ವಿವಾದಕ್ಕೆ ಕಾರಣವಾದ ಪಿಸಿಬಿ ಅಧ್ಯಕ್ಷ: ರೊನಾಲ್ಡೊ ಫೋಟೊ ಹಂಚಿ ಭಾರತೀಯರನ್ನು ಕೆಣಕಿದ ಪಾಕ್ ಕ್ರಿಕೆಟ್ ಮಂಡಳಿ ಅಧ್ಯಕ್ಷ!

ಆಪರೇಷನ್ ಸಿಂಧೂರ್ ವೇಳೆ ಭಾರತದ ವಾಯು ಪಡೆಯ 6 ಫೈಟರ್ ಜೆಟ್ ಅನ್ನು ಹೊಡೆದುರುಳಿಸಿದೆ ಎಂಬ ಸುಳ್ಳು ಸುದ್ದಿಯೊಂದನ್ನು ಪಾಕಿಸ್ತಾನಿಯರು ಕಳೆದ ಕೆಲ ತಿಂಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಮುಂದಿಡುತ್ತಿದ್ದರು. ಇದನ್ನೇ ಪ್ರಸ್ತಾಪಿಸಿ ಪಾಕಿಸ್ತಾನ್ ತಂಡದ ಆಟಗಾರ ಹಾರಿಸ್ ರೌಫ್ ಟೀಮ್ ಇಂಡಿಯಾ ವಿರುದ್ಧದ ಪಂದ್ಯದ ವೇಳೆ 6-0 ಎಂದು ತೋರಿಸಿ ಅಣಕಿಸಿದ್ದರು. ಇದೀಗ ಈ ಸುಳ್ಳು ಸುದ್ದಿಯನ್ನು ನಿಜ ಮಾಡಲು ಪಿಸಿಬಿ ಅಧ್ಯಕ್ಷರು ಸಹ ಮುಂದಾಗಿರುವುದು ಅಚ್ಚರಿ.

ಏಷ್ಯಾಕಪ್ ನಲ್ಲಿ ಭಾರತ ಸತತ ಐದನೇ ಗೆಲುವು ದಾಖಲಿಸಿದೆ. ಸೂಪರ್-4 ಹಂತದ 2ನೇ ಪಂದ್ಯದಲ್ಲಿ ಬಾಂಗ್ಲಾದೇಶ್ ವಿರುದ್ಧ 41 ರನ್ಗಳ ಜಯ ಸಾಧಿಸಿ ಟೀಮ್ ಇಂಡಿಯಾ ಫೈನಲ್ಗೆ ಎಂಟ್ರಿ ಕೊಟ್ಟಿದೆ. ಭಾರತ ತಂಡ ಈ ಗೆಲುವಿನೊಂದಿಗೆ ಶ್ರೀಲಂಕಾ ತಂಡ ಏಷ್ಯಾಕಪ್ ಟೂರ್ನಿಯಿಂದ ಹೊರಬಿದ್ದಿದೆ. ಇನ್ನುಳಿದಿರುವುದು ಪಾಕಿಸ್ತಾನ್ ಹಾಗೂ ಬಾಂಗ್ಲಾದೇಶ್. ಈ ಎರಡು ತಂಡಗಳಲ್ಲಿ ಒಂದು ಟೀಮ್ ಏಷ್ಯಾಕಪ್ ಫೈನಲ್ನಲ್ಲಿ ಭಾರತ ತಂಡವನ್ನು ಎದುರಿಸಲಿದೆ. ಇತ್ತ ಎಲ್ಲರೂ ಭಾರತ ಮತ್ತು ಪಾಕಿಸ್ತಾನ್ ನಡುವಣ ಫೈನಲ್ ಪಂದ್ಯವನ್ನು ಎದುರು ನೋಡುತ್ತಿದ್ದರೆ, ಅತ್ತ ಪಾಕಿಸ್ತಾನ್ ಕ್ರಿಕೆಟ್ ಮಂಡಳಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಸೋಷಿಯಲ್ ಮೀಡಿಯಾದಲ್ಲಿ ಫೋಟೋವೊಂದನ್ನು ಹಂಚಿಕೊಳ್ಳುವ ಮೂಲಕ ಭಾರತೀಯರನ್ನು ಕೆಣಕಿದ್ದಾರೆ.
ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ಅಧ್ಯಕ್ಷರಾಗಿರುವ ಮೊಹ್ಸಿನ್ ನಖ್ವಿ ಅವರು ಸಾಮಾಜಿಕ ಮಾಧ್ಯಮದಲ್ಲಿ ಫುಟ್‌ಬಾಲ್ ದಂತಕಥೆ ಕ್ರಿಸ್ಟಿಯಾನೊ ರೊನಾಲ್ಡೊ ಪ್ಲೇನ್ ಸೆಲೆಬ್ರೇಷನ್ ಸನ್ನೆಯ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಈ ಫೋಟೋವನ್ನು ಪೋಸ್ಟ್ ಮಾಡುವ ಮೂಲಕ ನಖ್ವಿ ಪರೋಕ್ಷವಾಗಿ ಭಾರತಕ್ಕೆ ಟಾಂಗ್ ನೀಡಿದ್ದಾರೆ.
ಮೊಹ್ಸಿನ್ ನಖ್ವಿ ಸುಖಾ ಸುಮ್ಮನೆ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಪ್ಲೇನ್ ಸೆಲೆಬ್ರೇಷನ್ ಫೋಟೋ ಹಂಚಿಕೊಳ್ಳಲು ಮುಖ್ಯ ಕಾರಣ ಹಾರಿಸ್ ರೌಫ್ ಅವರ ಸೆಲೆಬ್ರೇಷನ್ ಎನ್ನಲಾಗುತ್ತಿದೆ. ಭಾರತದ ವಿರುದ್ಧದ ಪಂದ್ಯದ ವೇಳೆ ಪಾಕ್ ವೇಗಿ ಹಾರಿಸ್ ರೌಫ್ ಫೈಟರ್ ಜೆಟ್ ಕೈ ಸನ್ನೆ ಮಾಡಿ ಟೀಮ್ ಇಂಡಿಯಾ ಅಭಿಮಾನಿಗಳನ್ನು ಕೆಣಕಿದ್ದರು.
ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕ ಆಕ್ರೋಶಗಳು ವ್ಯಕ್ತವಾಗಿದ್ದವು. ಇದರ ಬೆನ್ನಲ್ಲೇ ಪಾಕ್ ಸ್ಪಿನ್ನರ್ ಸುಫಿಯಾನ್ ಮುಖೀಮ್ ತನ್ನ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಪ್ಲೇನ್ ಸೆಲೆಬ್ರೇಷನ್ ವಿಡಿಯೋ ಹಂಚಿಕೊಂಡು ಕಾಲೆಳೆದಿದ್ದರು.
ಇದೀಗ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಪ್ಲೇನ್ ಸೆಲೆಬ್ರೇಷನ್ ಫೋಟೋ ಹಂಚಿಕೊಳ್ಳುವ ಮೂಲಕ ಮೊಹ್ಸಿನ್ ನಖ್ವಿ ಪರೋಕ್ಷವಾಗಿ ಭಾರತೀಯರನ್ನು ಅಣಕಿಸಿದ್ದಾರೆ.
ಮೊಹ್ಸಿನ್ ನಖ್ವಿ ಹಂಚಿಕೊಂಡಿರುವ ಈ ಫೋಟೋ ಸ್ಕ್ರೀನ್ ಶಾಟ್ಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದರ ಬೆನ್ನಲ್ಲೇ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷರ ವಿರುದ್ಧ ಆಕ್ರೋಶಗಳು ವ್ಯಕ್ತವಾಗಲಾರಂಭಿಸಿದೆ.
ಅದರಲ್ಲೂ ಕೆಲವರು ಈ ವ್ಯಕ್ತಿಯು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಹುದ್ದೆಯಲ್ಲಿರಲು ಅರ್ಹನಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಇನ್ನು ಕೆಲವರು ಕೇವಲ ವದಂತಿಯನ್ನೇ ನಿಜವೆಂದು ಬಿಂಬಿಸಲು ಪಾಕಿಸ್ತಾನಿಯರು ಶ್ರಮಿಸುತ್ತಿದ್ದಾರೆ. ಇದಕ್ಕೆ ಪಿಸಿಬಿ ಅಧ್ಯಕ್ಷರು ಕೂಡ ಸಾಥ್ ನೀಡಿರುವುದು ಅಚ್ಚರಿ. ಹೀಗಾಗಿ ಅವರನ್ನು ಎಸಿಸಿ ಅಧ್ಯಕ್ಷ ಹುದ್ದೆಯಿಂದ ಕೆಳಗಿಳಿಸಬೇಕೆಂದು ಅನೇಕರು ಆಗ್ರಹಿಸಿದ್ದಾರೆ.