ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಪ್ರಿಸಿಷನ್ ಅಪ್ರೋಚ್ ಲೈಟಿಂಗ್ ಅಳವಡಿಕೆ

ಮಂಗಳೂರು:ಮಂಜು ಕವಿದ ವಾತಾವರಣ ಸಹಿತ ಹವಾಮಾನ ವೈಪರೀತ್ಯದಿಂದಾಗಿ ಮಂಗಳೂರಿನಲ್ಲಿ ವಿಮಾನಗಳು ಇಳಿಯಲು ಸಾಧ್ಯವಾಗದೆ ಇತರ ಏರ್‌ಪೋರ್ಟ್‌ಗಳಲ್ಲಿ ಇಳಿಯಬೇಕಾದ ಸಮಸ್ಯೆಗೆ ಇನ್ನು ಮುಂದೆ ಪರಿಹಾರ ದೊರೆಯಲಿದೆ

ವಿಮಾನ ಇಳಿಯುವುದಕ್ಕೂ ಮುನ್ನ ಪೈಲಟ್‌ಗೆ ಸುಮಾರು 5 ಕಿ.ಮೀ.ದೂರದವರೆಗೆ ಏರ್‌ಪೋರ್ಟ್ ರನ್‌ವೇ ಬಗ್ಗೆ ಸ್ಪಷ್ಟ ಮತ್ತು ನಿಖರ ದಿಕ್ಕು ಸೂಚಿಸುವ “ಪ್ರಿಸಿಷನ್ ಅಪ್ರೋಚ್ ಲೈಟಿಂಗ್’ (ಪಿಎಎಲ್) ಅಳವಡಿಕೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ನಡೆಯುತ್ತಿದೆ. ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಕೇಂದ್ರ ವಿಮಾನಯಾನ ಸಚಿವಾಲಯದ ಸೂಚನೆ ಮೇರೆಗೆ ಈ ಕಾಮಗಾರಿ ನಡೆಯುತ್ತಿದ್ದು, ಡಿಸೆಂಬರ್ ಒಳಗೆ ಪೂರ್ಣವಾಗುವ ಸಾಧ್ಯತೆ ಇದೆ. ಇದು ಪೂರ್ಣವಾದರೆ ಬಿರುಗಾಳಿ ಸಹಿತ ಮಳೆ ಸಂದರ್ಭ ಹೊರತುಪಡಿಸಿ ಮಿಕ್ಕ ಸಂದರ್ಭಗಳಲ್ಲಿ ವಿಮಾನ ಇಳಿಸಲು ಪೈಲಟ್‌ಗಳಿಗೆ ರನ್‌ವೇ ಸ್ಪಷ್ಟವಾಗಿ ಕಾಣಿಸಲಿದೆ.
ಹೇಗಿರುತ್ತದೆ “ಪಿಎಎಲ್’?
ಪಿಎಎಲ್ ಬೃಹತ್ ಟವರ್ ಸ್ವರೂಪದ ರಚನೆ ಹೊಂದಿದ್ದು, ಒಟ್ಟು 30 ಪ್ರಖರವಾದ ಲೈಟ್‌ಗಳನ್ನು ಹೊಂದಿರುತ್ತದೆ. 11 ವಿಮಾನ ನಿಲ್ದಾಣದ ಆವರಣದ ಒಳಗೆ ಅಳವಡಿಸಲಾಗುತ್ತದೆ. ಉಳಿದ 19 ನಿಲ್ದಾಣದ ಹೊರಭಾಗದ ಕಂದಾವರ ಗ್ರಾಮ ಪಂಚಾಯತ್‌ನ ಕೊಳಂಬೆ ಗ್ರಾಮದಲ್ಲಿ ಅಳವಡಿಸಲಾಗುತ್ತಿದೆ. ವಿಮಾನ ನಿಲ್ದಾಣದ ರನ್‌ವೇಯಿಂದ 900 ಮೀ. ದೂರದಲ್ಲಿ ಇದರ ಅಳವಡಿಕೆ ಆಗುತ್ತಿದೆ. ಇಲ್ಲಿ ಅಳವಡಿಸುವ ಪಿಎಎಲ್ “ಕೆಟಗರಿ’ 1 ಶ್ರೇಣಿಯದ್ದು. ಹೊಸದಿಲ್ಲಿ, ಬೆಂಗಳೂರು ಸೇರಿದಂತೆ ಬಹುಮುಖ್ಯ ಏರ್‌ಪೋರ್ಟ್‌ಗಳಲ್ಲಿ ಪಿಎಎಲ್ 5ನೇ ಕೆಟಗರಿಯದ್ದೂ ಇವೆ. ಹೀಗಾಗಿ, ಅಲ್ಲಿ ಬಿರುಗಾಳಿ ಸಹಿತ ಮಳೆ ಅಥವಾ ಇತರ ಹವಾಮಾನ ವೈಪರೀತ್ಯ ಆದರೂ ವಿಮಾನಗಳನ್ನು ಇಳಿಸಲು ಅಡ್ಡಿಯಿಲ್ಲ.
