ಹೈಕಮಾಂಡ್ ಹೇಳಿದರೆ ಸಚಿವ ಸ್ಥಾನ ಬಿಡಲು ರೆಡಿ: ಮೂರು ಬಾರಿ ಸಚಿವ ಸ್ಥಾನ ಕೊಟ್ಟಿದ್ದಕ್ಕೆ ಕೃಷ್ಣ ಬೈರೇಗೌಡ ಸಂತೃಪ್ತಿ

ಬೆಂಗಳೂರು: ಪಕ್ಷ ನನಗೆ ಮೂರು ಬಾರಿ ಸಚಿವ ಸ್ಥಾನ ನೀಡಿದೆ. ಹೈಕಮಾಂಡ್ ಹೇಳಿದರೆ ನಾನು ಸಚಿವ ಸ್ಥಾನ ಬಿಡಲು ರೆಡಿ ಎಂದು ಸಚಿವ ಕೃಷ್ಣ ಬೈರೇಗೌಡ (Krishna Byre Gowda) ಹೇಳಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಕ್ಷ ನನಗೆ ಎಲ್ಲವನ್ನೂ ನೀಡಿದೆ. ಅರ್ಹತೆಗೂ ಮೀರಿ ಅವಕಾಶ ಸಿಕ್ಕಿದೆ. ಪಕ್ಷ ನನ್ನನ್ನ ಗುರುತಿಸಿ ಸಾಕಷ್ಟು ಅವಕಾಶ ನೀಡಿದೆ. ಕ್ಷೇತ್ರ ಪುನರ್ವಿಂಗಡಣೆ ನಂತರ ಹೊಸ ಕ್ಷೇತ್ರದ ಅವಕಾಶ ನೀಡುವುದರಿಂದ ಇಲ್ಲಿಯವರೆಗೂ ಅವಕಾಶ ನೀಡಿದೆ. ಸಚಿವ ಸ್ಥಾನದಿಂದ ಕ್ಷೇತ್ರದಲ್ಲಿ ಕೆಲಸ ಮಾಡಲು ಆಗುತ್ತಿಲ್ಲ. ಅವಕಾಶದ ವಿಷಯದಲ್ಲಿ ನನಗೆ ಹೊಟ್ಟೆ ತುಂಬಿದೆ, ಆದ್ರೆ ಕೆಲಸದಲ್ಲಿ ಅಲ್ಲ. ಇನ್ನೂ ಮಾಡುವ ಕೆಲಸ ಬಾಕಿ ಇದೆ, ಅವಕಾಶದ ವಿಚಾರದಲ್ಲಿ ನಾನು ಸಂತೃಪ್ತನಾಗಿದ್ದೇನೆ ಎಂದರು
ರಾಜ್ಯ ಕಾಂಗ್ರೆಸ್ (Congress) ಸರ್ಕಾರ ಎರಡೂವರೆ ವರ್ಷ ಪೂರೈಸಿದ ಬೆನ್ನಲ್ಲೆ ಸಚಿವ ಸಂಪುಟ ಪುನಾರಚನೆ ವಿಚಾರವಾಗಿ ಮಾತನಾಡಿದ ಅವರು, ಸರ್ಕಾರ ರಚನೆಯ ಸಂದರ್ಭದಲ್ಲೇ ಬೇರೆಯವರಿಗೂ ಅವಕಾಶ ನೀಡುವ ಬಗ್ಗೆ ಚರ್ಚೆಯಾಗಿತ್ತು. ಸಚಿವ ಸ್ಥಾನ ಸ್ವೀಕರಿಸುವುದಕ್ಕೂ ಮೊದಲೇ ಗಮನಕ್ಕೆ ತಂದು ಸಂಪುಟ ರಚಿಸಲಾಗಿತ್ತು. ಈ ಸರ್ಕಾರ ಬಂದಾಗಲೇ ಈ ನಿರ್ಧಾರ ಆಗಿತ್ತು. ಹೊರಗಡೆ ಇದ್ದವರಿಗೆ ಅವಕಾಶ ಕೊಡಬೇಕು ಎಂಬ ನಿರ್ಧಾರ ಆಗಿತ್ತು. ಸಂಪುಟಕ್ಕೆ ಅರ್ಹತೆ ಇರುವವರಿಗೆ ಅವಕಾಶ ಸಿಗಬೇಕು. ಆದರೆ, ನಾಯಕತ್ವ ಬದಲಾವಣೆ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಸಚಿವ ಸಂಪುಟ ಪುನರ್ ರಚನೆಗೂ ನಾಯಕತ್ವ ಬದಲಾವಣೆಗೂ ಸಂಬಂಧವಿಲ್ಲ ಎಂದು ಹೇಳಿದರು.
