ವಿಶ್ವಬ್ಯಾಂಕ್‌ನಿಂದ ಪಡೆದ ₹14,000 ಕೋಟಿ ಸಾಲವನ್ನು ಚುನಾವಣೆ ಗೆಲ್ಲಲು ಸಿಎಂ ನಿತೀಶ್ ಕುಮಾರ್ ಸರ್ಕಾರ ದುರ್ಬಳಕೆ ಮಾಡಿದೆ – ಪ್ರಶಾಂತ್ ಕಿಶೋರ್ ಪಕ್ಷದ ಆರೋಪ!

ಪಾಟ್ನಾ: ಸಿಎಂ ನಿತೀಶ್ ಕುಮಾರ್ (Nitish Kumar) ನೇತೃತ್ವದ ಸರ್ಕಾರವು ವಿಶ್ವಬ್ಯಾಂಕ್‌ನ 14,000 ಕೋಟಿ ರೂ. ಸಾಲದ ಹಣವನ್ನು ಬಿಹಾರ ಚುನಾವಣೆಗಾಗಿ ಬಳಸಿಕೊಂಡಿದೆ ಎಂದು ಪ್ರಶಾಂತ್ ಕಿಶೋರ್ (Prashant Kishor) ಪಕ್ಷವು ಆರೋಪಿಸಿದೆ.

ಜನ ಸುರಾಜ್ ಪಕ್ಷವು ತನ್ನ ಚೊಚ್ಚಲ ಚುನಾವಣೆಯಲ್ಲಿ ಖಾತೆ ತೆರೆಯಲು ವಿಫಲವಾಗಿದೆ. ಈ ಬೆನ್ನಲ್ಲೇ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜನ ಸುರಾಜ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಉದಯ್ ಸಿಂಗ್, ವಿಶ್ವಬ್ಯಾಂಕ್ ಸಾಲವಾಗಿ ಕೊಟ್ಟಿದ್ದ ಹಣವನ್ನು ಸರ್ಕಾರ ಉಚಿತ ಕೊಡುಗೆಗಳಿಗೆ ಬಳಸಿದೆ ಎಂದು ಆರೋಪಿಸಿದ್ದಾರೆ
ಎರಡು ಹಂತದ ಚುನಾವಣೆಗೆ ಮುನ್ನ ರಾಜ್ಯದ ಮಹಿಳೆಯರ ಬ್ಯಾಂಕ್ ಖಾತೆಗಳಿಗೆ ತಲಾ 10,000 ರೂ. ಹಣವನ್ನು ವರ್ಗಾಯಿಸಿದ ‘ಮುಖ್ಯಮಂತ್ರಿ ಮಹಿಳಾ ರೋಜ್‌ಗಾರ್ ಯೋಜನೆ’ಯನ್ನು ಉದಯ್ ಸಿಂಗ್ ಉಲ್ಲೇಖಿಸಿದ್ದಾರೆ. ‘ಮಾದರಿ ನೀತಿ ಸಂಹಿತೆ ಇದ್ದರೂ, ಮತದಾನ ನಡೆಯುವ ಒಂದು ದಿನದ ಮೊದಲು ಜನರು ಹಣವನ್ನು ಪಡೆದಿರುವುದು ಇದ್ದದ್ದು ಇದೇ ಮೊದಲು. ಮಹಿಳೆಯರನ್ನು ಓಲೈಸಲು ಇದು ಸಾಕಾಗಿತ್ತು ಎಂದು ಟೀಕಿಸಿದ್ದಾರೆ.
ಸಾರ್ವಜನಿಕ ಹಣವನ್ನು ವೋಟ್‌ಗಾಗಿ ದುಂದುವೆಚ್ಚ ಮಾಡದೇ ಇದ್ದಿದ್ದರೆ, ಬಿಹಾರದಲ್ಲಿ ಎನ್‌ಡಿಎ ನಾಶವಾಗುತ್ತಿತ್ತು ಎಂದು ತಿಳಿಸಿದ್ದಾರೆ.