ಬ್ಯಾಗ್‌ನಲ್ಲಿದ್ದ ಪವರ್ ಬ್ಯಾಂಕ್ ಬ್ಲಾಸ್ಟ್:ಪ್ರಾಣಾಪಾಯದಿಂದ ಪಾರಾದ ಲೇಡಿ!

ರಷ್ಯಾದ ಸುರ್ಗುತ್ ನಗರದ ಬಹುಮಹಡಿ ವಸತಿ ಸಮುಚ್ಚಯವೊಂದರಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ನಡೆದಿದ್ದು, ಇದರ ಸಿಸಿಟಿವಿ (CCTV) ದೃಶ್ಯಾವಳಿಗಳು ಲಭ್ಯವಾಗಿವೆ. ಮಹಿಳೆಯೊಬ್ಬರು ಎಂದಿನಂತೆ ನಿರಾಳವಾಗಿ ಕಿರಿದಾದ ಲಿಫ್ಟ್ ಒಳಗೆ ಪ್ರವೇಶಿಸುತ್ತಿದ್ದಂತೆ, ಅವರ ಬ್ಯಾಗ್‌ನಿಂದ ಇದ್ದಕ್ಕಿದ್ದಂತೆ ಹೊಗೆ ಹೊರಬರಲಾರಂಭಿಸಿದೆ.
ಲಿಫ್ಟ್‌ನ ಸ್ವಯಂಚಾಲಿತ ಬಾಗಿಲು ಮುಚ್ಚಿಕೊಳ್ಳುತ್ತಿದ್ದಂತೆಯೇ ಬ್ಯಾಗ್‌ನಲ್ಲಿದ್ದ ಪವರ್ ಬ್ಯಾಂಕ್ ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿದೆ. ಇದರಿಂದ ತೀವ್ರ ಗಾಬರಿಗೊಂಡ ಮಹಿಳೆ ತಕ್ಷಣವೇ ಬ್ಯಾಗ್ ಅನ್ನು ಕೆಳಗೆ ಬಿಸಾಡಿದ್ದಾರೆ. ಕ್ಷಣಾರ್ಧದಲ್ಲೇ ಲಿಫ್ಟ್‌ನ ಕಿರಿದಾದ ಜಾಗದಲ್ಲಿ ದಟ್ಟವಾದ, ಕಟುವಾದ ಹೊಗೆ ತುಂಬಿಕೊಂಡಿದ್ದು, ಬೆಂಕಿಯ ಜ್ವಾಲೆಗಳು ವ್ಯಾಪಿಸತೊಡಗಿವೆ.
ದಟ್ಟ ಹೊಗೆಯಿಂದಾಗಿ ಲಿಫ್ಟ್‌ನೊಳಗೆ ಕತ್ತಲು ಆವರಿಸುತ್ತಿದ್ದರೂ, ಮಹಿಳೆ ಗಾಬರಿಯಿಂದ ಲಿಫ್ಟ್‌ನ ನಿಯಂತ್ರಣ ಬಟನ್‌ಗಳನ್ನು ಒತ್ತಲು ತಡಕಾಡಿದ್ದಾರೆ. ತೀವ್ರ ಆತಂಕದ ನಡುವೆಯೂ ರಕ್ಷಣೆಗಾಗಿ ಪದೇ ಪದೇ ಲಿಫ್ಟ್ ಬಾಗಿಲನ್ನು ಬಡಿದಿದ್ದಾರೆ. ಬೆಂಕಿಯ ಧಗಧಗನೆ ಉರಿಯುತ್ತಿದ್ದ ಜ್ವಾಲೆಯನ್ನು ತಡೆಯಲು ಕೈಗಳಿಂದಲೇ ನಂದಿಸುವ ವ್ಯರ್ಥ ಪ್ರಯತ್ನವನ್ನೂ ಮಾಡಿದ್ದಾರೆ.
ದಟ್ಟ ಹೊಗೆಯಿಂದಾಗಿ ಸಿಸಿಟಿವಿ ಕ್ಯಾಮೆರಾದ ದೃಶ್ಯಾವಳಿಗಳೂ ಮಸುಕಾಗುವಷ್ಟರಲ್ಲಿ, ಅದೃಷ್ಟವಶಾತ್ ಪವಾಡಸದೃಶ ರೀತಿಯಲ್ಲಿ ಲಿಫ್ಟ್ ಬಾಗಿಲು ತೆರೆದುಕೊಂಡಿದೆ. ತಕ್ಷಣವೇ ಮಹಿಳೆ ಹೊರಗೆ ಓಡಿಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಘಟನೆಯಿಂದ ಮಹಿಳೆ ತೀವ್ರ ಆಘಾತಕ್ಕೊಳಗಾಗಿದ್ದರೂ, ಯಾವುದೇ ದೈಹಿಕ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.
ಅವರು ಸುರ್ಗುತ್ ನಗರದಲ್ಲಿರುವ ತಮ್ಮ ಫ್ಲಾಟ್‌ಗೆ ಮರಳುತ್ತಿದ್ದಾಗ ಈ ದುರಂತ ಸಂಭವಿಸಿದೆ. ಆದರೆ, ಈ ಅಗ್ನಿ ಅವಘಡಕ್ಕೆ ಸಂಬಂಧಿಸಿದಂತೆ ನಮಗೆ ಯಾವುದೇ ತುರ್ತು ಕರೆ ಬಂದಿಲ್ಲ ಎಂದು ನಗರದ ವಿಪತ್ತು ನಿರ್ವಹಣಾ ಹಾಗೂ ತುರ್ತು ಸೇವೆಗಳ ವಿಭಾಗದ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
