Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ರಾಜ್ಯದಲ್ಲಿ ವರುಣನ ಅಬ್ಬರ: ಬೀದರ್‌ನಲ್ಲಿ ಮೇಲ್ಛಾವಣಿ ಕುಸಿದು ಮಗು ಸಾ*ವು; ಬೆಂಗಳೂರು ಏರ್‌ಪೋರ್ಟ್‌ ಜಲಾವೃತ!

Spread the love

ಬೆಂಗಳೂರು: ಕರ್ನಾಟಕದಲ್ಲಿ ಮುಂಗಾರು (Monsoon) ಪೂರ್ವ ಮಳೆಯ ಆರ್ಭಟ ತೀವ್ರಗೊಂಡಿದ್ದು, ಬಿರುಗಾಳಿ ಸಹಿತ ಸುರಿದ ಭಾರಿ ಮಳೆಗೆ ಜನಜೀವನ ತತ್ತರಗೊಂಡಿದೆ. ಬೀದರ್ ಜಿಲ್ಲೆಯಲ್ಲಿ ಸುರಿದ ಆಲಿಕಲ್ಲು ಮಳೆಯು ಭೀಕರ ದುರಂತವೊಂದಕ್ಕೆ ಕಾರಣವಾಗಿದ್ದು, 6 ವರ್ಷದ ಕಂದಮ್ಮ ಪ್ರಾಣ ಕಳೆದುಕೊಂಡಿದೆ. ಇತ್ತ ರಾಜಧಾನಿ ಬೆಂಗಳೂರಿನಲ್ಲಿ ಗಂಟೆಗೆ 40 ರಿಂದ 60 ಕಿಲೋಮೀಟರ್ ವೇಗದಲ್ಲಿ ಬೀಸಿದ ಗಾಳಿಗೆ ಬೃಹತ್ ಮರಗಳು ರಸ್ತೆಗಳ ಮೇಲೆ ಬಿದ್ದವು. ಸಂಜೆಯಾಗುತ್ತಿದ್ದಂತೆ ಆರಂಭವಾದ ವರುಣನ ಅಬ್ಬರಕ್ಕೆ ಪ್ರಮುಖ ಅಂಡರ್‌ಪಾಸ್‌ಗಳು ಕೆರೆಯಂತಾಗಿದ್ದು, ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದ ಉದ್ಯೋಗಿಗಳು ಹಾಗೂ ವಾಹನ ಸವಾರರು ರಸ್ತೆಗಳಲ್ಲೇ ನರಕಯಾತನೆ ಅನುಭವಿಸುವಂತಾಯಿತು.

ಮುಖ್ಯಾಂಶಗಳು

  • ಬೀದರ್‌ನ ಹುಲಸೂರಿನಲ್ಲಿ ಆಲಿಕಲ್ಲು ಮಳೆಯ ಅಬ್ಬರಕ್ಕೆ ಮನೆಯ ಮೇಲ್ಛಾವಣಿ ಕುಸಿದು 6 ವರ್ಷದ ಮಾಹೇರಾ ಸಾವು, ನಾಲ್ವರಿಗೆ ಗಂಭೀರ ಗಾಯ.
  • ಬೆಂಗಳೂರಿನ ಸಂಜಯನಗರ, ವೈಟ್‌ಫೀಲ್ಡ್, ಪೀಣ್ಯ ಸೇರಿದಂತೆ ಹಲವೆಡೆ ನೂರಾರು ಬೃಹತ್ ಮರಗಳು ಧರೆಗೆ.
  • ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-1ರ ಮೇಲ್ಛಾವಣಿ ಸೋರಿಕೆ.

ಬೀದರ್‌ನಲ್ಲಿ ಕಂದಮ್ಮ ಬಲಿ

ಬೀದರ್ ಜಿಲ್ಲೆಯ ಹುಲಸೂರು ತಾಲೂಕಿನ ತಹಶೀಲ್ದಾರ್ ಕಚೇರಿ ಬಳಿಯಿರುವ ಬಡಾವಣೆಯಲ್ಲಿ ಬಿರುಗಾಳಿ ಹಾಗೂ ಆಲಿಕಲ್ಲು ಮಳೆಯ ಆರ್ಭಟಕ್ಕೆ ಮನೆಯೊಂದರ ಮೇಲ್ಛಾವಣಿ ಕುಸಿದು ಬಿದ್ದಿದೆ. ಮೇಲ್ಛಾವಣಿ ಮೇಲಿದ್ದ ಭಾರವಾದ ಕಲ್ಲುಗಳು ನೇರವಾಗಿ ಮನೆಯೊಳಗೆ ಬಿದ್ದ ಪರಿಣಾಮ, 6 ವರ್ಷದ ಬಾಲಕಿ ಮಾಹೇರಾ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.

ಮನೆ ಮೇಲ್ಛಾವಣಿ ಕುಸಿದು ಅವಾಂತರವಾಗಿರುವುದು

ಘಟನೆಯಲ್ಲಿ ಕುಟುಂಬದ ಇನ್ನುಳಿದ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ನಡುರಸ್ತೆಯಲ್ಲೇ ಜಲಾವೃತಗೊಂಡ ವಾಹನಗಳು!

