ಮಂಗಳೂರಿನಲ್ಲಿ ‘ಪಾರ್ಟ್‌ಟೈಂ ಕೆಲಸ’ದ ಆಮಿಷ: ಮಹಿಳೆಯಿಂದ 20 ಲಕ್ಷ ರೂ.ಗೂ ಹೆಚ್ಚು ವಂಚನೆ!

ಮಂಗಳೂರು: ಮನೆಯಿಂದಲೇ ಕೆಲಸ/ಪಾರ್ಟ್‌ಟೈಂ ಕೆಲಸದಿಂದ ಹಣ ಸಂಪಾದಿಸಬಹುದು ಎಂದು ಇನ್‌ಸ್ಟಾಗ್ರಾಂನಲ್ಲಿ ಬಂದ ಸಂದೇಶವನ್ನು ನಂಬಿ ಮಹಿಳೆಯೊಬ್ಬರು 20,62,713 ರು. ಕಳೆದುಕೊಂಡು ವಂಚನೆಗೊಳಗಿರುವ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೂರುದಾರರು ಮೇ 6ರಂದು ಇನ್‌ಸ್ಟಾಗ್ರಾಂ ನೋಡುತ್ತಿರುವಾಗ ಮನೆಯಿಂದಲೇ ಕೆಲಸ ಮಾಡಿ ಹಣ ಗಳಿಸಿ ಎಂಬ ಬಗ್ಗೆ ಸಂದೇಶ ಬಂದಿದ್ದು, ಅದನ್ನು ಕ್ಲಿಕ್ ಮಾಡಿದಾಗ ವಾಟ್ಸಾಪ್ ತೆರೆದುಕೊಂಡಿದೆ.

ವಾಟ್ಸಾಪ್‌ನಲ್ಲಿ ಸಂಪರ್ಕಕ್ಕೆ ಬಂದ ಅಪರಿಚಿತ ವ್ಯಕ್ತಿ, ಬಳಿಕ ಟೆಲಿಗ್ರಾಂನಲ್ಲಿ 3 ಲಿಂಕ್ ಕಳುಹಿಸಿದ್ದು, ರೆಸ್ಟೋರೆಂಟ್, ಸ್ಥಳ, ಹೊಟೇಲ್‌ಗಳನ್ನು ಲೈಕ್ ಮಾಡಿ 5 ಸ್ಟಾರ್‌ಗಳನ್ನು ಕೊಟ್ಟು ಕಮೆಂಟ್ ಮಾಡಿ, ಸ್ಕ್ರೀನ್ ಶಾಟ್ ಕಳುಹಿಸಿ ಮನೆಯಿಂದಲೇ ಹಣ ಸಂಪಾದಿಸಬಹುದು ಎಂದು ತಿಳಿಸಿದ್ದಾನೆ.
ಅನಂತರ ಮೀನಾ ರೆಡ್ಡಿ ಎನ್ನುವ ಟೆಲಿಗ್ರಾಂ ಖಾತೆದಾರೆ ಬ್ಯಾಂಕ್ ವಿವರ ಪಡೆದುಕೊಂಡಿದ್ದಾಳೆ. ವಿವಿಧ ಟಾಸ್ಕ್‌ಗಳಿಗೆ ಹಂತ ಹಂತವಾಗಿ 120, 200 ರು.ಗಳನ್ನು ವರ್ಗಾವಣೆ ಮಾಡಿದ್ದಾಳೆ. ದೂರುದಾರರನ್ನು ಕೆಲವು ಟೆಲಿಗ್ರಾಂ ಖಾತೆಗಳಿಗೆ ಸೇರಿಸಿ, ಟಾಸ್ಕ್ ನೀಡಿದ್ದಾಳೆ. ಟ್ರೇಡಿಂಗ್ ಅಕೌಂಟ್ ಲಿಂಕ್ ಕಳುಹಿಸಿ ರಿಜಿಸ್ಪ್ರೇಷನ್ ಆಗಲು ಸೂಚಿಸಿದ್ದಾಳೆ. ಅದರಂತೆ ಲಿಂಕ್‌ಗೆ ಕ್ಲಿಕ್ ಮಾಡಿ ಮಾಹಿತಿ ತುಂಬಿದ್ದು, ಅನಂತರ ಆಕೆಯ ಸೂಚನೆಯಂತೆ ಟಾಸ್ಕ್ ಪೂರ್ಣಗೊಳಿಸಲು ರಾಜೇಶ್ ವರ್ಮಾ ಎಂಬಾತನ್ನು ಸಂಪರ್ಕಿಸಿದ್ದಾರೆ. ಹೀಗೆ ಒಬ್ಬರು ಮತ್ತೊಬ್ಬರನ್ನು ಪರಿಚಯಿಸಿ, ರೋಹಿತ್ ಶರ್ಮಾ, ಲಕ್ಕಿ ಸಿಂಗ್, ರವಿ ಪಟೇಲ್ ಎಂಬವರು ದೂರುದಾರರನ್ನು ನಂಬಿಸಿ 20,62,713 ರು. ಹಣವನ್ನು ವರ್ಗಾವಣೆ ಮಾಡಿಸಿಕೊಂಡು, ಹಣವನ್ನು ಆನ್‌ಲೈನ್ ಮೂಲಕ ವಂಚನೆ ಮಾಡಿದ್ದಾರೆ.