ಏನು ಲಾಭ?
ಸದ್ಯ ಮಂಗಳೂರಿನಲ್ಲಿ ಕೊಂಚ ಮಂಜು ಮುಸುಕಿದ ವಾತಾವರಣವಿದ್ದರೂ ವಿಮಾನವನ್ನು ಬೆಂಗಳೂರು, ಕಣ್ಣೂರಿಗೆ ಕಳುಹಿಸಬೇಕಿತ್ತು. ಮಂಗಳೂರಿನಲ್ಲಿ ಹವಾಮಾನ ಸರಿಯಾದ ಬಳಿಕ ವಾಪಸು ಬರಬೇಕಿತ್ತು. ಇದರಿಂದ ಪ್ರಯಾಣಿಕರಿಗೆ ತೊಂದರೆ ಆಗುತ್ತಿತ್ತು.
ರನ್‌ವೇ ಸೆಂಟರ್ ಲೈಟಿಂಗ್ ಪೂರ್ಣ
ವಿಮಾನ ನಿಲ್ದಾಣದ ಭವಿಷ್ಯದ ಕಾರ್ಯಾಚರಣೆಗಳ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ರನ್‌ವೇ “ಸೆಂಟರ್ ಲೈಟಿಂಗ್’ ಈಗಾಗಲೇ ಅಳವಡಿಸಲಾಗಿದೆ. ಪೈಲಟ್‌ಗಳಿಗೆ ಆಕಾಶದಿಂದಲೇ ರನ್‌ವೇ ಗೋಚರಿಸಲು 2,450 ಮೀ. ಉದ್ದದ ರನ್‌ವೇಗೆ ಲೈಟ್ ಆಳವಡಿಸಲಾಗಿದೆ.
ಕೊಳಂಬೆಯ ಸ್ಥಳೀಯರಿಗೆ ಸಮಸ್ಯೆ?
ಕಂದಾವರ ಪಂಚಾಯತ್‌ನ ಕೊಳಂಬೆ ಗ್ರಾಮದ ಉಣಿಲೆ ಪ್ರದೇಶದಲ್ಲಿ ಕಾಮಗಾರಿ ನಡೆಯುತ್ತಿದ್ದು, ಬೃಹತ್ ವಾಹನಗಳ ಓಡಾಟದಿಂದ ಇಲ್ಲಿನ ಒಳ ರಸ್ತೆ ಹಾಳಾಗಿದೆ ಎಂಬ ದೂರಿದೆ. ಈ ಬಗ್ಗೆ ಆಡಳಿತ ವ್ಯವಸ್ಥೆಗೆ ಸ್ಥಳೀಯರು ದೂರು ನೀಡಿದ್ದಾರೆ.
“ಸೇಫ್ಟಿ ಬೇಸಿಕ್ ಸ್ಟ್ರಿಪ್” ಬಾಕಿ
ಹೆಚ್ಚುವರಿ ಸುರಕ್ಷತೆಯ “ಸೇಫ್ಟಿ ಬೇಸಿಕ್ ಸ್ಟ್ರಿಪ್” ಮಾತ್ರ ಏರ್‌ಪೋರ್ಟ್‌ನಲ್ಲಿ ಇನ್ನೂ ಆಗಿಲ್ಲ. ಅಂದರೆ ರನ್‌ವೇಯ ಎರಡೂ ಬದಿ ತಲಾ 140 ಮೀ. ಅಗಲದ ಜಾಗ ಇರಬೇಕು. ಈಗ ರನ್‌ವೇಯ ಒಂದು ಬದಿ 140 ಮೀ. ಲಭ್ಯವಿದ್ದರೂ, ಇನ್ನೊಂದು ಬದಿಯಲ್ಲಿ ಇಲ್ಲ. ಇದಕ್ಕಾಗಿ ಹೆಚ್ಚುವರಿ 32.97 ಎಕ್ರೆ ಜಮೀನು ಒದಗಿಸುವಂತೆ 2015-16ರಲ್ಲಿ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರವು ಡಿಸಿಗೆ ಪತ್ರ ಬರೆದಿದೆ.ಆದರೆ ಇಲ್ಲಿಯವರೆಗೆ ಇದು ಆಗಿಲ್ಲ.
