ಯುದ್ಧದ ಸನ್ನಾಹ: ಹಾರ್ಮುಜ್‌ನಲ್ಲಿ ಇರಾನ್‌ನ 4 ಕಿಲ್ಲರ್ ಡ್ರೋನ್‌ಗಳನ್ನು ಹೊಡೆದುರುಳಿಸಿದ ಅಮೆರಿಕ ಸೇನೆ!

ವಾಷಿಂಗ್ಟನ್/ಟೆಹರಾನ್: ಅಮೇರಿಕಾ ಮತ್ತು ಇರಾನ್ ನಡುವಿನ ಯುದ್ದ ಮುಗಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಈಗಾಗಲೇ ಶಾಂತಿ ಸ್ಥಾಪನೆಗಾಗಿ ಮಾಡಿಕೊಳ್ಳಲಾಗಿದ್ದ ತಾತ್ಕಾಲಿಕ ಕದನ ವಿರಾಮದ ಭವಿಷ್ಯ ಈಗ ಮತ್ತೆ ಅಪಾಯಕ್ಕೆ ಸಿಲುಕಿದೆ. ಜಗತ್ತಿನ ಅತ್ಯಂತ ಪ್ರಮುಖ ತೈಲ ಸಾರಿಗೆ ಮಾರ್ಗವಾಗಿರುವ ಹಾರ್ಮುಜ್ ಜಲಸಂಧಿ (Strait of Hormuz) ಪ್ರದೇಶದಲ್ಲಿ ಭದ್ರತೆಗೆ ಧಕ್ಕೆ ತರಲು ಯತ್ನಿಸುತ್ತಿದ್ದ ಇರಾನ್‌ನ ನಾಲ್ಕು ಕಿಲ್ಲರ್ ಡ್ರೋನ್‌ಗಳನ್ನು ಅಮೆರಿಕ ಸೇನೆ ಹೊಡೆದುರುಳಿಸಿದೆ. ಅಷ್ಟೇ ಅಲ್ಲದೆ, ದಕ್ಷಿಣ ಇರಾನ್‌ನ ಪ್ರಮುಖ ಬಂದರು ನಗರಿ ‘ಬಂದರ್ ಅಬ್ಬಾಸ್’ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇರಾನ್‌ನ ಡ್ರೋನ್ ನಿಯಂತ್ರಣ ಕೇಂದ್ರದ (Drone Control Center) ಮೇಲೂ ಅಮೆರಿಕ ಪಡೆಗಳು ನಿಖರ ದಾಳಿ ನಡೆಸಿ ಧ್ವಂಸಗೊಳಿಸಿವೆ

ಅಮೆರಿಕಾದ ರಕ್ಷಣಾ ಇಲಾಖೆ (Pentagon) ಮೂಲಗಳ ಪ್ರಕಾರ, ಹಾರ್ಮುಜ್ ಜಲಸಂಧಿ ಸುತ್ತಮುತ್ತ ಅಮೆರಿಕ ಮತ್ತು ಅದರ ಮೈತ್ರಿ ರಾಷ್ಟ್ರಗಳ ವಾಣಿಜ್ಯ ಹಡಗುಗಳಿಗೆ ಧಕ್ಕೆ ತರುವ ನಿಟ್ಟಿನಲ್ಲಿ ಇರಾನ್‌ನ ಡ್ರೋನ್ ಚಟುವಟಿಕೆಗಳು ಗಣನೀಯವಾಗಿ ಹೆಚ್ಚಾಗಿದ್ದವು. ಇದನ್ನು ಮೊದಲೇ ಪತ್ತೆಹಚ್ಚಿದ ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ಪಡೆಗಳು ತಕ್ಷಣವೇ ರಂಗಕ್ಕಿಳಿದು, ಇರಾನ್‌ನ ನಾಲ್ಕು ‘ಒನ್-ವೇ ಅಟ್ಯಾಕ್ ಡ್ರೋನ್’ಗಳನ್ನು (Suicide Drones) ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿವೆ. ಈ ನಾಲ್ಕೂ ಡ್ರೋನ್‌ಗಳು ಹಡಗುಗಳ ಮೇಲೆ ಆತ್ಮಹತ್ಯಾ ದಾಳಿ ನಡೆಸುವ ಅಪಾಯಕಾರಿ ಉದ್ದೇಶ ಹೊಂದಿದ್ದವು ಎಂದು ಅಮೆರಿಕದ ಹಿರಿಯ ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಇದೇ ವೇಳೆ, ಐದನೇ ಡ್ರೋನ್ ಅನ್ನು ಉಡಾವಣೆ ಮಾಡಲು ಸಜ್ಜಾಗುತ್ತಿದ್ದ ಇರಾನ್‌ನ ಮುಖ್ಯ ಕಂಟ್ರೋಲ್ ರೂಮ್ ಅನ್ನು ಗುರುತಿಸಿದ ಅಮೆರಿಕ ಸೇನೆ, ಬಂದರ್ ಅಬ್ಬಾಸ್ ವಲಯದಲ್ಲೇ ಶಕ್ತಿಶಾಲಿ ದಾಳಿ ನಡೆಸಿದೆ. ಈ ನಿಖರ ದಾಳಿಯಿಂದಾಗಿ ಇರಾನ್‌ನ ಡ್ರೋನ್ ನಿಯಂತ್ರಣ ವ್ಯವಸ್ಥೆ ಸಂಪೂರ್ಣವಾಗಿ ಹಾನಿಯಾಗಿದೆ. ಆದರೆ, ಈ ದಾಳಿಯಲ್ಲಿ ಇರಾನ್‌ನ ಎಷ್ಟು ಮಂದಿ ಸೈನಿಕರು ಅಥವಾ ಆಪರೇಟರ್‌ಗಳು ಸಾವನ್ನಪ್ಪಿದ್ದಾರೆ ಅಥವಾ ಗಾಯಗೊಂಡಿದ್ದಾರೆ ಎಂಬುದರ ಅಧಿಕೃತ ಮಾಹಿತಿ ಇನ್ನು ಹೊರಬರಬೇಕಿದೆ.
