಡಳಿತ ನಡೆಸುತ್ತಿದೆ. 1927-49ರವರೆಗೆ ನಡೆದ ನಾಗರಿಕ ಯುದ್ಧದಲ್ಲಿ ಗೆದ್ದ ಈ ಪಕ್ಷ 1949ರಲ್ಲಿ ಚೀನವೊಂದು ಕಮ್ಯುನಿಸ್ಟ್ ರಾಷ್ಟ್ರ ಎಂದು ಘೋಷಣೆ ಮಾಡಿತು. ಮಾ ಜೆಡಾಂಗ್ ಚೀನದ ಅಧ್ಯಕ್ಷರಾದರು. ಮಾರ್ಕಿಸ್ಟ್ ಲೆನಿನ್ ನೀತಿಗಳನ್ನು ಅನುಸರಿಸುವ ಘೋಷಣೆಗಳನ್ನು ಮಾಡಿದರು. ಈ ಯುದ್ಧದಲ್ಲಿ ಸೋತ ರಾಷ್ಟ್ರೀಯವಾದಿಗಳು ತೈವಾನ್‌ಗೆ ಪರಾರಿಯಾಗಿ ಅಲ್ಲಿ ತಮ್ಮದೇ ಸರಕಾರವನ್ನು ರಚನೆ ಮಾಡಿಕೊಂಡರು.
ಪ್ರತಿಯೊಂದರ ಮೇಲೂ ಹದ್ದಿನ ಕಣ್ಣು
ಚೀನದಲ್ಲಿ ಅಧಿಕಾರದಲ್ಲಿರುವ ಕಮ್ಯುನಿಸ್ಟ್ ಪಾರ್ಟಿ ಆಫ್ ಚೀನ (ಸಿಪಿಸಿ)ವು ಸರಕಾರ, ಮಿಲಿಟರಿ, ಮಾಧ್ಯಮ ಸೇರಿದಂತೆ ಪ್ರತಿಯೊಂದರ ಮೇಲೂ ನಿಯಂತ್ರಣ ಹೊಂದಿದೆ. ಅಧ್ಯಕ್ಷರಿಗೆ ಸಂಪೂರ್ಣ ಅಧಿಕಾರವಿದ್ದರೆ ಆಡಳಿತದಲ್ಲಿ ನೆರವಾ ಗಲು ಪ್ರಧಾನಿಯನ್ನು ನೇಮಕ ಮಾಡಲಾಗಿರುತ್ತದೆ. ಇದಲ್ಲದೇ ಒಂದು ಸಂಸದೀಯ ಸಮಿತಿ ಸಹ ಇದ್ದು, ಸರಕಾರದ ಪ್ರಮುಖ ನಿರ್ಧಾರಗಳಲ್ಲಿ ಇದರ ಪಾತ್ರ ಪ್ರಮುಖವಾದುದಾಗಿದೆ. ದೇಶಕ್ಕೆ ಬೇಕಾದ ಎಲ್ಲ ನಿರ್ಧಾರಗಳನ್ನು ಸಿಪಿಸಿ ತೆಗೆದುಕೊಳ್ಳುತ್ತದೆ. ಚೀನದ ಮಿಲಿಟರಿ ಸಹ ಈ ಪಕ್ಷದ ಅಡಿಯಲ್ಲೇ ಕೆಲಸ ಮಾಡುತ್ತದೆ. ಜಿನ್‌ಪಿಂಗ್ ಪಕ್ಷದ ಮೇಲೆ ನಿಯಂತ್ರಣ ಹೊಂದಿದ್ದು, ಎಲ್ಲ ನಿರ್ಧಾರಗಳನ್ನು ಅವರೇ ತೆಗೆದುಕೊಳ್ಳುತ್ತಿದ್ದರು ಎನ್ನಲಾಗಿದೆ.
ಜಿನ್‌ಪಿಂಗ್ ಚಕ್ರಾಧಿಪತ್ಯ ಕುಸಿತ ಆರಂಭ?
13 ವರ್ಷಗಳಿಂದ ಚೀನದಲ್ಲಿ ಚಕ್ರವರ್ತಿಯಾಗಿ ಮೆರೆದ ಜಿನ್‌ಪಿಂಗ್ ಅಧಿಕಾರದ ಅಂತ್ಯಕಾಲ ಸನ್ನಿಹಿತವಾಗುತ್ತಿದೆ ಎಂಬುದಕ್ಕೆ ಹಲವು ನಿದರ್ಶನಗಳು ಪುಷ್ಟಿ ನೀಡಿವೆ. ಇತ್ತೀಚಿನ ಕೆಲವು ತಿಂಗಳಲ್ಲಿ ಜಿನ್‌ಪಿಂಗ್ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಮೇ ಮತ್ತು ಜೂನ್ ತಿಂಗಳಲ್ಲಿ ನಡೆದ ಕಾರ್ಯಕ್ರಮಗಳಲ್ಲಿ ವರ್ಚುವಲ್ ಆಗಿ ಭಾಗಿಯಾಗಿದ್ದರು ಎಂದು ಚೀನದ ಮಾಧ್ಯಮಗಳು ವರದಿ ಮಾಡಿವೆ. ಇದಕ್ಕೆ ಆರೋಗ್ಯ ಸ್ಥಿತಿ ಕಾರಣ ಎಂದು ವರದಿಗಳು ತಿಳಿಸಿದರೂ, ಪಕ್ಷದಿಂದ ಜಿನ್‌ಪಿಂಗ್ ಮೇಲೆ ಒತ್ತಡ ಹೆಚ್ಚಾಗಿದೆ ಎಂಬ ಮಾತುಗಳೂ ಕೇಳಿಬಂದಿವೆ. ಅಲ್ಲದೇ ಬ್ರಿಕ್ಸ್ ಶೃಂಗಸಭೆಯಲ್ಲೂ ಕ್ಸಿ ಕಾಣಿಸಿಕೊಳ್ಳದಿರುವುದು ಈ ಊಹಾಪೋಹಗಳಿಗೆ ಮತ್ತಷ್ಟು ಪುಷ್ಟಿ ನೀಡಿದೆ.