ಬೆಂಗಳೂರಿನ ಇಂದಿರಾನಗರ, ಕೆ.ಆರ್. ಪುರಂ, ಮಹದೇವಪುರ, ಮಲ್ಲೇಶ್ವರಂ ಹಾಗೂ ಮೆಜೆಸ್ಟಿಕ್ ಸೇರಿದಂತೆ ಹಲವು ಭಾಗಗಳಲ್ಲಿ ಬಿರುಗಾಳಿ ಮಳೆ ಅವಾಂತರ ಸೃಷ್ಟಿಸಿದೆ. ಪೀಣ್ಯದ ಬಿಎಫ್‌ಡಬ್ಲ್ಯೂ ರಸ್ತೆ, ಸಂಜಯನಗರ ಮುಖ್ಯ ರಸ್ತೆ, ಗಂಗಮ್ಮ ಸರ್ಕಲ್, ಜಾಲಹಳ್ಳಿ ಹಾಗೂ ವೀರಣ್ಣಪಾಳ್ಯ ಜಂಕ್ಷನ್‌ಗಳಲ್ಲಿ ಬೃಹತ್ ಮರಗಳು ಉರುಳಿ ಬಿದ್ದಿವೆ. ವೈಟ್‌ಫೀಲ್ಡ್ ರಸ್ತೆಯೊಂದರಲ್ಲೇ 3 ರಿಂದ 4 ಕಡೆ ಮರಗಳು ಧರಾಶಾಯಿಯಾಗಿದ್ದು, ಶಾಂತಿನಿಕೇತನ ಜಂಕ್ಷನ್ ಬಳಿ ವಾಹನಗಳು ಕಿಲೋಮೀಟರ್‌ಗಟ್ಟಲೆ ಸಾಲುಗಟ್ಟಿ ನಿಂತಿದ್ದವು. ಮುಂಜಾಗ್ರತಾ ಕ್ರಮವಾಗಿ ಸಂಚಾರ ಪೊಲೀಸರು ಕೆ.ಆರ್. ಸರ್ಕಲ್ ಅಂಡರ್‌ಪಾಸ್ ಅನ್ನು ಬ್ಯಾರಿಕೇಡ್ ಹಾಕಿ ಬಂದ್ ಮಾಡಿದ್ದರು. ಹೆಬ್ಬಾಳ ಮತ್ತು ಕೆ.ಆರ್. ಪುರಂ ರಿಂಗ್ ರೋಡ್ ಸರ್ವಿಸ್ ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿದ್ದವು.

ಏರ್‌ಪೋರ್ಟ್‌ನಲ್ಲಿ ಪ್ರಯಾಣಿಕರ ಪರದಾಟ

ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (KIA) ಸುತ್ತಮುತ್ತ ಮಳೆಯ ಆರ್ಭಟ ಹೆಚ್ಚಾಗಿದ್ದರಿಂದ ರನ್‌ವೇ ಸ್ಪಷ್ಟವಾಗಿ ಕಾಣಿಸದೆ ವಿಮಾನಗಳ ಟೇಕಾಫ್ ಹಾಗೂ ಲ್ಯಾಂಡಿಂಗ್ ಪ್ರಕ್ರಿಯೆಯಲ್ಲಿ ಭಾರಿ ವಿಳಂಬವಾಯಿತು. ಮಳೆಯ ಬಿರುಗಾಳಿಯ ಹೊಡೆತಕ್ಕೆ ಏರ್‌ಪೋರ್ಟ್‌ನ ಟರ್ಮಿನಲ್-1 ರ ಮೇಲ್ಛಾವಣಿಯ ಭಾಗವೊಂದು ಸೋರಲು ಆರಂಭಿಸಿತು.

ವಿಮಾನ ನಿಲ್ದಾಣದ ಟರ್ಮಿನಲ್-1 ಮೇಲ್ಛಾವಣಿ ಸೋರಿಕೆ

ಇದರಿಂದಾಗಿ ದೇಶಿ ಹಾಗೂ ವಿದೇಶಿ ಪ್ರಯಾಣಿಕರು ನಿಲ್ದಾಣದ ಒಳಗಡೆಯೇ ಲಗೇಜ್‌ಗಳೊಂದಿಗೆ ಇತ್ತ ಇತ್ತ ಓಡಾಡುತ್ತಾ ತೀವ್ರ ಪರದಾಡಿದರು.

ನಗರದ ಹಲವೆಡೆ ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದರಿಂದ ರಾತ್ರಿಯಿಡೀ ಕತ್ತಲೆ ಆವರಿಸಿತ್ತು. ಬಿಬಿಎಂಪಿ ಮತ್ತು ವಿಪತ್ತು ನಿರ್ವಹಣಾ ತಂಡಗಳು ಮರಗಳನ್ನು ತೆರವುಗೊಳಿಸಿ ವಿದ್ಯುತ್ ಸಂಪರ್ಕ ಪುನಃಸ್ಥಾಪಿಸಲು ಕಾರ್ಯಾಚರಣೆ ನಡೆಸಿದವು.


Spread the love
Share:

administrator

Leave a Reply

Your email address will not be published. Required fields are marked *