ಬಿಹಾರದಲ್ಲಿ ಮರು ಚುನಾವಣೆಗೆ ಪ್ರಶಾಂತ್ ಕಿಶೋರ್ ಪಟ್ಟು; ಸುಪ್ರೀಂ ಮೆಟ್ಟಿಲೇರಿದ ‘ಜನ್ ಸುರಾಜ್’!

ನವದೆಹಲಿ:ಮಾಜಿ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರ ಜನ್ ಸುರಾಜ್ ಪಕ್ಷವು 2025 ರ ಬಿಹಾರ ವಿಧಾನಸಭಾ ಚುನಾವಣೆಯನ್ನು ಪ್ರಶ್ನಿಸಿ ಮತ್ತು ರಾಜ್ಯದಲ್ಲಿ ಹೊಸದಾಗಿ ಚುನಾವಣೆಗಳನ್ನು ನಡೆಸಬೇಕೆಂದು ಸುಪ್ರೀಂ ಕೋರ್ಟ್‌ಗೆ ಗುರುವಾರ (ಫೆ5) ಅರ್ಜಿ ಸಲ್ಲಿಸಿದೆ.
ಈ ವಿಚಾರವು ನಾಳೆ (ಶುಕ್ರವಾರ) ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ಜೋಯ್ಯಲ್ಯ ಬಾಗ್ನಿ ಅವರ ಪೀಠದ ಮುಂದೆ ವಿಚಾರಣೆಗೆ ಬರುವ ಸಾಧ್ಯತೆಯಿದೆ.


ಬಿಹಾರ ಚುನಾವಣೆಯಲ್ಲಿ 243 ಸ್ಥಾನಗಳ ಪೈಕಿ ಬಿಜೆಪಿ ನೇತೃತ್ವದ ಎನ್‌ಡಿಎ ಒಟ್ಟು 202 ಸ್ಥಾನಗಳನ್ನು ಗೆಲ್ಲುವ ಮೂಲಕ ಅತ್ಯಮೋಘ ಜಯ ದಾಖಲಿಸಿ ಅಧಿಕಾರವನ್ನು ಉಳಿಸಿಕೊಂಡರೆ, ಇಂಡಿಯಾ ಬ್ಲಾಕ್ ಕಾಂಗ್ರೆಸ್‌ನ ಆರು ಸ್ಥಾನಗಳನ್ನು ಒಳಗೊಂಡಂತೆ ಕೇವಲ 35 ಸ್ಥಾನಗಳನ್ನು ಗಳಿಸಿತ್ತು. ಜನಸುರಾಜ್ ಯಾವುದೇ ಸ್ಥಾನಗಳನ್ನು ಗೆದ್ದಿರಲಿಲ್ಲ.
ಚುನಾವಣಾ ವೇಳಾಪಟ್ಟಿ ಘೋಷಣೆಯ ನಂತರ ಆಡಳಿತಾರೂಢ ಎನ್‌ಡಿಎ ಸರಕಾರವು ಮುಖ್ಯಮಂತ್ರಿ ಮಹಿಳಾ ರೋಜ್‌ಗಾರ್ ಯೋಜನೆಯಡಿ ಮಹಿಳೆಯರಿಗೆ ತಲಾ 10,000 ರೂ.ಹಣವನ್ನು ವರ್ಗಾಯಿಸುವ ಮೂಲಕ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಜನ ಸುರಾಜ್ ಪಕ್ಷ ಆರೋಪಿಸಿದೆ. ಈ ಕ್ರಮವು ಮತದಾರರ ಮೇಲೆ ಪ್ರಭಾವ ಬೀರಿದೆ ಎಂದು ಪಕ್ಷ ಹೇಳಿಕೊಂಡಿದೆ.
ಮಹಿಳೆಯರಿಗೆ ನೇರ ಹಣ ವರ್ಗಾವಣೆಯ ವಿರುದ್ಧ ಸಂವಿಧಾನದ 324 ನೇ ವಿಧಿ (ಎಲ್ಲಾ ಚುನಾವಣೆಗಳಿಗೆ ಮತದಾರರ ಪಟ್ಟಿಗಳ ತಯಾರಿಕೆ ಮತ್ತು ನಡವಳಿಕೆಯ ಮೇಲ್ವಿಚಾರಣೆ, ನಿರ್ದೇಶನ ಮತ್ತು ನಿಯಂತ್ರಣ) ಮತ್ತು ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 123 ರ ಅಡಿಯಲ್ಲಿ ಕ್ರಮ ಕೈಗೊಳ್ಳಲು ಚುನಾವಣಾ ಸಮಿತಿಗೆ ನಿರ್ದೇಶನಗಳನ್ನು ನೀಡುವಂತೆ ಅರ್ಜಿಯಲ್ಲಿ ಕೋರಲಾಗಿದೆ.