ಬಿಜೆಪಿಯವರಿಗೆ (BJP) ದ್ರಾಕ್ಷಿ ಗೊಂಚಲು ಹುಳಿ ಅನ್ನುವ ರೀತಿ ಆಗಿದೆ. ರಾಜಕೀಯ ಮಾತನಾಡಿ ಬೇಳೆ ಬೇಯಿಸಿಕೊಳ್ಳುತ್ತಾರೆ. ಬಿಜೆಪಿಯವರಿಗೆ ಅಧಿಕಾರ ಇಲ್ಲ, ನೀರಿನಿಂದ ಹೊರಬಿದ್ದ ಮೀನಿನಂತೆ ಒದ್ದಾಡುತ್ತಿದ್ದಾರೆ. ಅವರು ಇರೋದೆ ಸರ್ಕಾರದ ವಿರುದ್ಧ ಮಾತನಾಡಲು. ಬಿಜೆಪಿಗರಿಗೆ ಅಧಿಕಾರದ ಹಪಾಹಪಿ ಇದೆ. ಅಧಿಕಾರ ಬಿಟ್ರೆ ಬೇರೆ ಏನು ಜ್ಞಾನ ಇಲ್ಲ, ಅಧಿಕಾರ ಇಲ್ಲದೆ ಚಡಿಪಡಿಸುತ್ತಿದ್ದಾರೆ. ನಾವು ಜವಾಬ್ದಾರಿ ಸ್ಥಾನದಲ್ಲಿದ್ದೇವೆ, ಕೆಲಸ ಮಾಡುತ್ತಿದ್ದೇವೆ ಎಂದು ವಾಗ್ದಾಳಿ ನಡೆಸಿದರು
ಕಾಂಗ್ರೆಸ್‌ನ ಒಬ್ಬೊಬ್ಬ ನಾಯಕರು ಒಂದೊಂದು ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಇದು ಪ್ರಜಾಪ್ರಭುತ್ವ, ಯಾರು ಯಾವ ಅಭಿಪ್ರಾಯವನ್ನ ಬೇಕಾದರೂ ವ್ಯಕ್ತಪಡಿಸಬಹುದು. ಒಬ್ಬೊಬ್ಬರದು ಒಂದೊಂದು ಅಭಿಪ್ರಾಯ ಇರುತ್ತದೆ. ಐದು ಬೆರಳು ಸಮನಾಗಿರಲ್ಲ. ಹೈಕಮಾಂಡ್ ಎಲ್ಲವನ್ನೂ ಗಮನಿಸುತ್ತೆ, ಅವರೇ ಎಲ್ಲವನ್ನೂ ತೀರ್ಮಾನ ಮಾಡುತ್ತಾರೆ ಎಂದರು.
ಯತೀಂದ್ರ ಹೇಳಿಕೆ ವಿಚಾರವಾಗಿ ಮಾತನಾಡಿ, ಇಂತಹ ವಿಷಯಗಳ ಬಗ್ಗೆ ನಾನು ಮಾತನಾಡಲ್ಲ. ಸಿಎಂ ಜವಾಬ್ದಾರಿ ಹಾಗೂ ಕೆಲಸ ಕೊಟ್ಟಿದ್ದಾರೆ. ರಾಜಕೀಯ ಅಭಿಪ್ರಾಯ ಮಾತನಾಡಲು ಪಕ್ಷದ ಚೌಕಟ್ಟು ಇದೆ. ಹೈಕಮಾಂಡ್ ಇದೆ, ಅಲ್ಲಿ ಏನು ಹೇಳಬೇಕು ಹೇಳುತ್ತೇನೆ. ಹೈಕಮಾಂಡ್ ಕಾಲಕಾಲಕ್ಕೆ ತೀರ್ಮಾನ ಮಾಡುತ್ತಾರೆ ಎಂದು ಹೇಳಿದರು.
ನಾವು ವೋಟ್ ಚೋರಿ ಅಭಿಯಾನ ಮಾಡುತ್ತಿದ್ದೇವೆ. ಪ್ರಜಾಪ್ರಭುತ್ವದ ಜೀವಾಳವೇ ಚುನಾವಣೆ. ಇದನ್ನ ಹಾಳು ಮಾಡುವ ಪ್ರಯತ್ನ ನಡೆದಿದೆ. ಇಡಿ, ಐಟಿ, ಸಿಬಿಐ ಸಂಸ್ಥೆಗಳು ರಾಜಕೀಯವಾಗಿ ಬಳಕೆಯಾಗುತ್ತಿವೆ. ಈ ಬಗ್ಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸೀಳು ನಾಯಿಗಳ ರೀತಿಯಲ್ಲಿ ಸಂವಿಧಾನದ ಸಂಸ್ಥೆಗಳ ಬಳಕೆಯಾಗಿದೆ. ಚುನಾವಣಾ ಆಯೋಗವೇ ಪಕ್ಷಪಾತವಾಗಿ ಚುನಾವಣೆ ಮಾಡಿದೆ. ಕಳೆದ ಚುನಾವಣೆಯಲ್ಲಿ ಮತಪಟ್ಟಿಯಲ್ಲಿ ವ್ಯತ್ಯಾಸ ಆಗಿದೆ. ನಮ್ಮ ರಾಜ್ಯದ ಎರಡು ಕ್ಷೇತ್ರಗಳಲ್ಲಿ ಬೆಳಕಿಗೆ ಬಂದಿದೆ. ಮಹದೇವಪುರ, ಆಳಂದದಲ್ಲಿ ಮತಗಳವು ಆಗಿದೆ, ಇದು ಕೂಡಲೇ ನಿಲ್ಲಬೇಕು. ಚುನಾವಣಾ ಆಯೋಗ ಸರಿಯಾಗಿ ಕೆಲಸ ಮಾಡಬೇಕು. ಈ ಬಗ್ಗೆ ನಾವು ದೇಶಾದ್ಯಂತ ಸಹಿ ಸಂಗ್ರಹ ಅಭಿಯಾನ ಮಾಡುತ್ತಿದ್ದೇವೆ. ಪ್ರಜಾಪ್ರಭುತ್ವ ಉಳಿಸಬೇಕು ಅಂದ್ರೆ ಚುನಾವಣೆ ಪಾವಿತ್ರ‍್ಯತೆ ಕಾಪಾಡಬೇಕು ಎಂದು ತಿಳಿಸಿದರು.