ಈ ಸೇನಾ ಕಾರ್ಯಾಚರಣೆಯ ಕುರಿತು ಪ್ರತಿಕ್ರಿಯಿಸಿರುವ ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು, “ನಮ್ಮ ಈ ಕ್ರಮಗಳು ಸಂಪೂರ್ಣವಾಗಿ ಸ್ವಯಂ ರಕ್ಷಣೆಯ ಭಾಗವಾಗಿವೆ. ಕದನ ವಿರಾಮವನ್ನು ಕಾಪಾಡುವ ಮತ್ತು ಅಂತರರಾಷ್ಟ್ರೀಯ ಸಮುದ್ರ ಮಾರ್ಗಗಳನ್ನು ಸುರಕ್ಷಿತವಾಗಿಡುವ ಉದ್ದೇಶದಿಂದಲೇ ಈ ಆಪರೇಷನ್ ಮಾಡಲಾಗಿದೆ. ಅಮೆರಿಕ ಪಡೆಗಳ ಮೇಲೆ ಅಥವಾ ಜಾಗತಿಕ ಹಡಗುಗಳ ಮೇಲೆ ಯಾವುದೇ ಅಪಾಯ ಎದುರಾದರೂ ನಾವು ತಕ್ಷಣವೇ ಇಂತಹ ಕಠಿಣ ಪ್ರತ್ಯುತ್ತರ ನೀಡಲಿದ್ದೇವೆ” ಎಂದು ಸ್ಪಷ್ಟಪಡಿಸಿದ್ದಾರೆ. ಕೆಲ ದಿನಗಳ ಹಿಂದೆಯೂ ಅಮೆರಿಕ ಸೇನೆ ಇರಾನ್‌ನ ಕ್ಷಿಪಣಿ ತಾಣಗಳು ಮತ್ತು ಮೈನ್‌ಗಳನ್ನು ಅಳವಡಿಸುವ ದೋಣಿಗಳ ಮೇಲೆ ದಾಳಿ ನಡೆಸಿತ್ತು.
ಇನ್ನೊಂದೆಡೆ ಕುವೈತ್ ನ ವಾಯು ರಕ್ಷಣಾ ವ್ಯವಸ್ಥೆಯು ಕ್ಷಿಪಣಿ ಮತ್ತು ಡ್ರೋನ್ ದಾಳಿಯನ್ನು ಎದುರಿಸುತ್ತಿದೆ ಎಂದು ಕುವೈತ್ ಸೇನೆ ಹೇಳಿರುವ ಬಗ್ಗೆ Al Jazeera ವರದಿ ಮಾಡಿದೆ.
ಕುವೈತ್‌ನ ರಾಷ್ಟ್ರೀಯ ಸುದ್ದಿಸಂಸ್ಥೆಯ ವರದಿ ಪ್ರಕಾರ, ದೇಶದಾದ್ಯಂತ ಎಚ್ಚರಿಕಾ ಸೈರನ್‌ಗಳು ಮೊಳಗುತ್ತಿವೆ. ಕುವೈತ್ ಸೇನೆ ತನ್ನ ವಾಯು ರಕ್ಷಣಾ ವ್ಯವಸ್ಥೆಗಳು ಕ್ಷಿಪಣಿ ಮತ್ತು ಡ್ರೋನ್ ದಾಳಿಗಳನ್ನು ಎದುರಿಸುತ್ತಿವೆ ಎಂದು ತಿಳಿಸಿದೆ.